
ಫಿಫಾ ವಿಶ್ವಕಪ್ 2026ರ ರೌಂಡ್ ಆಫ್-32 ಸುತ್ತಿನ 2ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ರೋಚಕ ಜಯ ಸಾಧಿಸಿದೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಈ ನಾಕೌಟ್ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಜಪಾನ್ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಮ್ಯಾಚ್ನಲ್ಲಿ ಮೊದಲ ಗೋಲು ಬಾರಿಸಿದ್ದು ಜಪಾನ್. ಆದರೆ ಪಂದ್ಯ ಗೆದ್ದಿದ್ದು ಬ್ರೆಝಿಲ್ ಎಂಬುದು ವಿಶೇಷ.
ಈ ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರರು ಬ್ರೆಝಿಲ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪಂದ್ಯದ 29ನೇ ನಿಮಿಷದಲ್ಲಿ ಬ್ರೆಝಿಲ್‌ನ ಡ್ಯಾನಿಲೋ ಮಾಡಿದ ಸಣ್ಣ ತಪ್ಪನ್ನು ಬಳಸಿಕೊಂಡ ಜಪಾನ್‌ನ ಕೈಶು ಸಾನೊ, ಬ್ರೆಝಿಲ್ ಗೋಲ್‌ಕೀಪರ್ ಅಲಿಸನ್ ಬೆಕರ್ ಅವರನ್ನು ವಂಚಿಸಿ ಮೊದಲ ಗೋಲ್ ಬಾರಿಸಿದರು. ಈ ಮೂಲಕ ಜಪಾನ್ ತಂಡವು ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ಪಂದ್ಯದ ಗತಿಯನ್ನು ಬದಲಿಸಲು ಬ್ರೆಝಿಲ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಹೊಸ ತಂತ್ರ ರೂಪಿಸಿದರು. ಪಂದ್ಯದ 56ನೇ ನಿಮಿಷದಲ್ಲಿ ಕಾರ್ನರ್ ಕಿಕ್ ಮೂಲಕ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅನುಭವಿ ಆಟಗಾರ ಕ್ಯಾಸೆಮಿರೊ, ತಲೆಯಿಂದ ಚೆಂಡನ್ನು ಜಪಾನ್ ನೆಟ್‌ಗೆ ತಳ್ಳುವ ಮೂಲಕ 1-1 ಗೋಲುಗಳ ಸಮಬಲ ತಂದರು.
ಉಭಯ ತಂಡಗಳ ಗೋಲು 1-1 ಅಂತರದಿಂದ ಸಮಗೊಳ್ಳುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿತು. ಇದಾಗ್ಯೂ ಎರಡೂ ತಂಡಳಿಗೆ ಎರಡನೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯ ಮುಕ್ತಾಯದ ಹಂತಕ್ಕೆ ಬಂದಾಗಲೂ ಉಭಯ ತಂಡಗಳು 1-1 ಸಮಬಲದಲ್ಲಿದ್ದವು.
ಆದರೆ, ಇಂಜುರಿ ಟೈಮ್‌ನ 95ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ರಿಸೀವ್ ಮಾಡಿದ ಗೇಬ್ರಿಯಲ್ ಮಾರ್ಟಿನೆಲ್ಲಿ, ಜಪಾನ್ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲ್ ಬಾರಿಸಿದರು. ಈ ಕೊನೆಯ ಕ್ಷಣದ ಗೋಲ್ ಇಡೀ ಕ್ರೀಡಾಂಗಣದಲ್ಲಿದ್ದ ಬ್ರೆಝಿಲ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಪಂದ್ಯ ಕೊನೆಗೊಳ್ಳಲು ನಿಮಿಷಗಳು ಮಾತ್ರ ಬಾಕಿ ಇರುವಾಗ ಮೂಡಿಬಂದ ಈ ಗೋಲಿನೊಂದಿಗೆ ಬ್ರೆಝಿಲ್ ತಂಡವು 2-1 ಅಂತರದಿಂದ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ
ಈ ರೋಚಕ ಗೆಲುವಿನೊಂದಿಗೆ ಬ್ರೆಝಿಲ್ ತಂಡ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ. ಜುಲೈ 5 ರಂದು ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಬ್ರೆಝಿಲ್ ತಂಡವು ನಾರ್ವೆ ಅಥವಾ ಐವರಿ ಕೋಸ್ಟ್ ತಂಡವನ್ನು ಎದುರಿಸಲಿದೆ.