ಮುಂಬೈ ಸೀನಿಯರ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದ ಅರ್ಜುನ್ ತೆಂಡೂಲ್ಕರ್

|

Updated on: Jan 02, 2021 | 10:08 PM

ಭಾರತದ ಕ್ರಿಕೆಟ್ ಟೀಮನ್ನು ಪ್ರತಿನಿಧಿಸಲು ಭಾರಿ ಶ್ರಮ ಪಡುತ್ತಿರುವ ಅರ್ಜುನ್ ತೆಂಡೂಲ್ಕರ್ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಅವರನ್ನು ಮುಂಬೈ ಸೀನಿಯರ್ ಟೀಮಿಗೆ ಆಯ್ಕೆ ಮಾಡಲಾಗಿದೆ.

ಮುಂಬೈ ಸೀನಿಯರ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದ ಅರ್ಜುನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್
Follow us on

ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಮುಂಬೈ ಸೀನಿಯರ್ ಟೀಮಿನಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನೆವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈಯನ್ನು ಪ್ರತಿನಿಧಿಸಲಿರುವ 22 ಆಟಗಾರರ ಪೈಕಿ ಅರ್ಜುನ್ ಒಬ್ಬರಾಗಿದ್ದಾರೆ.

ಅಸಲಿಗೆ, ಮೊದಲು ಆಯ್ಕೆ ಮಾಡಿದ 20 ಸದಸ್ಯರ ತಂಡದಲ್ಲಿ ಅರ್ಜುನ್​ಗೆ ಅವಕಾಶ ಕಲ್ಪಿಸಲಾಗಿರಲಿಲ್ಲ. ಆದರೆ, ಕೊವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೆ ಅಟಗಾರರ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಳ್ಳಲು ಸೂಚಿಸಿತು. ಮಂಡಳಿಯ ಸೂಚನೆ ನಂತರ ಮುಂಬೈ ಕ್ರಿಕೆಟ್ ಸಂಸ್ಥೆ ಅರ್ಜುನ್ ಮತ್ತು ಇನ್ನೊಬ್ಬ ವೇಗದ ಬೌಲರ್ ಕೃತಿಕ್ ಹನಗವಾಡಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಎಡಗೈ ಮಧ್ಯಮ ವೇಗದ ಬೌಲರ್ ಆಗಿರುವ 21-ವರ್ಷ ವಯಸ್ಸಿನ ಅರ್ಜುನ್ ಇದೇ ಮೊದಲಬಾರಿಗೆ ಮುಂಬೈನ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕೆ ಮೊದಲು ಅವರು ವಯೋಮಿತಿ ಆಧಾರಿತ ಟೂರ್ನಿಗಳಲ್ಲಿ ಆಡುತ್ತಿದ್ದರು.

ಸಚಿನ್ ಮತ್ತು ಅರ್ಜುನ್ ತೆಂಡೂಲ್ಕರ್

ಭಾರತದ ಸೀನಿಯರ್ ಟೀಮಿನ ಸದಸ್ಯರಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿದ್ದ ಅರ್ಜುನ್, ಭಾರತದ ಅಂಡರ್-19 ಟೀಮಿಗೆ ಆಯ್ಕೆಯಾಗಿ ಶ್ರೀಲಂಕಾ ಪ್ರವಾಸ ಹೋಗಿದ್ದರು. ಅವರನ್ನು ಒಬ್ಬ ಉತ್ತಮ ಬೌಲರ್ ಆಗಿ ರೂಪಿಸಲು ಸೀನಿಯರ್ ತೆಂಡೂಲ್ಕರ್ ಬಹಳಷ್ಟು ಶ್ರಮವಹಿಸಿದ್ದಾರೆ.

ಜನವರಿ 10 ರಿಂದ ಆರಂಭಗೊಳ್ಳುವ ಮುಷ್ತಾಕ್ ಅಲಿ ಟೂರ್ನಿಯು ವಿಳಂಬಿತ 2020-21 ದೇಶೀಯ ಕ್ರಿಕೆಟ್ ಋತುವಿನ ಮೊದಲ ಪಂದ್ಯಾವಳಿಯಾಗಲಿದೆ.