Chess World Cup 2023: ಚೆಸ್​ ವಿಶ್ವಕಪ್​:  ಫೈನಲ್​ಗೆ ಪ್ರವೇಶಿಸಿದ ಪ್ರಜ್ಞಾನಂದ

| Updated By: ಝಾಹಿರ್ ಯೂಸುಫ್

Updated on: Aug 21, 2023 | 11:15 PM

R. Praggnanandhaa: ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್​ ಪ್ರವೇಶಿಸಿದ ಮೊದಲ ಚೆಸ್ ಚತುರ ಎಂಬ ಹೆಗ್ಗಳಿಕಗೆ ಆರ್. ಪ್ರಜ್ಞಾನಂದ ಪಾತ್ರರಾಗಿದ್ದಾರೆ.

Chess World Cup 2023: ಚೆಸ್​ ವಿಶ್ವಕಪ್​:  ಫೈನಲ್​ಗೆ ಪ್ರವೇಶಿಸಿದ ಪ್ರಜ್ಞಾನಂದ
R Praggnanandhaa
Follow us on

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಜಯ ಸಾಧಿಸಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಫೈನಲ್​ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಚೆಸ್ ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಶ್ವ ಚಾಂಪಿಯನ್​ ವಿಶ್ವನಾಥನ್ ಆನಂದ್ 2000 ಹಾಗೂ 2002 ರಲ್ಲಿ ಈ ಸಾಧನೆ ಮಾಡಿದ್ದರು.

ಭಾನುವಾರ ನಡೆದ ಸೆಮಿಫೈನಲ್​ನ ಮೊದಲ ಗೇಮ್​ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು. ಇನ್ನು 2ನೇ ಗೇಮ್​ನಲ್ಲಿ ಫ್ಯಾಬಿಯಾನೊ ಕರುವಾನಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು.

ಅದರಂತೆ ಸೋಮವಾರ ನಡೆದ ಟೈಬ್ರೇಕರ್​ನಲ್ಲಿ ​ ಗೇಮ್​ನಲ್ಲಿ ಪ್ರಜ್ಞಾನಂದ ಮೇಲೆ ಒತ್ತಡ ಹಾಕುವಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಚೆಸ್ ಪಟು  ಫ್ಯಾಬಿಯಾನೊ ಕರುವಾನಾ ಯಶಸ್ವಿಯಾಗಿದ್ದರು. ಆದರೆ ನಿರ್ಣಾಯಕ ನಡೆಗಳ ಹಂತದಲ್ಲಿ ಮೇಲುಗೈ ಸಾಧಿಸಿದ 18 ರ ಹರೆಯದ ಭಾರತೀಯ ಚೆಸ್ ಚತುರ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

2ನೇ ಟೈಬ್ರೇಕರ್​ ಗೇಮ್​ನಲ್ಲೂ ಜಾಣ ನಡೆ ಪ್ರದರ್ಶಿಸಿದ ಪ್ರಜ್ಞಾನಂದ ಫ್ಯಾಬಿಯಾನೊ ಕರುವಾನಾ ಅವರ ಗೆಲುವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂದ್ಯವು  10+10 ಟೈಬ್ರೇಕ್‌ನತ್ತ ಸಾಗಿತು. ಇದಾದ ಬಳಿಕ ಮೊದಲ ರ್ಯಾಪಿಡ್ ಟೈಬ್ರೇಕ್​ ನಲ್ಲಿ ಜಯ ಸಾಧಿಸುವ ಮೂಲಕ ಪ್ರಜ್ಞಾನಂದ ಫ್ಯಾಬಿಯಾನೊ ಮೇಲೆ ಒತ್ತಡ ಹೇರಿದರು.

ಅಂತಿಮವಾಗಿ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿ ಪ್ರಜ್ಞಾನಂದ ಫೈನಲ್​ಗೆ ಪ್ರವೇಶಿಸಿದ್ದಾರೆ. ಇನ್ನು  ಫೈನಲ್​ನಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಪ್ರಜ್ಞಾನಂದ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಗೆಲ್ಲುವ ಮೂಲಕ ಯುವ ಚೆಸ್ ಚತುರ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

ಚದುರಂಗದಾಟದಲ್ಲಿ ವಿಶೇಷ ಸಾಧನೆ:

ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್​ಗೆ​ ಪ್ರವೇಶಿಸಿದ ಮೊದಲ ಭಾರತೀಯ ಚೆಸ್ ಚತುರ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದ 18 ವರ್ಷದ ಆರ್. ಪ್ರಜ್ಞಾನಂದ ಇದೀಗ ಫೈನಲ್​ಗೆ ಪ್ರವೇಶಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎಂಬ ದಾಖಲೆಯನ್ನು ತಮಿಳುನಾಡು ಮೂಲದ ರಮೇಶ್ ಬಾಬು ಪ್ರಜ್ಞಾನಂದ ನಿರ್ಮಿಸಿದ್ದಾರೆ.

ಫೈನಲ್​ ಬಗ್ಗೆ ಪ್ರಜ್ಞಾನಂದ ಹೇಳಿದ್ದೇನು?

ನಾನು ಈ ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ಅವರನ್ನು ಎದುರಿಸುವುದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ನಾನು ಅವರ ವಿರುದ್ಧ ಆಡುವ ಏಕೈಕ ಮಾರ್ಗವೆಂದರೆ ಅದು ಫೈನಲ್​ನಲ್ಲಿ ಮಾತ್ರ. ಅಲ್ಲದೆ ನಾನು ಫೈನಲ್‌ಗೇರುತ್ತೇನೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ ಎಂದು ಪ್ರಜ್ಞಾನಂದ ಹೇಳಿದ್ದಾರೆ.

ಸೆಮಿಫೈನಲ್​ನಲ್ಲಿ ನನ್ನ ರಕ್ಷಣಾತ್ಮಕ ಆಟದಿಂದ ಗೆದ್ದಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಕೆಲ ಗೇಮ್​ಗಳು ತುಂಬಾ ಕಠಿಣವಾಗಿತ್ತು. ಆದರೆ ಕೆಲ ಹಂತದಲ್ಲಿ ಫ್ಯಾಬಿಯಾನೊ ಎಡವಿದರು. ಅಂತಿಮವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ. ಇದೀಗ ಫೈನಲ್​ಗೆ ಬಂದಿದ್ದೇನೆ. ಅಲ್ಲದೆ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.

 

 

Published On - 9:03 pm, Mon, 21 August 23