ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ, ಬದುಕಿಗೆ ವಿದಾಯ ಹೇಳುವವರು ಉಂಟು. ‘ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ’ ಎಂದು ಹಲುಬುತ್ತಾ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು. ಆದರೆ ಬದುಕಿನ ನೋವು ನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ. ಇಂತಹವರು ಭೋರ್ಗರೆಯುವ ನದಿಯ ಮಧ್ಯದ ಬಂಡೆಯಂತೆ ಗಟ್ಟಿಯಾಗಿ ನಿಂತಿರುತ್ತಾರೆ. ಕೆಲವೊಮ್ಮೆ ಬದುಕೇ ಇವರ ಸಾಹಸ ಮತ್ತು ಇಚ್ಛಾಶಕ್ತಿಗೆ ಮಣಿದು ಹಾದಿ ತೆರೆಯುತ್ತದೆ. ಇಂತಹ ಅಪರೂಪದ ಕೆಚ್ಚೆದೆಯ ಸಾಧಕಿ ಅರುಣಿಮಾ ಸಿನ್ಹಾ. ಅವರ ಜನ್ಮದಿನ ಇಂದು. ದೈಹಿಕ ಊನಗಳು ಇವರ ಬದುಕಿನ ಸಾಹಸಯಾತ್ರೆಯಲ್ಲಿ ಮಿತಿಯಾಗಲೇ ಇಲ್ಲ. ತಮ್ಮ ಅಂಗವಿಕಲತೆಯನ್ನು ಸವಾಲಿನಂತೆ ಎದುರಿಸಿ ಹೊಸ ಎತ್ತರವನ್ನು ಏರಿದವರು ಅರುಣಿಮಾ. ಅವರು ಏರಿ ನಿಂತರು ಎವರೆಸ್ಟ್ ಎತ್ತರದಿ! ಲೇಖಕ ಜಿ. ಕೆ. ನವೀನಕುಮಾರ್ ಅವರ ಬರಹ ನಿಮ್ಮ ಓದಿಗೆ.
*
ಒಂದು ಕರಾಳ ರಾತ್ರಿ
ಆ ದಿನ ಏಪ್ರಿಲ್ 11, 2011ರ ರಾತ್ರಿ ಅರುಣಿಮಾ ಪದ್ಮಾವತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ದೆಹಲಿಗೆ ಹೊರಟಳು. ಪರೀಕ್ಷೆಯ ಸಕಲ ಸಿದ್ಧತೆಗಳೊಂದಿಗೆ ತನ್ನೆಲ್ಲ ಅಂಕಪಟ್ಟಿ ಹಾಗೂ ಇತರ ದಾಖಲೆಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡು ಜಾಗರೂಕವಾಗಿ ಪ್ರಯಾಣಕ್ಕೆ ಹೊರಟಿದ್ದಳು.
ರೈಲು ಲಕ್ನೌ ಬಿಟ್ಟು ಹೊರಟಿತು. ಇರುಳ ಆಳದಲ್ಲಿ ಘೀಳಿಟ್ಟು ಹೊರಟ ರೈಲಿನ ವೇಗವು ಹೆಚ್ಚುತ್ತಾ ಹೊರಟಿತ್ತು. ಮಧ್ಯರಾತ್ರಿಯ ಸಮಯ, ರೈಲು ಬರೇಲಿ ಬಳಿ ಸಾಗಿತ್ತು. ಪ್ರಯಾಣಿಕರೆಲ್ಲ ಗಾಢನಿದ್ರೆಯಲ್ಲಿ ಮುಳುಗಿದ್ದರು. ಆಗಲೇ ಎಲ್ಲಿಂದಲೋ ಚೀರುವ ಧ್ವನಿ ಅರುಣಿಮಾಗೆ ಕೇಳಿಸಿತು. ಅರುಣಿಮಾ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಚೀರಾಟ ಹೆಚ್ಚಾಗಿತ್ತು. ರೈಲಿನ ಬೋಗಿಯಲ್ಲಿ ಸರಗಳ್ಳತನ ಮಾಡುವ ಕದೀಮರ ಗುಂಪೊಂದು ಎಲ್ಲರ ಕೊರಳು ಕಿವಿ ಮೂಗಿಗೆ ಕೈ ಹಾಕಿ, ಅತ್ಯಂತ ಕ್ರೂರವಾಗಿ ಚಿನ್ನದ ಆಭರಣಗಳನ್ನು ಅಪಹರಿಸುತ್ತಿದೆ! ಆಯುಧವಿದ್ದ ಆ ದರೋಡೆಕೋರರು ಏನು ಮಾಡಲೂ ಹೇಸರು ಎಂದು ಹೆದರಿದ ಪ್ರಯಾಣಿಕರು ತಮ್ಮ ಆಭರಣಗಳನ್ನು ನೀಡಿ ಭಯಭೀತರಾಗಿ ಚೀರಿಡುತ್ತಿದ್ದಾರೆ.
ಅದೇ ಸಮಯಕ್ಕೆ ದರೋಡೆಕೋರನೊಬ್ಬ ಅರುಣಿಮಾಳ ಸರಕ್ಕೆ ಕೈ ಹಾಕಲು ಬಂದ. ಬಿಸಿರಕ್ತದ ದಿಟ್ಟ ತರುಣಿಗೆ ಅಸಾಧ್ಯದ ಆಕ್ರೋಶ. ಕೋಪಗೊಂಡ ಅರುಣಿಮಾ ಅವನ ಕೈಯನ್ನು ರಭಸದಿಂದ ದೂರ ಸರಿಸಿದ್ದಳು. ಆತ ಇನ್ನೊಂದು ಕೈಯಲ್ಲಿ ಸರವನ್ನು ಕೀಳಲು ಮುಂದಾಗಿದ್ದ. ಆ ಕೈಯನ್ನೂ ಬಿರುಸಾಗಿ ದೂಡುತ್ತಾಳೆ. ಕ್ರೋಧಗೊಂಡ ಆತ ಉಳಿದವರನ್ನು ಕರೆದು ಆಕೆಯನ್ನು ಬಿಗಿದು ಹಿಡಿಯುವಂತೆ ಹೇಳುತ್ತಾನೆ. ಎಲ್ಲರೂ ಏಕಕಾಲದಲ್ಲಿ ಪುಟ್ಟ ದೇಹದ ಮೇಲೆ ಮುಗಿಬೀಳುತ್ತಾರೆ. ಆದರೆ ಆಕೆಯ ಪ್ರತಿಭಟನೆ ಮಾತ್ರ ನಿಲ್ಲುವುದಿಲ್ಲ. ಅಷ್ಟರಲ್ಲಿಯೇ ಆಕೆಯ ಕುತ್ತಿಗೆಯ ಮೇಲೆ ಬಲವಾದ ಹೊಡೆತ ಬೀಳುತ್ತದೆ. ಕದೀಮನೊಬ್ಬ ರಭಸದಿಂದ ಎತ್ತಿ ಹೊಡೆದಿದ್ದ. ಕುತ್ತಿಗೆಯೇ ಚೂರಾದ ಅನುಭವ. ಮೆದುಳು ಕ್ಷಣಕಾಲ ಕೆಲಸ ಮಾಡುವುದನ್ನೇ ನಿಲ್ಲಿಸಿದಂತೆ ಭಾಸವಾದರೂ, ಛಲಬಿಡದೆ ಅರುಣಿಮಾ ಜಗ್ಗಾಡುತ್ತಾಳೆ. ಈಗ ಮೂವರೂ ದರೋಡೆಕೋರರು ಆಕೆಯನ್ನು ದರದರನೆ ಎಳೆದು ಬಾಗಿಲ ಬಳಿ ಕೊಂಡೊಯ್ಯುತ್ತಾರೆ. ಅವರಿಂದ ಬಿಡಿಸಿಕೊಳ್ಳಲು ಆಕೆ ಶತಪ್ರಯತ್ನ ಮಾಡುತ್ತಿದ್ದಾಳೆ. ಸಹಾಯಕ್ಕೆ ಯಾರೂ ಮುಂದಾಗಿಲ್ಲ. ಹೆದರಿ ಮುದುಡಿದ ಜನ. ಒಂಟಿ ಹೆಣ್ಣಿನ ಹೋರಾಟ. ಯಾರೊಬ್ಬರೂ ರೈಲಿನ ಚೈನ್ ಎಳೆದು ನಿಲ್ಲಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ. ರೈಲು ಅತಿ ವೇಗದಲ್ಲಿ ಸಾಗುತ್ತಿದೆ. ಆಕೆಯನ್ನು ಸುತ್ತುವರೆದು ಹಿಡಿದು ನಿಂತ ದರೋಡೆಕೋರರು ಆಕೆಯ ಸರವನ್ನು ಕಿತ್ತುಕೊಂಡು ಆಕೆಯನ್ನು ಎತ್ತಿ ಚಲಿಸುವ ರೈಲಿನಿಂದ ಹೊರಗೆ ಎಸೆದುಬಿಡುತ್ತಾರೆ. ಉಳಿದ ಎಲ್ಲರೂ ದಿಗ್ಭ್ರಾಂತರಾಗಿ ನೋಡುತ್ತಿದ್ದಾರೆ, ಪ್ರತಿಭಟಿಸುವ ಧೈರ್ಯ ಮಾಡುವುದಿಲ್ಲ.
ರಭಸದಿಂದ ಸಾಗುತ್ತಿದ್ದ ರೈಲಿನಿಂದ ಹೊರಗೆ ಎಸೆಯಲ್ಪಟ್ಟ ಅರುಣಿಮಾಳ ದೇಹ ನುಚ್ಚು ನೂರಾಗಿದೆ. ಮೊದಲೇ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿತ್ತು. ಈಗಂತೂ ಆಕೆಯ ಬೆನ್ನು ಮೂಳೆ ಸಂಪೂರ್ಣವಾಗಿ ಮುರಿದು, ನಜ್ಜುಗುಜ್ಜಾಯಿತು. ಅದಲ್ಲದೆ ಆಕೆ ಎಸೆದು ಬಿದ್ದದ್ದು ಚಲಿಸುವ ರೈಲಿನ ಪಕ್ಕದಲ್ಲಿಯೇ ಹಾದು ಹೋಗುವ ಇನ್ನೊಂದು ರೈಲಿನ ಹಳಿಯ ಮೇಲೆ. ಬಿದ್ದ ಕ್ಷಣವೇ ಜ್ಞಾನ ತಪ್ಪಿ ಹೋಗಿತ್ತು. ಬಲಗಾಲಿಗೆ ಅತಿಯಾದ ಪೆಟ್ಟಾಗಿತ್ತು. ಅತ್ಯಂತ ದುರಂತದ ಘಟನೆಯೆಂದರೆ, ಆಕೆಯ ಎಡಗಾಲಿನ ಒಂದು ಭಾಗ ಹಳಿಯ ಮೇಲೆ ಬಿದ್ದಿತ್ತು. ಅದೇ ಸಮಯಕ್ಕೆ ಆ ಹಳಿಯ ಮೇಲೆ ಹಾದು ಹೋದ ಇನ್ನೊಂದು ರೈಲು, ಆಕೆಯ ಎಡಗಾಲನ್ನು ಕತ್ತರಿಸಿ ನಜ್ಜುಗುಜ್ಜಾಗಿಸಿತು. ಪ್ರಜ್ಞೆಯಿಲ್ಲದೆ ಬಿದ್ದ ಅರುಣಿಮಾಳ ದೇಹದಿಂದ ರಕ್ತ ಸುರಿದು ಹರಿದಿದೆ. ಆ ಕರಾಳ ರಾತ್ರಿ ಆಕೆಯ ಎಡಗಾಲಿನ ಮೇಲೆ ನಲವತ್ತಕ್ಕೂ ಹೆಚ್ಚು ರೈಲುಗಳು ಹಾದು ಹೋದವು !
ಕೇವಲ ಒಂದು ಗಂಟೆಯ ಹಿಂದೆ, ಭವ್ಯ ಭವಿಷ್ಯದ ನೂರು ಕನಸನ್ನು ಹೊತ್ತು ದೆಹಲಿಗೆ ಹೊರಟ ರಾಷ್ಟ್ರಮಟ್ಟದ ಆಟಗಾರ್ತಿ ರೈಲು ಹಳಿಗಳ ನಡುವೆ ಕಾಲು ಕಳೆದುಕೊಂಡು ಬದುಕುವ ಭರವಸೆ ಇಲ್ಲದೆ ನಜ್ಜುಗುಜ್ಜಾದ ದೇಹದೊಂದಿಗೆ ಬಿದ್ದಿದ್ದಳು. ಸುಮಾರು ಏಳು ಗಂಟೆಗಳ ಕಾಲ ಚೈತನ್ಯವಿಲ್ಲದೆಯೇ ಬಿದ್ದುಕೊಂಡಿದ್ದ ಅರುಣಿಮಾಳ ದೇಹವನ್ನು ಯಾರೂ ಕಂಡಂತಿರಲಿಲ್ಲ. ದೇಹದ ಬಹುಪಾಲು ರಕ್ತ ಬಸಿದುಹೋಗಿತ್ತು. ಮುಂಜಾವಿನ ಮಬ್ಬು ಬೆಳಕಲ್ಲಿ ಅತ್ತ ಹಾದು ಬಂದ ಸಿಂಧು ಕಶ್ಯಪ್ ಲಾಲ್ ಎನ್ನುವ ವ್ಯಕ್ತಿ ಆಕೆಯ ದೇಹವನ್ನು ನೋಡಿದರು. ಹತ್ತಿರ ಬಂದು ಆಕೆಯ ಸ್ಥಿತಿ ನೋಡಿದ ಆತನಿಗೆ ಮೂರ್ಛೆ ಹೋಗುವಂತಾಗಿತ್ತು. ಸಾವರಿಸಿಕೊಂಡು ಆಕೆ ಬದುಕಿದ್ದಾಳೋ ಇಲ್ಲವೋ ಎಂದು ಪರೀಕ್ಷಿಸಿ ನೋಡಿದರು. ಮೆಲು ಉಸಿರಾಟದ ಏರಿಳಿತವನ್ನು ಗಮನಿಸಿ ಕೂಡಲೇ ಸ್ಥಳೀಯರನ್ನು ಕರೆದು, ಅವರ ಸಹಾಯದಿಂದ ಆಕೆಯನ್ನು ಬರೇಲಿಯ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು.
ಆಸ್ಪತ್ರೆಯಿಂದ ತಾಯಿ ಮತ್ತು ಭಾವನಿಗೆ ವಿಷಯ ತಲುಪಿದಾಗ, ಅಮ್ಮ ಕುಸಿದು ಬಿದ್ದಿದ್ದರು. ಓಂ ಪ್ರಕಾಶ್ ಸಿನ್ಹಾರವರು ಸಾವರಿಸಿಕೊಂಡು ಕೂಡಲೇ ಬರೇಲಿಗೆ ಓಡಿಬರುತ್ತಾರೆ. ಆಗಿನ್ನೂ ಅರುಣಿಮಾಳಿಗೆ ಪ್ರಜ್ಞೆ ಬಂದಿರುವುದೇ ಇಲ್ಲ. ಕತ್ತರಿಸಿದ ಕಾಲು, ಮುರಿದ ಬೆನ್ನು ಮೂಳೆ, ದೇಹದ ಉಳಿದ ಭಾಗಗಳಿಗೆಲ್ಲ ಅತಿಯಾದ ಪೆಟ್ಟು. ಅರುಣಿಮಾ ಹೈರಾಣಾಗಿ ಮಲಗಿದ್ದಾಳೆ. ಬರೇಲಿಯ ಜಿಲ್ಲಾಸ್ಪತ್ರೆಯಲ್ಲಿ ಆಧುನಿಕ ವೈದ್ಯ ಸಲಕರಣೆಗಳು ಇಲ್ಲವಾದ್ದರಿಂದ ಬರಿಯ ಪ್ರಥಮ ಚಿಕಿತ್ಸೆಯನ್ನು ಮಾತ್ರ ನೀಡಿ ಲಕ್ನೌನಲ್ಲಿರುವ ‘ಕಿಂಗ್ ಜಾರ್ಜ್ ಮೆಡಿಕಲ್ ಆಸ್ಪತ್ರೆ’ಗೆ ಅರುಣಿಮಾಳನ್ನು ಸ್ಥಳಾಂತರಿಸಲಾಯಿತು.
ಅಲ್ಲಿಯವರೆಗೂ ಆಕೆಯ ಜೀವ ಉಳಿದದ್ದಾದರೂ ಹೇಗೆ ಎಂಬುದೇ ಅಚ್ಚರಿಯ ಪ್ರಶ್ನೆಯಾಗಿತ್ತು. ಆಕೆಯ ಸ್ಥಿತಿಯನ್ನು ಕಂಡು ವೈದ್ಯರೇ ಹೌಹಾರಿ ಹೋದರು. ಕೂಡಲೆ ಶುಶ್ರೂಷೆ ಪ್ರಾರಂಭಿಸಿದ ಕಿಂಗ್ ಜಾರ್ಜ್ ಆಸ್ಪತ್ರೆಯ ವೈದ್ಯರು ಆಕೆಯ ಎಡಗಾಲು ಜಜ್ಜಿ ಹೋದ ಪರಿಯನ್ನು ಪರಿಗಣಿಸಿ ಎಡಗಾಲನ್ನು ಮಂಡಿಯ ಕೆಳಗೆ ಸಂಪೂರ್ಣವಾಗಿ ಕತ್ತರಿಸಿದರು. ಬಲಗಾಲಿನ ಮೂಳೆಗೂ ಅತಿಯಾದ ಹೊಡೆತ ಬಿದ್ದಿದ್ದರೂ ಅದು ಉಳಿದಿತ್ತು. ಪೆಲ್ವಿಕ್ ಮೂಳೆಗೆ, ಬೆನ್ನು ಮೂಳೆಗೆ, ಕುತ್ತಿಗೆ ಭಾಗದ ಮೂಳೆಗಳಿಗೆ, ತಲೆಯ ಬುರುಡೆಗೆ ಅತಿಯಾದ ಪೆಟ್ಟಾಗಿತ್ತು. ಜೊತೆಗೆ ಮೈ ಕೈ ಮೇಲೆಲ್ಲ ತರಚಿದ ಗಾಯಗಳು. ಆಕೆಯನ್ನು ಪರೀಕ್ಷಿಸುತ್ತಾ ಹೋದಂತೆ ಅಲ್ಲಿನ ವೈದ್ಯರು ದಂಗಾಗಿ ನುಡಿದಿದ್ದರು, ‘ಇಷ್ಟೊಂದು ಹೊಡೆತ ಬಿದ್ದು, ಇಷ್ಟರ ಮಟ್ಟಿಗೆ ಜರ್ಜರಿತವಾದ ದೇಹದಲ್ಲಿ ಜೀವ ಉಳಿದ ನಿದರ್ಶನಗಳೇ ಕಡಮೆ. ಅರುಣಿಮಾ ಇನ್ನೂ ಜೀವಂತವಾಗಿದ್ದಾಳೆ ಎಂಬುದೇ ನಮಗೆ ಸೋಜಿಗ’. ‘ಈಕೆ ಬದುಕಿ ಉಳಿಯುವ ಸಾಧ್ಯತೆ ಅತಿ ಕಡಮೆ ಇದೆ. ಕಾದು ನೋಡೋಣ’ ಎಂದು ಯಾವ ಭರವಸೆ ನೀಡದೆ ಹೇಳಿದ್ದರು.
ಅರುಣಿಮಾಳ ತಾಯಿಯ ಪರಿಸ್ಥಿತಿಯಂತೂ ಹೇಳಲಾಗದು. ತನ್ನ ಕರುಳಿನ ಕುಡಿ ತನ್ನ ಕಣ್ಣೆದುರಿಗೇ ಜೀವಂತ ಶವವಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಬಿದ್ದಿರುವುದನ್ನು ನೋಡಿ ಆ ತಾಯಿಯ ಎದೆ ಒಡೆದು ಹೋಗಿತ್ತು. ತಮ್ಮೊಡಲ ದುಃಖವನ್ನು ಅಮುಕಿಟ್ಟು, ಮಗಳಿಗಾಗಿ ಧೈರ್ಯ ತೆಗೆದುಕೊಂಡು ಆಕೆಗೆ ಪ್ರಜ್ಞೆ ಬರುವುದನ್ನೇ ಕಾಯುತ್ತಾ ಕುಳಿತರು. ಇಷ್ಟರಲ್ಲಾಗಲೇ ಮಾಧ್ಯಮಗಳಿಗೆ ಮಾಹಿತಿ ತಲುಪಿ, ವಿಷಯ ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೂ ರೈಲ್ವೆ ಇಲಾಖೆ ಮಾತ್ರ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿತ್ತು.
ಶಸ್ತ್ರಚಿಕಿತ್ಸೆ ನಡೆದ ಹಲವು ಗಂಟೆಗಳ ನಂತರ ಅರುಣಿಮಾಳಿಗೆ ಪ್ರಜ್ಞೆ ಬಂದಿತು. ಪ್ರಜ್ಞೆ ಬಂದು ಪರಿಸ್ಥಿತಿಯ ಅರಿವು ಅರೆಬರೆಯಾಗಿ ಮೂಡಿದಾಗ, ಆಕೆಯ ಮನಸ್ಸು ಸಂಪೂರ್ಣವಾಗಿ ಉಡುಗಿ ಹೋಯಿತು. ‘ಎಲ್ಲಿದ್ದೇನೆ ನಾನು ?’ ಅರ್ಥೈಸಿಕೊಳ್ಳುವುದೂ ಕಷ್ಟವಿತ್ತು. ನಡೆದ ಘಟನೆಗಳು ನಿಧಾನವಾಗಿ ಸ್ಮೃತಿಪಟಲದ ಮೇಲೆ ಮೂಡಿಬಂದವು. ರಾತ್ರಿಯ ರೈಲು ಪ್ರಯಾಣ, ದರೋಡೆಕೋರರು ತನ್ನನ್ನು ಹಿಡಿದು ಜಗ್ಗಾಡಿದ್ದು, ಎತ್ತಿ ಹೊರಗೆ ಎಸೆದದ್ದು, ಅದರಾಚೆಗೆ ನೆನಪಿಲ್ಲ. ನಾನೀಗ ಆಸ್ಪತ್ರೆಯಲ್ಲಿದ್ದೇನೆ. ಎದುರಲ್ಲಿ ಅಗಾಧ ನೋವಿನಲ್ಲಿ ನಿಂತ ತಾಯಿಯ ಮುಖ, ಆಕೆಯ ದುಃಖತಪ್ತ ಕಂಬನಿ ತುಂಬಿದ ಕಣ್ಣುಗಳು ಅರುಣಿಮಾಳಿಗೆ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ನೀಡಿದ್ದವು. ತನ್ನ ಕೈ ಕಾಲುಗಳನ್ನು ಅಲುಗಾಡಿಸಲು ಪ್ರಯತ್ನಿಸಿದಳು. ಚಲಿಸಲು ಕಡುಕಷ್ಟವಾಗುತ್ತಿದೆ. ಅಂದರೆ ದೇಹ ಸಂಪೂರ್ಣವಾಗಿ ಜರ್ಜರಿತವಾಗಿ ಹೋಗಿದೆ ಎಂದು ಮೆಲ್ಲನೆ ಆಕೆಗೆ ಅರಿವಾಗುತ್ತದೆ. ಸ್ವಲ್ಪ ಸಮಯದ ನಂತರ ದೇಹದ ಚಲನೆಯ ಮೇಲೆ ಸ್ವಲ್ಪ ಮಟ್ಟದ ಸ್ವಾಧೀನ ಸಾಧಿಸಿದಂತೆ ಅನಿಸುತ್ತದೆ. ಆಗಲೇ ಆಕೆಗೆ ಅರಿವಾಗುವುದು ತನ್ನ ಎಡಗಾಲನ್ನು ಕತ್ತರಿಸಲಾಗಿದೆ ಎಂದು. ತನ್ನ ಓಟದ ಕಾಲು, ಸತತ ಅಭ್ಯಾಸದಲ್ಲಿ, ಪ್ರಯತ್ನದಲ್ಲಿ, ಪ್ರಯಾಸದಲ್ಲಿ ಸದೃಢಗೊಳಿಸಿದ ಕ್ರೀಡಾಪಟುವಿನ ಕಾಲು, ಕಾಲ್ಚೆಂಡಿನಾಟದಲ್ಲಿ ಶರವೇಗದಲ್ಲಿ ಓಡಿ ಚಿಮ್ಮುತ್ತಿದ್ದ ಕಾಲು ಕಡಿದು ಹೋಗಿತ್ತು. ಅದರೊಡನೆ ಆ ಕ್ಷಣ ಅವಳೆಲ್ಲ ಭವಿಷ್ಯದ ಕನಸುಗಳೂ ಕತ್ತರಿಸಿದಂತೆ ಕಂಡಿತ್ತು. ಈಗಂತೂ ಆಕೆಯ ಮನಸ್ಥಿತಿಯನ್ನು ವಿವರಿಸಲು ಸಾಧ್ಯವಿರಲಿಲ್ಲ. ದುಃಖ ಉಮ್ಮಳಿಸಿ ಬಂದು ನೋವಿನ ಕಟ್ಟೆಯೊಡೆದು ಬಿಕ್ಕಿ ಬಿಕ್ಕಿ ಅತ್ತಳು. ಕಂಬನಿಗಳು ಬತ್ತಿ, ‘ಅಯ್ಯೋ ವಿಧಿಯೇ’ ಅನಿಸಿ, ಸುಮ್ಮನೆ ಆಸ್ಪತ್ರೆಯ ಸೂರು ನೋಡುತ್ತಾ ಮಲಗಿಬಿಟ್ಟಳು. ಏಕಾಯಿತು, ಹೀಗೇಕಾಯಿತು ನನ್ನೊಡನೆ ? ನನಗೆ ಈ ಶಿಕ್ಷೆ ಏಕೆ ಭಗವಂತ ಕೇಳಬೇಕೆನಿಸುತ್ತದೆ, ಆದರೆ ಕೇಳಲಾಗುವುದಿಲ್ಲ.
ಅಗಾಧ ನೋವಿನಲ್ಲಿ, ಆಘಾತದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿ ದಿನ ಕಳೆಯುತ್ತದೆ. ಈಗ ಕೊಂಚ ಆಕೆಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಆಗಲೇ ವೈದ್ಯರಿಗೆ ಅವಳ ಪ್ರಾಣ ಖಂಡಿತವಾಗಿಯೂ ಉಳಿಯುವುದು ಎಂಬ ಭರವಸೆ ಮೂಡಿದ್ದು. ಅಲ್ಲಿಯವರೆಗೂ ‘ಏನು ಹೇಳಲೂ ಸಾಧ್ಯವಿಲ್ಲ’ ಎಂಬುದೇ ವೈದ್ಯರ ನುಡಿಯಾಗಿತ್ತು. ಅರುಣಿಮಾಳ ತಾಯಿ ದುಃಖವನ್ನು ಅದುಮಿಟ್ಟು ಮಗಳ ಸೇವೆಗೆ ನಗುಮೊಗದಲ್ಲಿ ನಿಲ್ಲುತ್ತಾರೆ. ಭಾವ ಓಂಪ್ರಕಾಶ್ ಸಿನ್ಹಾರಂತೂ ಅರುಣಿಮಾಳನ್ನು ಯಾವಾಗಲೂ ನಗಿಸುತ್ತಲೆ ಇರುವ ಪ್ರಯತ್ನ ಮಾಡುತ್ತಾರೆ, ‘ನಿನಗೇನೂ ಆಗಿಲ್ಲ ಮಗು. ಜೀವನದಲ್ಲಿ ನಿನಗಿಂತಲೂ ಹೆಚ್ಚು ನೋವನ್ನು, ಕಷ್ಟವನ್ನು ಬೆನ್ನಿಗೆ ಕಟ್ಟಿಕೊಂಡು ಬದುಕು ಮಾಡುವವರಿದ್ದಾರೆ’ ಎಂದೆಲ್ಲ ಸಾಂತ್ವನದ ಧೈರ್ಯದ ನುಡಿಗಳನ್ನಾಡುತ್ತಾರೆ. ಯಾವುದೇ ಕಾರಣಕ್ಕೂ ಆಕೆ ಎದೆಗುಂದದೆ ಇರುವಂತೆ ಆತ್ಮಸ್ಥೈರ್ಯವನ್ನು ತುಂಬುತ್ತಾರೆ.
(ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ‘ಒಂಟಿ ಕಾಲಿನ ಎವರೆಸ್ಟ್ ಸಾಹಸಿ-ಅರುಣಿಮಾ ಸಿನ್ಹಾ’ ಪುಸ್ತಕದ ಆಯ್ದ ಭಾಗ)
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ
Published On - 12:58 pm, Tue, 20 July 21