IPL 2021: ಐಪಿಎಲ್​ನಲ್ಲಿ ದುಡಿದ ಹಣದಿಂದ ಕೊರೊನಾ ಸೋಂಕಿತ ನನ್ನ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ: ಚೇತನ್ ಸಕಾರಿಯಾ

|

Updated on: May 07, 2021 | 2:56 PM

ಕೋಟಿಯಲ್ಲಿ ಎಷ್ಟು ಸೊನ್ನೆಗಳಿವೆ ಎಂದು ನನ್ನ ತಾಯಿಗೆ ತಿಳಿದಿಲ್ಲ. ನನ್ನ ಮೊದಲ ಆದ್ಯತೆಯೆಂದರೆ ನನ್ನ ತಂದೆಯನ್ನು ಕೊರೊನಾದಿಂದ ಬದಹುಕಿಸಿಕೊಂಡು ನಂತರ ಮನೆ ನಿರ್ಮಿಸುವುದು.

IPL 2021: ಐಪಿಎಲ್​ನಲ್ಲಿ ದುಡಿದ ಹಣದಿಂದ ಕೊರೊನಾ ಸೋಂಕಿತ ನನ್ನ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ: ಚೇತನ್ ಸಕಾರಿಯಾ
ಚೇತನ್ ಸಕಾರಿಯಾ
Follow us on

ಐಪಿಎಲ್ 2021 ಅರ್ಧಕ್ಕೆ ನಿಂತ ಬಳಿಕ ಎಲ್ಲಾ ಆಟಗಾರರು ಆಯಾ ಮನೆಗಳಿಗೆ ಪ್ರಯಾಣ ಬೆಳೆಸಿದರು. ರಾಜಸ್ಥಾನ್ ರಾಯಲ್ಸ್‌ನ ಚೇತನ್ ಸಕಾರಿಯಾ ಕೂಡ ಭಾವನಗರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು. ಆದರೆ, ಅವರು ಭಾವನಗರಕ್ಕೆ ಕಾಲಿಟ್ಟ ಕೂಡಲೇ ಮೊದಲು ಮನೆಯ ಕಡೆಗೆ ಹೋಗಲಿಲ್ಲ. ಬದಲಾಗಿ, ಅವರ ಹೆಜ್ಜೆಗಳು ತಂದೆಯನ್ನು ದಾಖಲಿಸಿದ ಆಸ್ಪತ್ರೆ ಕಡೆಗೆ ಸಾಗಿದವು. 22 ವರ್ಷದ ಬೌಲರ್ ಚೇತನ್ ಸಕಾರಿಯಾ ಅವರ ತಂದೆ ಆಸ್ಪತ್ರೆಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರ ತಂದೆ ಒಂದು ವಾರದ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದರ ಜೊತೆಗೆ, ಅವರು ಮಧುಮೇಹ ರೋಗಿಯೂ ಹೌದು.

ಭಾವನಗರವನ್ನು ತಲುಪಿದ ನಂತರ, ನೇರವಾಗಿ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋದ ಸಕಾರಿಯಾ, ಐಪಿಎಲ್ 2021 ರಿಂದ ಗಳಿಸಿದ ಹಣವನ್ನು ತನ್ನ ತಂದೆಯ ಉತ್ತಮ ಚಿಕಿತ್ಸೆಗಾಗಿ ಇಡುವುದಾಗಿ ಹೇಳಿದರು. ಈ ವರ್ಷದ ಹರಾಜಿನಲ್ಲಿ 1.2 ಕೋಟಿ ರೂಪಾಯಿಗಳಿಗೆ ರಾಜಸ್ಥಾನ್ ರಾಯಲ್ಸ್‌ನ ಭಾಗವಾದ ಚೇತನ್ ಸಕಾರಿಯಾ, ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂಭಾಷಣೆಯಲ್ಲಿ, “ಕೆಲವೇ ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್‌ನಿಂದ ನನ್ನ ಪಾಲು ಹಣವನ್ನು ಪಡೆದಿರುವುದು ನನ್ನ ಅದೃಷ್ಟ. ನಾನು ಆ ಹಣವನ್ನು ಮನೆಗೆ ವರ್ಗಾಯಿಸಿದ್ದೆ, ಇದು ಈ ಕಷ್ಟದ ಸಮಯದಲ್ಲಿ ನನ್ನ ಕುಟುಂಬದ ಸಹಾಯಕ್ಕೆ ಬಂತು ಎಂದರು.

ಐಪಿಎಲ್‌ನಲ್ಲಿ ಪ್ರಶ್ನೆಗಳನ್ನು ಎತ್ತಿದವರಿಗೆ ಸಕಾರಿಯಾ ಉತ್ತರ
ಕಷ್ಟದ ಸಮಯದಲ್ಲಿ ಐಪಿಎಲ್ ಆಡಿಸಬೇಕ ಎಂದು ಪ್ರಶ್ನಿಸಿದ ಜನರಿಗೆ ಚೇತನ್ ಸಕಾರಿಯಾ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಜನರು ಐಪಿಎಲ್ ಅನ್ನು ನಿಲ್ಲಿಸಿ ಎಂದು ಹೇಳುತ್ತಾರೆ. ನಾನು ಅವರಿಗೆ ಏನಾದರೂ ಹೇಳಲು ಬಯಸುತ್ತೇನೆ. ನನ್ನ ಕುಟುಂಬದಲ್ಲಿ ನಾನು ಒಬ್ಬನೇ. ನನ್ನ ಗಳಿಕೆಯ ಮೂಲ ಕ್ರಿಕೆಟ್ ಮಾತ್ರ. ನಾನು ಗಳಿಸಿದ ಹಣದಿಂದ ಮಾತ್ರ ನನ್ನ ತಂದೆಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಈ ಪಂದ್ಯಾವಳಿ 1 ತಿಂಗಳು ಇಲ್ಲದಿದ್ದರೆ, ನನಗೆ ತುಂಬಾ ಕಷ್ಟವಾಗುತ್ತಿತ್ತು. ನಾನು ಬಡ ಕುಟುಂಬದಿಂದ ಬಂದವನು. ನನ್ನ ತಂದೆ ಜೀವನದುದ್ದಕ್ಕೂ ಟೆಂಪೋ ಓಡಿಸುತ್ತಿದ್ದರು. ಆದರೆ ಐಪಿಎಲ್​ನಿಂದಾಗಿ ನಮ್ಮ ಜೀವನ ಬದಲಾಯಿತು ಎಂದರು.

ಸಹೋದರನ ಅಕಾಲಿಕ ಸಾವು
ಐಪಿಎಲ್ 2021 ಪ್ರಾರಂಭವಾಗುವ ಕೆಲವೇ ತಿಂಗಳುಗಳ ಮೊದಲು ಸೌರಾಷ್ಟ್ರದ ಆಟಗಾರ ತನ್ನ ಕಿರಿಯ ಸಹೋದರನನ್ನು ಕಳೆದುಕೊಂಡರು. ಈ ವರ್ಷದ ಆರಂಭದಲ್ಲಿ ಚೇತನ್ ಸಹೋದರ ಆತ್ಮಹತ್ಯೆ ಮಾಡಿಕೊಂಡರು. ಆ ಆಘಾತದಿಂದ ಚೇತರಿಸಿಕೊಂಡ ನಂತರ, ಚೇತನ್ ಸಕಾರಿಯಾ ಅವರ ತಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆದ್ದರಿಂದ ತಾವು ಗಳಿಸಿದ ಎಲ್ಲಾ ಹಣವನ್ನು ತಂದೆಯ ಚಿಕಿತ್ಸೆಗೆ ಖರ್ಚು ಮಾಡಲು ಸಕಾರಿಯಾ ಚಿಂತಿಸಿದ್ದಾರೆ. ಪ್ರಸ್ತುತ ಮುಂದೂಡಲ್ಪಟ್ಟಿರುವ ಈ ಪಂದ್ಯಾವಳಿ ಶೀಘ್ರದಲ್ಲೇ ಪ್ರಾರಂಭವಾಗಲಿ ಎಂದು ಅವರು ಆಶಿಸಿದರು. ಕೋಟಿಯಲ್ಲಿ ಎಷ್ಟು ಸೊನ್ನೆಗಳಿವೆ ಎಂದು ನನ್ನ ತಾಯಿಗೆ ತಿಳಿದಿಲ್ಲ. ನನ್ನ ಮೊದಲ ಆದ್ಯತೆಯೆಂದರೆ ನನ್ನ ತಂದೆಯನ್ನು ಕೊರೊನಾದಿಂದ ಬದಹುಕಿಸಿಕೊಂಡು ನಂತರ ಮನೆ ನಿರ್ಮಿಸುವುದು. ಇದಕ್ಕಾಗಿ ಐಪಿಎಲ್ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗುವುದು ಅವಶ್ಯಕ ಎಂದು ಹೇಳಿದರು.

ಐಪಿಎಲ್ 2021 ರಲ್ಲಿ ಸಕಾರಿಯಾ
ಚೇತನ್ ಸಕಾರಿಯಾ ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದರು. ಪಂದ್ಯಾವಳಿ ಸ್ಥಗಿತಗೊಳ್ಳುವವರೆಗೂ ಅವರು ಆಡಿದ ಎಲ್ಲಾ ಪಂದ್ಯಗಳಲ್ಲಿ, 23.14 ಸ್ಟ್ರೈಕ್ ದರದಲ್ಲಿ 7 ವಿಕೆಟ್ ಪಡೆದರು ಮತ್ತು ಅವರ ಅತ್ಯುತ್ತಮ 31 ರನ್ಗಳಿಗೆ 3 ವಿಕೆಟ್ ಗಳಿಸಿದರು.