44ನೇ ಚೆಸ್ ಒಲಿಂಪಿಯಾಡ್‌ನ ಟಾರ್ಚ್ ರಿಲೇ ಸೋಮವಾರ ಬೆಂಗಳೂರಿಗೆ ಆಗಮಿಸಿತು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚೆಸ್ ಜ್ಯೋತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಆ ಬಳಿಕ ಮಾತನಾಡಿದ ರಾಜ್ಯಪಾಲರು, ದೇಶವು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಭಾರತದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಜೂನ್ 19 ರಂದು ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಒಲಿಂಪಿಯಾಡ್ ಜ್ಯೋತಿಯನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದ್ದರು. ಆ ಬಳಿಕ ಜ್ಯೋತಿಯನ್ನು ಪ್ರಧಾನಿ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿ, ಅವರಿಂದ ಒಲಿಂಪಿಯಾಡ್ ಜ್ಯೋತಿ ಬೆಳಗಿಸಿದ್ದರು.
ಒಲಿಂಪಿಕ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ನಲ್ಲಿ ಟಾರ್ಚ್ ರಿಲೇ ಪ್ರದರ್ಶಿಸಲಾಗುತ್ತಿದ್ದು, ಇದನ್ನು ದೇಶದ 75 ನಗರಗಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲದೆ ಪ್ರತಿ ಸ್ಥಳದಲ್ಲಿ, ರಾಜ್ಯದ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಅದರಂತೆ ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೋಪಾಲ್, ಪಾಟ್ನಾ, ಕೋಲ್ಕತ್ತಾ, ಗ್ಯಾಂಗ್ಟಾಕ್, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್ ಬ್ಲೇರ್ ಮತ್ತು ಕನ್ಯಾಕುಮಾರಿ ಸೇರಿದಂತೆ ಭಾರತದ 75 ನಗರಗಳಲ್ಲಿ ಒಲಿಂಪಿಯಾಡ್ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಅಂತಿಮವಾಗಿ ಚೆಸ್ ಟೂರ್ನಿ ನಡೆಯಲಿರುವ ಮಹಾಬಲಿಪುರಂನಲ್ಲಿ ಒಲಿಂಪಿಯಾಡ್ ಜ್ಯೋತಿ ತಲುಪಲಿದೆ.
ಪ್ರತಿ ವರ್ಷ ಭಾರತದಿಂದಲೇ ಚೆಸ್ ಒಲಿಂಪಿಯಾಡ್ ಆರಂಭ:
ಒಲಿಂಪಿಯಾಡ್ ಟಾರ್ಚ್ ರಿಲೇಯನ್ನು ಪ್ರತಿ ವರ್ಷ ಭಾರತದಲ್ಲೇ ಬೆಳಗಳಾಗುತ್ತದೆ . ಚೆಸ್ ಆಟವು ಭಾರತದಲ್ಲಿ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ತವರಿನಲ್ಲೇ ಒಲಿಂಪಿಯಾಡ್ ಜ್ಯೋತಿ ಬೆಳಗಿಸಲಾಗುತ್ತದೆ. ಆ ಬಳಿಕ ಆತಿಥೇಯ ನಗರವನ್ನು ತಲುಪುವ ಮೊದಲು ಎಲ್ಲಾ ಖಂಡಗಳಲ್ಲಿ ಪ್ರಯಾಣಿಸುತ್ತದೆ. ಅಂತಿಮವಾಗಿ ಆಯಾ ವರ್ಷ ಒಲಿಂಪಿಯಾಡ್ ಚೆಸ್ ಟೂರ್ನಿ ಎಲ್ಲಿ ನಡೆಯಲಿದೆಯೋ ಆ ನಗರದಲ್ಲಿ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯಲಿದ್ದು, ಇದಾಗ್ಯೂ ಸಮಯದ ಕೊರತೆಯಿಂದಾಗಿ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಸಂಚರಿಸಲಿದೆ ಎಂದು ಭಾರತೀಯ ಚೆಸ್ ಫೆಡರೇಶನ್ (ಎಐಸಿಎಫ್) ತಿಳಿಸಿದೆ.
ಟೂರ್ನಿ ಯಾವಾಗ ಪ್ರಾರಂಭ:
44ನೇ ಚೆಸ್ ಒಲಿಂಪಿಯಾಡ್ ಈ ಬಾರಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. 187 ದೇಶಗಳ ಮುಕ್ತ ಸ್ಪರ್ಧಿಗಳು ಮತ್ತು ಮಹಿಳಾ ವಿಭಾಗದಲ್ಲಿ 343 ತಂಡಗಳು ಈಗಾಗಲೇ ಟೂರ್ನಿಗೆ ಪ್ರವೇಶಿಸಿವೆ. ವಿಶೇಷ ಎಂದರೆ ಮಹಿಳಾ ವಿಭಾಗದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ತಂಡಗಳು ಭಾಗವಹಿಸುತ್ತಿದೆ.
ಏನಿದರ ವಿಶೇಷತೆ?
ಇಲ್ಲಿ ಆಟಗಾರರು ಆಯಾ ದೇಶವನ್ನು ಪ್ರತಿನಿಧಿಸುತ್ತಾರೆ. ಅಂದರೆ ಆಡುವುದು ಒಬ್ಬರೇ ಆಗಿದ್ದರೂ, ಒಂದು ದೇಶ – ಒಂದು ತಂಡವಾಗಿ ಪರಿಗಣಿಸಲಾಗುತ್ತದೆ. ಪ್ರತಿ ಪಂದ್ಯಗಳಲ್ಲಿ ಒಂದು ರಾಷ್ಟ್ರದ ಆಟಗಾರರು ಎದುರಾಳಿ ರಾಷ್ಟ್ರದ ತಂಡಗಳ ವಿರುದ್ಧ ಆಡುತ್ತಾರೆ. ಇಲ್ಲಿ ಗೆಲ್ಲುವ ತಂಡಗಳ ಆಟಗಾರರಿಗೆ ರೇಟಿಂಗ್ ನೀಡಲಾಗುತ್ತದೆ. ಅಂತಿಮವಾಗಿ ಮೊದಲ ಸ್ಥಾನ ಅಲಂಕರಿಸುವ ತಂಡಕ್ಕೆ ಚಿನ್ನ, 2ನೇ ಸ್ಥಾನ ಪಡೆಯುವ ತಂಡಕ್ಕೆ ಬೆಳ್ಳಿ ಮತ್ತು ಮೂರನೇ ಸ್ಥಾನ ಪಡೆದ ತಂಡಕ್ಕೆ ಕಂಚಿನ ಪದಕ ನೀಡಲಾಗುತ್ತದೆ.
ಭಾರತಕ್ಕೆ ಒಲಿದ ಅದೃಷ್ಟ:
ಈ ಬಾರಿ ಚೆಸ್ ಒಲಿಂಪಿಯಾಡ್ ಟೂರ್ನಿಯನ್ನು ರಷ್ಯಾ ಆಯೋಜಿಸಬೇಕಿತ್ತು.ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಟೂರ್ನಿಯನ್ನು ಸ್ಥಳಾಂತರ ಮಾಡಲಾಗಿದೆ. ಇದೇ ವೇಳೆ ಟೂರ್ನಿಯನ್ನು ಆಯೋಜಿಸಲು ಭಾರತ ಚೆಸ್ ಫೆಡರೇಷನ್ ಮುಂದಾಗಿದ್ದು, ಅದರಂತೆ ಭಾರತದ ಚೆಸ್ ಪಟುಗಳ ತವರೂರು ಎಂದೇ ಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ ಜುಲೈ 28 ರಿಂದ ಚೆಸ್ ಟೂರ್ನಿ ಆರಂಭವಾಗಲಿದೆ.
ಭಾರತದಲ್ಲಿ ಚೊಚ್ಚಲ ಚೆಸ್ ಒಲಿಂಪಿಯಾಡ್:
1924 ರಿಂದ ಶುರುವಾಗಿರುವ ಚೆಸ್ ಒಲಿಂಪಿಯಾಡ್ ಟೂರ್ನಿಗೆ ಇದೇ ಮೊದಲ ಬಾರಿಗೆ ಭಾರತ ಆತಿಥ್ಯವಹಿಸುತ್ತಿರುವುದು ವಿಶೇಷ. ಅಂದರೆ 95 ವರ್ಷಗಳ ಬಳಿಕ ಚೆಸ್ನ ತವರೂರಿನಲ್ಲಿ ಟೂರ್ನಿ ನಡೆಯುತ್ತಿದೆ. 43ನೇ ಚೆಸ್ ಒಲಿಂಪಿಯಾಡ್ ಅನ್ನು ಜಾರ್ಜಿಯಾ ದೇಶ ಆಯೋಜಿಸಿತ್ತು. ಇನ್ನು 44ನೇ ಚೆಸ್ ಒಲಿಂಪಿಯಾಡ್ ಆತಿಥ್ಯ ರಷ್ಯಾ ಪಾಲಾಗಿತ್ತು. ಆದರೆ ಯುದ್ದದ ಕಾರಣದಿಂದಾಗಿ ಭಾರತಕ್ಕೆ ಆತಿಥ್ಯವಹಿಸುವ ಅವಕಾಶ ಸಿಕ್ಕಿದೆ. ಅದರಂತೆ ಜುಲೈ 28 ರಿಂದ ಆಗಸ್ಟ್ 10ರವರೆಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿಶ್ವದ ಖ್ಯಾತ ಚೆಸ್ ಪಟುಗಳ ನಡುವೆ ಚದುರಂಗದಾಟ ನಡೆಯಲಿದೆ.
Published On - 6:49 pm, Tue, 19 July 22