
ಫಿಫಾ ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಗಿದು, ಇದೀಗ ನಾಕೌಟ್ ರೌಂಡ್ ಶುರುವಾಗಿದೆ. ಈ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಪೂರ್ವ ನಿಗದಿಯಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂದರೆ 16 ತಂಡಗಳು ಒಂದೇ ಹಾದಿಯಲ್ಲಿ ಕಣಕ್ಕಿಳಿದರೆ, ಮತ್ತೆ ಹದಿನಾರು ತಂಡಗಳು ಇನ್ನೊಂದು ಹಾದಿಯಲ್ಲಿ ಸಾಗಲಿವೆ. ಇದರ ಬೆನ್ನಲ್ಲೇ ಅರ್ಜೆಂಟೀನಾ ತಂಡದ ನಾಕೌಟ್ ಹಾದಿ ಚರ್ಚೆಗೆ ಕಾರಣವಾಗಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿದಿದ್ದವು. ಈ ತಂಡಗಳಲ್ಲಿ ಈಗ 32 ಟೀಮ್ಗಳು ರೌಂಡ್ ಆಫ್ 32 ಅಥವಾ ನಾಕೌಟ್ ಹಂತಕ್ಕೇರಿದೆ. ನಾಕೌಟ್ ಹಂತದ ಬ್ರಾಕೆಟ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅರ್ಜೆಂಟೀನಾ ಇರುವ ಬದಿಯಲ್ಲಿ ಸಾಂಪ್ರದಾಯಿಕ ಫುಟ್‌ಬಾಲ್ ದೈತ್ಯರ ಸಂಖ್ಯೆ ತೀರಾ ಕಡಿಮೆ.
ರೌಂಡ್ ಆಫ್ 32 ಹಂತದಲ್ಲಿ ಅರ್ಜೆಂಟೀನಾ ಜುಲೈ 3 ರಂದು ಮಿಯಾಮಿಯಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದೆ. ಆ ಬಳಿಕ ರೌಂಡ್ ಆಫ್ 16ರಲ್ಲಿ ಆಸ್ಟ್ರೇಲಿಯಾ ಅಥವಾ ಈಜಿಪ್ಟ್ ಎದುರಾಗಬಹುದು. ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ಅಥವಾ ಸ್ವಿಟ್ಜರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ ಸೆಮಿಫೈನಲ್ವರೆಗೆ ಅರ್ಜೆಂಟೀನಾ ಹಾದಿ ನಿರಾಳ.
ಇನ್ನು ಸೆಮಿಫೈನಲ್ಗೇರಿದರೆ ಬ್ರೆಝಿಲ್ ಅಥವಾ ಇಂಗ್ಲೆಂಡ್ ತಂಡಗಳು ಎದುರಾಳಿಗಳಾಗಿ ಸಿಗಲಿದೆ. ಅಲ್ಲಿಯವರೆಗೆ ಯಾವುದೇ ಮಾಜಿ ವಿಶ್ವ ಚಾಂಪಿಯನ್ನರು ಮೆಸ್ಸಿ ಪಡೆಗೆ ಅಡ್ಡಬರುವುದಿಲ್ಲ ಎಂಬುದೇ ಅಚ್ಚರಿ.
ವಿಶ್ವದ ನಂಬರ್ 1 ರ್ಯಾಂಕಿಂಗ್ ಹೊಂದಿರುವ ಅರ್ಜೆಂಟೀನಾ ತಂಡವು ಸೆಮಿಫೈನಲ್ವರೆಗೆ ಯಾವುದೇ ಬಲಿಷ್ಠ ತಂಡವನ್ನು ಎದುರಿಸುತ್ತಿಲ್ಲ. ಬದಲಾಗಿ ತನಗಿಂತ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿದೆ. ಇದಕ್ಕೆ ಸಾಕ್ಷಿ ಅರ್ಜೆಂಟೀನಾ ಎದುರಾಳಿಗಳ ಪ್ರಸ್ತುತ ಫಿಫಾ ರ್ಯಾಂಕಿಂಗ್.
ಅಂದರೆ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ನಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡಿರುವ ತಂಡವನ್ನು ಎದುರಿಸುವುದು ಸೆಮಿಫೈನಲ್ನಲ್ಲಿ ಮಾತ್ರ. ಅದುವರೆಗೆ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿವೆ. ಹೀಗಾಗಿಯೇ ಈ ಬಾರಿ ಅರ್ಜೆಂಟೀನಾ ಪಡೆ ಸೆಮಿಫೈನಲ್ಗೇರುವುದು ಖಚಿತ ಎನ್ನಲಾಗುತ್ತಿದೆ.
ಅರ್ಜೆಂಟೀನಾ ಹಾದಿ ಇಷ್ಟು ಸುಲಭವಾಗಿ ಕಾಣಲು ಮುಖ್ಯ ಕಾರಣ, ಬ್ರಾಕೆಟ್‌ನ ಮತ್ತೊಂದು ಬದಿಯಲ್ಲಿ ಯೂರೋಪಿನ ಘಟಾನುಘಟಿ ತಂಡಗಳು ಮುಖಾಮುಖಿಯಾಗುತ್ತಿರುವುದು.
ಫ್ರಾನ್ಸ್, ಜರ್ಮನಿ, ಸ್ಪೇನ್, ಪೋರ್ಚುಗಲ್, ನೆದರ್ಲ್ಯಾಂಡ್ಸ್, ಕ್ರೊಯೇಷಿಯಾ ಮತ್ತು ಬೆಲ್ಜಿಯಂ ತಂಡಗಳು ಒಂದೇ ಬದಿಯಲ್ಲಿವೆ. ಇದರರ್ಥ, ಈ ಯೂರೋಪಿಯನ್ ದೈತ್ಯರು ರೌಂಡ್ ಆಫ್ 16 ಮತ್ತು ಕ್ವಾರ್ಟರ್ ಫೈನಲ್ ಹಂತಗಳಲ್ಲೇ ಪರಸ್ಪರ ಮುಖಾಮುಖಿಯಾಗಿ ಟೂರ್ನಿಯಿಂದ ಹೊರಬೀಳಲಿದ್ದಾರೆ.
ವಿಶ್ವದ ಟಾಪ್ 10 ತಂಡಗಳ ಪೈಕಿ ಬರೋಬ್ಬರಿ 5 ಸೂಪರ್ ಪವರ್ ತಂಡಗಳು (ಫ್ರಾನ್ಸ್, ಸ್ಪೇನ್, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಬೆಲ್ಜಿಯಂ) ಮತ್ತು ಅತ್ಯಂತ ಬಲಿಷ್ಠ ಜರ್ಮನಿ ತಂಡ ಇವೆಲ್ಲವೂ ನಾಕೌಟ್ ಬ್ರಾಕೆಟ್‌ನ ಒಂದೇ ಗುಂಪಿನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿಯೇ ಈ ಬ್ರಾಕೆಟ್ ಅನ್ನು ಇದೀಗ ‘ಮರಣ ಮೃದಂಗ’ ಎಂದು ವಿಶ್ಲೇಷಿಸಲಾಗುತ್ತಿದೆ.
ಇಲ್ಲಿ ಅರ್ಜೆಂಟೀನಾ ತಂಡದ ಬಲಿಷ್ಠತೆಯ ಮುಂದೆ ಉಳಿದ ತಂಡಗಳು ದುರ್ಬಲವಾಗಿ ಕಂಡರೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕೇಪ್ ವರ್ಡೆ ಅಥವಾ ಕೊಲಂಬಿಯಾ ತಂಡಗಳು ಕಾಗದದ ಮೇಲೆ ದುರ್ಬಲವಾಗಿದ್ದರೂ, ಮೈದಾನದಲ್ಲಿ ಯಾವುದೇ ಹಂತದಲ್ಲೂ ಆಘಾತ ನೀಡಬಹುದು.
ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ
ಆದಾಗ್ಯೂ, ವಿಶ್ವಕಪ್ ಇತಿಹಾಸದಲ್ಲೇ ಇಷ್ಟು ಸುಲಭವಾಗಿ ಸೆಮಿಫೈನಲ್ ಅಥವಾ ಫೈನಲ್ ತಲುಪುವ ಅವಕಾಶ ಹಾಲಿ ಚಾಂಪಿಯನ್ನರಿಗೆ ಸಿಕ್ಕಿರುವುದೇ ವಿಶೇಷ. ಈ ಅವಕಾಶವನ್ನು ಬಳಸಿ ಲಿಯೋನೆಲ್ ಮೆಸ್ಸಿ ಪಡೆ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.