ಮುಂಬೈ: ಭಾರತದಲ್ಲಿ ಕ್ರಿಕೆಟ್ ಎಂಬ ಪದಕ್ಕೆ ಪರ್ಯಾಯವಾಗುವಷ್ಟು ದೈತ್ಯನಾಗಿ ಬೆಳೆದ, ಅಭಿಮಾನಿಗಳ ಪಾಲಿಗೆ ಅಕ್ಷರಶಃ ಕ್ರಿಕೆಟ್ ದೇವರಾಗಿ ಕಂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 31 ವರ್ಷಗಳಾಗಿವೆ. ನವೆಂಬರ್ 15, 1989ರಂದು ಕರಾಚಿಯ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದ ಮೂಲಕ ತನ್ನ 16ನೇ ವಯಸ್ಸಿನಲ್ಲೇ ಭಾರತದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಚಿನ್ ಇಂದಿಗೂ ಆ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಸಚಿನ್ ಕಿರಿಯನೆಂಬ ಕಾರಣಕ್ಕೆ ತುಂಬಾ ಅವಮಾನ ಅನುಭವಿಸಿದರೂ ನಂತರ ಅವಮಾನಿಸಿದವರೆಲ್ಲರೂ ಕಣ್ಣರಳಿಸಿ ನೋಡುವಂತೆ ಸಾಧಿಸಿದ ಸಚಿನ್ ಇದೀಗ ಪ್ರತಿಯೊಬ್ಬರಿಗೂ ಮಾದರಿ. ಮೊದಲ ಆಟದಲ್ಲಿ ಕೇವಲ 15 ರನ್ ಗಳಿಸಿ ನಿರಾಸೆ ಅನುಭವಿಸಿದ್ದ ತೆಂಡೂಲ್ಕರ್ ಕೆಲವೇ ಕೆಲವು ವರ್ಷಗಳಲ್ಲಿ ಇಡೀ ತಂಡಕ್ಕೆ ಆಧಾರ ಸ್ತಂಭವಾಗಿ ಮಾರ್ಪಟ್ಟರು. ತನ್ನ ವೃತ್ತಿ ಜೀವನದಲ್ಲಿ 34 ಸಾವಿರಕ್ಕೂ ಅಧಿಕ ರನ್ ಗಳಿಸುವ ಮೂಲಕ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮ್ಯನ್ ಎಂಬ ಬಿರುದಿಗೆ ಪಾತ್ರರಾದರು.
ಐಪಿಎಲ್ನಲ್ಲಿ ಮುಂಬೈ ತಂಡದಲ್ಲಿ ಆಡಿ ನಂತರ ಅದೇ ತಂಡದ ಮಾರ್ಗದರ್ಶಕರೂ ಆಗಿ ಕಾರ್ಯನಿರ್ವಹಿಸಿದ ಸಚಿನ್ ನಿವೃತ್ತಿಯ ನಂತರವೂ ಅಭಿಮಾನಿಗಳ ಪಾಲಿಗೆ ದೇವರಾಗಿಯೇ ಉಳಿದಿದ್ದಾರೆ. ಸಚಿನ್ ಅಂತಾರಾಷ್ಟೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ದಿನವನ್ನು ಸ್ಮರಿಸಿ ಬಿಸಿಸಿಐ ಟ್ವೀಟ್ ಮಾಡಿದ್ದು ಅವರು 2013ರಲ್ಲಿ ಕಟ್ಟಕಡೆಯ ಬಾರಿಗೆ ಭಾರತದ ಪರವಾಗಿ ಆಡಿದ್ದನ್ನೂ ಟ್ವೀಟ್ನಲ್ಲಿ ಉಲ್ಲೇಖಿಸಿದೆ.
#OnThisDay ?️
1989 – @sachin_rt made his debut in international cricket
2013 – The legend walked out to bat for #TeamIndia ?? one final timeThank you for inspiring billions across the globe. ?? pic.twitter.com/fF4TzH7O44
— BCCI (@BCCI) November 15, 2020