ಸೋಜಿಗದ ಸಂಗತಿಯೆಂದರೆ 2013ರಿಂದ ಮುಂಬೈ, ಐಪಿಎಲ್ ಟೂರ್ನಮೆಂಟ್ನಲ್ಲಿ ತಾನಾಡಿದ ಮೊದಲ ಪಂದ್ಯವನ್ನು ಗೆದ್ದೇ ಇಲ್ಲ. ಹಾಗಾಗಿ ಸಿಎಸ್ಕೆ ವಿರುದ್ಧದ ಸೋಲನ್ನು ಮುಂಬೈನವರು ಗಂಭೀರವಾಗಿ ಪರಿಗಣಿಸಿಲ್ಲ. ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಮುಂಬೈ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಇದುವರೆಗೆ ಆಡಿರುವ ಎಲ್ಲ ಆರು ಪಂದ್ಯಗಳನ್ನು ಸೋತಿದೆ. 2014 ಐಪಿಎಲ್ ಟೂರ್ನಿಯ ಒಂದಷ್ಟು ಗೇಮ್ಗಳು ಯುಎಇಯಲ್ಲಿ ಆಯೋಜಿಸಲ್ಪಟ್ಟಿದ್ದವು.
ಎರಡು ಬಾರಿ ಟ್ರೋಪಿ ಗೆದ್ದಿರುವ ಕೆಕೆಆರ್ಗೆ ಇದು ಈ ಆವೃತಿಯ ಮೊದಲ ಪಂದ್ಯ. ಸಾಕಷ್ಟು ಪ್ರತಿಭಾವಂತನಾದರೂ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ವಿಫಲರಾದ ವಿಕೆಟ್ ಕೀಪರ್–ಬ್ಯಾಟ್ಸ್ಮನ್ ದಿನೇಶ್ ಕಾರ್ತೀಕ್ ಟೀಮನ್ನು ಕಳೆದ ವರ್ಷದಿಂದ ಮುನ್ನಡೆಸುತ್ತಿದ್ದಾರೆ. ಮೊದಲು ಈ ಟೀಮಿನ ಬಲಾಬಲವನ್ನು ಅವಲೋಕಿಸೋಣ.
ಕೆಕೆಆರ್ಗೆ ಹೆಡ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಸ್ಥಾನದಲ್ಲಿ ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲ್ಲಮ್ ಬಂದಿದ್ದಾರೆ. ಇದೊಂದು ದೊಡ್ಡ ಪರಿವರ್ತನೆ, ಯಾಕೆಂದರೆ, ಕಾಲಿಸ್ ಮತ್ತು ಮೆಕಲ್ಲಮ್ ಅವರ ಯೋಚನೆಮ ಹಾಗೂ ಕಾರ್ಯವೈಖರಿ ತದ್ವಿರುದ್ಧವಾಗಿವೆ. ಕಿವೀಸ್ ಮಾಜಿ ಆಟಗಾರ ಆಕ್ರಮಣಕಾರಿ ಪ್ರವೃತ್ತಿಯವರು. ಹಾಗಾಗಿ ಕೆಕೆಆರ್ ಗೇಮ್ ಪ್ಲ್ಯಾನ್ ಬದಲಾಗಲಿದೆ.
ಟೀಮಿನ ಬ್ಯಾಟಿಂಗ್ಮತ್ತು ಬೌಲಿಂಗ್ ಎರಡೂ ಬಲಿಷ್ಠವಾಗಿದೆ. ಅಯಾನ್ ಮೊರ್ಗನ್ ಮತ್ತು ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಖ್ಯಾತಿಯ ಪ್ಯಾಟ್ ಕಮ್ಮಿನ್ಸ್ ಅವರ ಸೇರ್ಪಡೆಯಿಂದ ಟೀಮು ಹೆಚ್ಚು ಸಮತೋಲಿತ ಅನಿಸುತ್ತಿದೆ. ಮಿಸ್ಟ್ರಿ ಸ್ಪಿನ್ನರ್ ಎಂದು ಹೆಸರಾಗಿರುವ ವರುಣ್ ಚಕ್ರವರ್ತಿಯನ್ನು ಸಹ ಕೆಕೆಆರ್ ಖರೀದಿಸಿದೆ.
ಮನಮೋಹಕ ಬ್ಯಾಟಿಂಗ್ ಶೈಲಿಯಿಂದ ಈಗಾಗಲೇ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿರುವ ಶುಭಮನ್ ಗಿಲ್, ವೆಸ್ಟ್ಇಂಡೀಸ್ ಮೂಲದ ಆಲ್ರೌಂಡರ್ ಸುನಿಲ್ ನರೈನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದಯ ಬಹತೇಕ ನಿಶ್ಚಿತ. ತಾಂತ್ರಿಕವಾಗಿ ನಿಪುಣ ಬ್ಯಾಟ್ಸ್ಮನ್ ಆಗಿರುವ ನಿತಿಷ್ ರಾಣಾ ಈ ಬಾರಿಯೂ ಮೂರನೇ ಕ್ರಮಾಂಕದಲ್ಲಿ ಆಡಬಹುದು. ನಂತರದ ಸ್ಥಾನಗಳಲ್ಲಿ ಮೊರ್ಗನ್, ಕಾರ್ತಿಕ್ ಆಡುವ ನಿರೀಕ್ಷೆಯಿದೆ.
ಟೀಮಿನ ಟ್ರಂಪ್ಕಾರ್ಡ್ ಆಂದ್ರೆ ರಸ್ಸೆಲ್. ಅವರ ಬ್ಯಾಟಿಂಗ್ ಕ್ರಮಾಂಕ ಯಾವತ್ತಿಗೂ ಫ್ಲೆಕ್ಸಿಬಲ್, ಸಂದರ್ಭಕ್ಕೆ ತಕ್ಕಂತೆ ಅವರನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಅವರು ಮೈದಾನಕ್ಕೆ ಕಿಚ್ಚು ಹಚ್ಚುವ ಆಟಗಾರ, ಚೆಂಡಿರುವುದೇ ದಂಡಿಸುವುದಕ್ಕೆ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವವರು. ಉದಯೋನ್ಮುಖ ಆಲ್ರೌಂಡರ್ ರಿಂಕು ಸಿಂಗ್ ಆಡುವ ಎಲೆವೆನ್ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಬೌಲಿಂಗ್ ಆಕ್ರಮಣದ ನೇತೃತ್ವವನ್ನು ನಿಸ್ಸಂದೇಹವಾಗಿ ಕಮ್ಮಿನ್ಸ್ ವಹಿಸಿಕೊಳ್ಳಲಿದ್ದಾರೆ. ಅವರೊಂದಿಗೆ ರಸ್ಸೆಲ್, ಶಿವಮ್ ಮಾವಿ, ಕಮ್ಲೇಷ್ ನಾಗರ್ಕೋಟಿ ಮತ್ತು ಅಮೇರಿಕಾದ ಮೊದಲ ಅಂತರರಾಷ್ಟ್ರೀಯ ಕ್ರಿಕೆಟರ್ ಅಲಿ ಖಾನ್ ಮುಂತಾದವರಿರುತ್ತಾರೆ.
ನಿರ್ಭಾವುಕ ನರೈನ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರೊನ್ನಳಗೊಂಡ ಕೆಕೆಆರ್ನ ಸ್ಪಿನ್ ವಿಭಾಗ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತದೆ. ಇಬ್ಬರೂ ಮ್ಯಾಚ್ ವಿನ್ನರ್ಗಳೇ.
ಅತ್ತ, ರೋಹಿತ್ ಶರ್ಮ ಮೊದಲ ಪಂದ್ಯದಲ್ಲಿ ಆಡಿದ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿಲ್ಲ. ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಅವರಿಗೆ ಸ್ವಲ್ಪ ಚಿಂತೆಯ ವಿಷಯವಾಗಿರಬಹುದು. ಸೌರಬ್ ತಿವಾರಿ ಚೆನೈ ವಿರುದ್ಧ ಮಿಂಚಿದರು, ಹಾಗಾಗಿ ಇಶಾನ್ ಕಿಷನ್ಗೆ ಅವಕಾಶ ಸಿಕ್ಕಲಿಕ್ಕಿಲ್ಲ. ಕ್ವಿಂಟನ್ ಡಿ ಕಾಕ್ ಉತ್ತಮ ಸ್ಪರ್ಶದಲ್ಲಿದ್ದಾರೆ. ಆಲ್ರೌಂಡರ್ಗಳಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡೆ, ಕೈರನ್ ಪೊಲ್ಲಾರ್ಡ್ ಅವಕಾಶ ಸಿಕ್ಕರೆ ಚೆನ್ನಾಗಿ ಬ್ಯಾಟ್ ಬೀಸಬಲ್ಲರು.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಚೆನೈ ವಿರುದ್ಧ ಬಹಳ ಕೆಟ್ಟದಾಗಿ ವಿಫಲರಾದರು. ಆದರೆ ಅವರೊಬ್ಬ ಚಾಂಪಿಯನ್ ಬೌಲರ್, ಇವತ್ತಿನ ಪಂದ್ಯದಲ್ಲಿ ಲಯ ಕಂಡುಕೊಳ್ಳಹುದು. ರಾಹುಲ್ ಚಹರ್, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ಪ್ಯಾಟಿಸನ್ ಆಡುವುದು ನಿಶ್ಚಿತ.
ಹಾಗೆ ನೋಡಿದರೆ, ಕೆಕೆಆರ್ ಮತ್ತು ಎಮ್ಐ ಇದುವರೆಗೆ 25 ಬಾರಿ ಪರಸ್ಪರ ಸೆಣಸಿದ್ದು ಶಾರುಖ್ ತಂಡ ಕೇವಲ ಆರು ಬಾರಿ ಮಾತ್ರ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಅಂಬಾನಿಯ ತಂಡ ಇವತ್ತಿನ ಪಂದ್ಯದಲ್ಲಿ ಫೇವರಿಟ್ ಅನಿಸುತ್ತಿದೆ.