ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ನ (CWG 2022) ಲಾನ್ ಬಾಲ್ಸ್ನಲ್ಲಿ (Lawn Bowls) ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 17-10 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಮಹಿಳೆಯರು ಈ ವಿಶೇಷ ಸಾಧನೆ ಮಾಡಿದರು. ಭಾರತವು ಹಲವು ವರ್ಷಗಳಿಂದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸುತ್ತಿದ್ದರೂ ಇದುವರೆಗೆ ಲಾನ್ ಬಾಲ್ಸ್ನಲ್ಲಿ ಪದಕ ಗೆದ್ದಿರಲಿಲ್ಲ. ಇದೀಗ ಭಾರತದ ತಂಡದ ಲವ್ಲಿ ಚೌಬೆ , ಪಿಂಕಿ , ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಒಳಗೊಂಡ ತಂಡವು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಏನಿದು ಲಾನ್ ಬಾಲ್ಸ್?
ಲಾನ್ ಬಾಲ್ಸ್ ಎಂಬುದು ಹೊರಾಂಗಣ ಕ್ರೀಡೆ. ಈ ಸ್ಪರ್ಧೆಯು 1930 ರಿಂದ ಕಾಮನ್‌ವೆಲ್ತ್ ಕ್ರೀಡಾಕೂಟದ ಭಾಗವಾಗಿದೆ. 22 ವರ್ಷಗಳಲ್ಲಿ ಭಾರತ ತಂಡ ಈ ಕ್ರೀಡೆಯಲ್ಲಿ ಯಾವುದೇ ಪದಕ ಗೆದ್ದಿಲ್ಲ. ಆದರೆ ಈ ಬಾರಿ ಫೈನಲ್ಗೆ ಪ್ರವೇಶಿಸುವ ಎಲ್ಲರ ಗಮನ ಸೆಳೆದಿತ್ತು. ಇದೀಗ ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತೀಯರ ಗಮನ ಸೆಳೆದಿದೆ. ಅಂದಹಾಗೆ ಲಾನ್ ಬಾಲ್ಸ್ ಎಂಬುದು ಈಜಿಪ್ಟ್ ಮೂಲದ ಕ್ರೀಡೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಇಂಗ್ಲೆಂಡ್ನಲ್ಲಿ ಈ ಕ್ರೀಡೆಯನ್ನು ಹೆಚ್ಚಾಗಿ ಆಡಲಾಗುತ್ತದೆ. ಹೀಗಾಗಿ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಇಂಗ್ಲೆಂಡ್ ಲಾನ್ ಬಾಲ್ಸ್ನಲ್ಲಿ ಇದುವರೆಗೆ 20 ಚಿನ್ನ, 9 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ ಒಟ್ಟು 51 ಪದಕಗಳನ್ನು ಗೆದ್ದಿದೆ.
ಲಾನ್ ಬಾಲ್ಸ್ ಗೇಮ್ ನಿಯಮಗಳೇನು?
ಲಾನ್ ಬಾಲ್ಸ್ ಆಟದ ನಿಯಮಗಳು ತುಂಬಾ ಆಸಕ್ತಿದಾಯಕವಾಗಿವೆ. ಇಲ್ಲಿ ರಬ್ಬರ್ನಿಂದ ಮಾಡಲಾದ ವಿಶೇಷ ಚೆಂಡನ್ನು ಬಳಸಲಾಗುತ್ತದೆ. ಈ ಚೆಂಡಿನ ತೂಕವು 1.59 ಕೆಜಿ ಇರುತ್ತದೆ. ಈ ಚೆಂಡನ್ನು ನಿಗದಿಪಡಿಸಲಾದ ಗುರಿಯತ್ತ ನೆಲದಿಂದ ಉರುಳಿಸಬೇಕು. ಹೀಗೆ ಸಾಗಿದ ಚೆಂಡು ನಿರ್ದಿಷ್ಠ ಗುರಿಗೆ (ಜ್ಯಾಕ್- ಸಣ್ಣ ಚೆಂಡು) ತಲುಪಬೇಕು. ಇಲ್ಲಿ ಗುರಿಯ ಅಂತರವು 23 ಮೀಟರ್ ಆಗಿರುತ್ತದೆ. ಅಲ್ಲಿಗೆ ಚೆಂಡನ್ನು ತಲುಪಿಸುವ ಮೂಲಕ ಅಥವಾ ಜ್ಯಾಕ್ಗೆ ತಾಗಿಸುವ ಮೂಲಕ ಪಾಯಿಂಟ್ಗಳನ್ನು ಪಡೆಯಲಾಗುತ್ತದೆ.
ಪಾಯಿಂಟ್ ಸಿಗುವುದು ಹೇಗೆ?
ಲಾನ್ ಬಾಲ್ಗಳಲ್ಲಿ ಸ್ಕೋರ್ ಮಾಡುವುದು ತುಂಬಾ ಸರಳ. ಇಲ್ಲಿ ನಿಗದಿ ಮಾಡಲಾದ ಗುರಿಯ ಹತ್ತಿರ ಹೆಚ್ಚು ಚೆಂಡುಗಳನ್ನು ಹಾಕಿದ ತಂಡಕ್ಕೆ ಹೆಚ್ಚು ಪಾಯಿಂಟ್ ಸಿಗುತ್ತದೆ. ಅಂದರೆ ನಿರ್ದಿಷ್ಟ ಗುರಿಯ ಸಮೀಪ ಯಾವ ತಂಡಗಳ ಚೆಂಡು ಹೆಚ್ಚು ಇರುತ್ತದೆಯೋ ಆ ತಂಡ ಹೆಚ್ಚಿನ ಪಾಯಿಂಟ್ ಪಡೆದು ಗೆಲುವು ತನ್ನದಾಗಿಸಿಕೊಳ್ಳುತ್ತದೆ.
ಎಷ್ಟು ಆಟಗಾರರು ಆಡುತ್ತಾರೆ?
ಈ ಕ್ರೀಡೆಯನ್ನು ಒಬ್ಬರು, ಇಬ್ಬರು, ಮೂವರು ಮತ್ತು ನಾಲ್ಕು ಮಂದಿ ಆಡಬಹುದು. ಆದರೆ ಇಲ್ಲಿ ಒಂದು ತಂಡವಾಗಿ ಆಡುವಾಗ ಮೂವರು ಮತ್ತು ನಾಲ್ವರು ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ. ಅಲ್ಲದೆ ಒಂದು ತಂಡಕ್ಕೆ 18 ತುದಿಗಳಿಂದ ಥ್ರೋಗಳನ್ನು ನೀಡಲಾಗಿರುತ್ತದೆ. ಈ ಮೂಲಕ ಗುರಿಯ ಹತ್ತಿರಕ್ಕೆ ಯಾವ ತಂಡ ಹೆಚ್ಚು ಚೆಂಡುಗಳನ್ನು ತಲುಪಿಸುತ್ತಾರೋ ಅವರು ಅಧಿಕ ಪಾಯಿಂಟ್ ಪಡೆದು ವಿಜಯಿಯಾಗುತ್ತಾರೆ.
ಇದೀಗ ಭಾರತ ತಂಡವು ಲಾನ್ ಬಾಲ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
Published On - 6:49 pm, Tue, 2 August 22