ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯ 37ನೇ ಪಂದ್ಯದಲ್ಲಿ ಹಾಫೆನ್‌ಹೈಮ್ ತಂಡ ಭರ್ಜರಿ ಜಯ ಸಾಧಿಸಿದೆ. ಶುಕ್ರವಾರ ಡೈಟ್ಮಾರ್-ಹಾಪ್-ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾಫೆನ್‌ಹೈಮ್ ಮತ್ತು ಪಾಟ್ಸ್‌ಡ್ಯಾಮ್ ತಂಡಗಳು ಮುಖಾಮುಖಿಯಾಗಿದ್ದವು.
ಆರಂಭದಿಂದಲೇ ಏಕಪಕ್ಷೀಯವಾಗಿ ಸಾಗಿದ್ದ ಈ ಪಂದ್ಯದಲ್ಲಿ ಹಾಫೆನ್‌ಹೈಮ್ ಮಹಿಳೆಯರು ಎಲ್ಲಾ ಹಂತದಲ್ಲೂ ಮೇಲುಗೈ ಸಾಧಿಸಿದ್ದರು. ಪರಿಣಾಮ 21ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಎರೆಟಾ ಮೆಮೆಟಿ ಯಶಸ್ವಿಯಾದರು.
ಇದರ ಬೆನ್ನಲ್ಲೇ 34ನೇ ನಿಮಿಷದಲ್ಲಿ ಜಿಯಾ ಕಾರ್ಲೆ ಮತ್ತೊಂದು ಗೋಲು ಬಾರಿಸಿದರು. ಇನ್ನು 36ನೇ ನಿಮಿಷದಲ್ಲಿ ಕಾರ್ಲೆ ನೀಡಿದ ಅತ್ಯುತ್ತಮ ಪಾಸ್ ಅನ್ನು ಗೋಲು ಬಲೆಯೊಳಗೆ ತಲುಪಿಸುವಲ್ಲಿ ಮೆಲಿಸ್ಸಾ ಕೋಸ್ಲರ್ ಯಶಸ್ವಿಯಾದರು.
ಮೊದಲಾರ್ಧದಲ್ಲೇ 3-0 ಅಂತರದಿಂದ ಮುನ್ನಡೆ ಸಾಧಿಸಿದ ಹಾಫೆನ್‌ಹೈಮ್ ತಂಡವು ದ್ವಿತೀಯಾರ್ಧದಲ್ಲೂ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಅತ್ತ ಹಾಫೆನ್‌ಹೈಮ್ ಸಾಂಘಿಕ ಪ್ರದರ್ಶನ ನೀಡುತ್ತಿದ್ದರೆ, ಇತ್ತ ಪಾಟ್ಸ್‌ಡ್ಯಾಮ್ ಆಟಗಾರ್ತಿಯರು ಒತ್ತಡಕ್ಕೊಳಗಾಗಿ ತಪ್ಪುಗಳ ಮೇಲೆ ತಪ್ಪುಗಳನ್ನು ಎಸೆಗಿದರು.
ಇದರ ಸಂಪೂರ್ಣ ಲಾಭ ಪಡೆದ ಹಾಫೆನ್‌ಹೈಮ್ ಆಟಗಾರ್ತಿ ಜೂಲಿಯಾ 63ನೇ ನಿಮಿಷದಲ್ಲಿ 4ನೇ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಮೆಲಿಸ್ಸಾ ಕೋಸ್ಲರ್ (64ನೇ ನಿಮಿಷ) ಮತ್ತೊಂದು ಗೋಲು ದಾಖಲಿಸಿ ಗೋಲುಗಳ ಸಂಖ್ಯೆಯನ್ನು 5 ಕ್ಕೇರಿಸಿದರು.
ಇನ್ನು 67ನೇ ನಿಮಿಷದಲ್ಲಿ ಅತ್ಯುತ್ತಮವಾಗಿ ಮುನ್ನುಗ್ಗಿದ ಜಿಯಾ ಕಾರ್ಲೆ ಗೋಲ್ ಕೀಪರ್ನನ್ನು ವಂಚಿಸಿ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು. ಈ ಮೂಲಕ ಹಾಫೆನ್‌ಹೈಮ್ ತಂಡವು ಪಾಟ್ಸ್‌ಡ್ಯಾಮ್ ವಿರುದ್ಧ 6-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಹಾಫೆನ್‌ಹೈಮ್ ತಂಡವು ಬುಂಡೆಸ್‌ಲಿಗಾ ಮಹಿಳಾ ಟೂರ್ನಿಯ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನು ಆಡಿರುವ 6 ಮ್ಯಾಚ್ಗಳಲ್ಲಿ 5 ಗೆಲುವು ಹಾಗೂ 1 ಡ್ರಾ ಸಾಧಿಸಿರುವ ಐಂಟ್ರಾಕ್ಸ್ ಫ್ರಾಂಕ್ಫರ್ಟ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.