AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ 2 ನಿಮಿಷಗಳಲ್ಲಿ 8 ಅಂಕ..! ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು ಸುಜೀತ್

ಏಷ್ಯನ್ ಕ್ರೀಡಾಕೂಟದ 13ನೇ ದಿನ ಭಾರತಕ್ಕೆ ಚಿನ್ನದ ಪದಕಗಳ ಸುರಿಮಳೆಯಾಗಿದೆ. ಸುಜೀತ್ ಕಲ್ಕಲ್ ಪುರುಷರ ಕುಸ್ತಿಯಲ್ಲಿ ಅದ್ಭುತ ಪುನರಾಗಮನ ಮಾಡಿ ಚಿನ್ನ ಗೆದ್ದರು. 2-9 ಅಂಕಗಳಿಂದ ಹಿಂದಿದ್ದ ಸುಜೀತ್ 10-9 ಅಂತರದಿಂದ ವಿಜೇತರಾದರು. ಇದಕ್ಕೂ ಮೊದಲು, ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕಗಳು ಲಭಿಸಿವೆ. ಭಾರತದ ಕ್ರೀಡಾಪಟುಗಳ ಬಂಗಾರದ ಭೇಟೆ ಮುಂದುವರಿದಿದೆ.

ಕೊನೆಯ 2 ನಿಮಿಷಗಳಲ್ಲಿ 8 ಅಂಕ..! ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು ಸುಜೀತ್
Sujeet Kalkal
ಪೃಥ್ವಿಶಂಕರ
|

Updated on:Oct 02, 2026 | 4:09 PM

Share

ಏಷ್ಯನ್ ಕ್ರೀಡಾಕೂಟದ 13ನೇ ದಿನದಂದು ಭಾರತದ ಸ್ಪರ್ಧಿಗಳಿಂದ ಬಂಗಾರದ ಭೇಟೆ ಜೋರಾಗಿದೆ. ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 2 ಚಿನ್ನದ ಪದಕಗಳು ಸಿಕ್ಕರೆ, ಇದೀಗ ಭಾರತದ ಸುಜೀತ್ ಕಲ್ಕಲ್ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಸುಜೀತ್ ತಜಕಿಸ್ತಾನದ ಅಬ್ದುಲ್ಮಜೀದ್ ಕುಡಿಯೀವ್ ಅವರನ್ನು 10-9 ಅಂತರದಿಂದ ಸೋಲಿಸುವ ಮೂಲಕ ಚಿನ್ನ ಗೆದ್ದರು. ಒಂದು ಹಂತದಲ್ಲಿ ಸುಜೀತ್ 2-9 ಅಂತರದಿಂದ ಹಿಂದುಳಿದಿದ್ದರು, ಆದರೆ ಕೊನೆಯ ಎರಡು ನಿಮಿಷಗಳಲ್ಲಿ ಅದ್ಭುತ ಪುನರಾಗಮನ ಮಾಡಿದ ಸುಜೀತ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣ ಬದಲಾಯಿಸಿದರು.

ಸೋಲಿನ ಸುಳಿಗೆ ಸಿಲುಕಿದ್ದ ಸುಜೀತ್

ಮೊದಲ ಸುತ್ತಿನ ನಂತರ, ಸುಜೀತ್ 2-4 ಅಂತರದಿಂದ ಹಿಂದುಳಿದಿದ್ದರು. ಎರಡನೇ ಸುತ್ತಿನಲ್ಲಿಯೂ ತಜಕಿಸ್ತಾನದ ಕುಸ್ತಿಪಟು ತನ್ನ ಮುನ್ನಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದರು. ಹೀಗಾಗಿ ಒಂದು ಹಂತದಲ್ಲಿ ಸ್ಕೋರ್ 9-2 ಆಗಿತ್ತು. ಇದರಿಂದ ಪಂದ್ಯವು ಸುಜೀತ್ ಕೈಯಿಂದ ಜಾರಿಹೋಗುತ್ತಿರುವಂತೆ ಕಾಣುತ್ತಿತ್ತು. ಆದರೆ ಸುಲಭವಾಗಿ ಸೋಲೊಪ್ಪಿಕೊಳ್ಳದ ಸುಜೀತ್ ಕೊನೆಯ ಎರಡು ನಿಮಿಷಗಳಲ್ಲಿ ಅದ್ಭುತ ಪುನರಾಗಮನ ಮಾಡಿದರು. ನಾಲ್ಕು ಟೇಕ್‌ಡೌನ್‌ಗಳನ್ನು ಮಾಡಿದ ಸುಜಿತ್ ಪ್ರತಿ ಟೇಕ್‌ಡೌನ್‌ನಿಂದ ಎರಡು ಅಂಕಗಳನ್ನು ಸಂಪಾಧಿಸಿದರು. ಈ ಮೂಲಕ ಪಂದ್ಯವನ್ನು 8-9ಕ್ಕೆ ಕೊಂಡೊಯ್ದರು.

ಕೊನೆಯ 10 ಸೆಕೆಂಡುಗಳ ರೋಚಕತೆ

ಪಂದ್ಯ ಮುಗಿಯಲು ಕೆಲವೇ ಸೆಕೆಂಡ್​ಗಳು ಬಾಕಿ ಉಳಿದಿದ್ದವು. ಇತ್ತ ತಜಕಿಸ್ತಾನ್ ಕುಸ್ತಿಪಟು ಒಂದು ಪಾಯಿಂಟ್ ಮುನ್ನಡೆ ಹೊಂದಿದ್ದರಿಂದ ಈ ಪಂದ್ಯವನ್ನು ಗೆಲ್ಲಲು ಸುಜಿತ್‌ಗೆ ನಿರ್ಣಾಯಕ ನಡೆಯ ಅಗತ್ಯವಿತ್ತು. ಅದರಂತೆ ಪಂದ್ಯದ ಕೊನೆಯ 10 ಸೆಕೆಂಡುಗಳಲ್ಲಿ, ಸುಜೀತ್ ಮತ್ತೊಂದು ಟೇಕ್‌ಡೌನ್ ಗಳಿಸಿದರು ಅದರಿಂದ ಎರಡು ಅಂಕಗಳನ್ನು ಗಳಿಸಿದ ಸುಜಿತ್ ಸ್ಕೋರ್ ಅನ್ನು 10-9 ಕ್ಕೇರಿಸಿದರು. ಹೀಗಾಗಿ 9-2 ಅಂಕಗಳಿಂದ ಹಿಂದುಳಿದಿದ್ದ ಸುಜೀತ್ ಅಂತಿಮವಾಗಿ ಪಂದ್ಯವನ್ನು 10-9 ಅಂಕಗಳಿಂದ ಗೆದ್ದುಕೊಂಡರು.

ಏಷ್ಯನ್ ಗೇಮ್ಸ್ 2026: ಜನ್ಮ ದಿನದಂದೇ ಬಂಗಾರ ಗೆದ್ದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್

ಸುಜೀತ್ ಸಾಧನೆ

65 ಕೆಜಿ ವಿಭಾಗದಲ್ಲಿ ಸುಜೀತ್ 20 ವರ್ಷದೊಳಗಿನವರ ಮತ್ತು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2025 ರಲ್ಲಿ ಸೆರ್ಬಿಯಾದ ನೋವಿ ಸ್ಯಾಡ್‌ನಲ್ಲಿ ನಡೆದ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನ ಗೆದ್ದಿದ್ದ ಸುಜೀತ್ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಉಮಿಡ್ಜಾನ್ ಜಲೋಲೋವ್ ಅವರನ್ನು 10-0 ಅಂತರದಿಂದ ಸೋಲಿಸಿದ್ದರು. ಇನ್ನು 2026 ರಲ್ಲಿ, ಸುಜೀತ್ ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನ ಗೆದ್ದಿದ್ದಾರೆ. ಗ್ರ್ಯಾಂಡ್ ಪ್ರಿಕ್ಸ್ ಮತ್ತು ರ‍್ಯಾಂಕಿಂಗ್ ಸರಣಿಯಲ್ಲಿಯೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈಗ ಏಷ್ಯನ್ ಗೇಮ್ಸ್​ನಲ್ಲೂ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Fri, 2 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More