ಏಷ್ಯನ್ ಗೇಮ್ಸ್ (Asian Games 2023) ಹಾಕಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತ ಈ ಕ್ರೀಡಾಕೂಟದಲ್ಲಿ 100 ಪದಕಗಳನ್ನು ಗೆಲ್ಲುವುದು ಕೂಡ ಖಚಿತವಾಗಿದೆ. ಭಾರತವು ಈ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಇದುವರೆಗೆ 95 ಪದಕಗಳನ್ನು ಗೆದ್ದಿದ್ದು, ಪದಕಗಳ ಶತಕ ಪೂರೈಸಲು ಇನ್ನು 5 ಪದಕಗಳ ಅವಶ್ಯಕತೆ ಇದೆ. ಆದರೆ ಈಗಾಗಲೇ ಈ 5 ಪದಕಗಳು ಭಾರತಕ್ಕೆ ಖಾತೆಗೆ ಬೀಳುವುದು ಖಚಿತವಾಗಿದೆ. ಏಷ್ಯನ್ ಗೇಮ್ಸ್‌ನ 13ನೇ ದಿನದಂದು ಸೋನಮ್ (Sonam Malik) ಹಾಗೂ ಕಿರಣ್ ಬಿಷ್ಣೋಯ್ (Kiran Bishnoi) ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದರೆ, ಭಾರತೀಯ ಪುರುಷರ ತಂಡವು ಬ್ರಿಡ್ಜ್‌ನಲ್ಲಿ ಬೆಳ್ಳಿ ಗೆದ್ದು ದಿನದ ಏಳನೇ ಪದಕವನ್ನು ಗೆದ್ದುಕೊಂಡಿತು.
ಇನ್ನು ಏಷ್ಯನ್ ಗೇಮ್ಸ್‌ನ 11 ನೇ ದಿನದಂದು 12 ಪದಕಗಳನ್ನು ಗೆಲ್ಲುವ ಮೂಲಕ ಭಾರತ 70 ಪದಕಗಳ ಗಡಿ ದಾಟಿತ್ತು. ಆದರೆ ಇದೀಗ ಶತಕದ ಗಡಿಯನ್ನು ತಲುಪುವ ಮೂಲಕ ‘ಅಬ್ ಕಿ ಬಾರ್, 100 ಪಾರ್’ ಧ್ಯೇಯವಾಕ್ಯವನ್ನು ಭಾರತದ ಸ್ಪರ್ಧಿಗಳು ನಿಜವಾಗಿಸಿದ್ದಾರೆ.
Breaking: ಏಷ್ಯನ್ ಗೇಮ್ಸ್‌ನಲ್ಲಿ ಜಪಾನ್ ಮಣಿಸಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಹಾಕಿ ತಂಡ..!
ಅಥ್ಲೀಟಿಕ್ಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಅಥ್ಲೀಟ್ಗಳು 6 ಚಿನ್ನ, 14 ಬೆಳ್ಳಿ ಮತ್ತು ಒಂಬತ್ತು ಕಂಚು ಸೇರಿದಂತೆ 29 ಪದಕಗಳೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದರು. ಇದರಲ್ಲಿ ನೀರಜ್ ಚೋಪ್ರಾ (ಪುರುಷರ ಜಾವೆಲಿನ್), ಅಣ್ಣು ರಾಣಿ (ಮಹಿಳೆಯರ ಜಾವೆಲಿನ್), ತಜಿಂದರ್‌ಪಾಲ್ ಸಿಂಗ್ ತೂರ್ (ಪುರುಷರ ಶಾಟ್‌ಪುಟ್), ಅವಿನಾಶ್ ಸೇಬಲ್ (ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್), ಪಾರುಲ್ ಚೌಧರಿ (ಮಹಿಳೆಯರ 5000 ಮೀ) ಮತ್ತು ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ (ಪುರುಷರ 4×400 ಮೀ ರಿಲೇ) ಆರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಏತನ್ಮಧ್ಯೆ, ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ ಒಟ್ಟು 22 ಪದಕಗಳೊಂದಿಗೆ ಭಾರತೀಯ ಶೂಟರ್‌ಗಳು ಮನೆಗೆ ಮರಳಿದ್ದರು. ಇದೀಗ ಪುರುಷರ ಕ್ರಿಕೆಟ್ ತಂಡ ಫೈನಲ್ ತಲುಪಿದ್ದು ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ಪ್ರವೇಶಿಸಿರುವುದರಿಂದ ಕನಿಷ್ಠ ಕಂಚಿನ ಪದಕ ಗೆಲ್ಲುವುದು ಖಚಿತವಾಗಿದೆ.
2023 ರ ಆವೃತ್ತಿಯ ಮೊದಲು ಏಷ್ಯನ್ ಗೇಮ್ಸ್‌ನಲ್ಲಿ ಭಾರತ, 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಯ 70 ಪದಕಗಳನ್ನು ಗೆದ್ದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕಗಳನ್ನು ಗೆದ್ದಿರುವುದು ಭಾರತದ ಹಿರಿಮೆಯನ್ನು ಹೆಚ್ಚಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Fri, 6 October 23