22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ಗೆ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28 ರಂದು ಅಧಿಕೃತ ಚಾಲನೆ ದೊರೆಯಲಿದೆ. 1930 ರಲ್ಲಿ ಲಂಡನ್ ಮತ್ತು 2002 ರಲ್ಲಿ ಮ್ಯಾಂಚೆಸ್ಟರ್ ಕ್ರೀಡಾಕೂಟದ ಬಳಿಕ ಇಂಗ್ಲೆಂಡ್ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸುತ್ತಿರುವುದು ಇದು ಮೂರನೇ ಬಾರಿ ಎಂಬುದು ವಿಶೇಷ. ಈಗಾಗಲೇ ಭಾರತದಿಂದ 200 ಕ್ಕೂ ಅಧಿಕ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದೆ. ಒಲಿಂಪಿಕ್ಸ್ ಬಳಿಕ ಅತೀ ಹೆಚ್ಚು ರಾಷ್ಟ್ರಗಳು ಭಾಗವಹಿಸುವ ಕ್ರೀಡಾಕೂಟಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕೂಡ ಒಂದು. ಹೀಗಾಗಿಯೇ ಈ ಕ್ರೀಡಾಕೂಟದ ಫಲಿತಾಂಶವನ್ನು ಇಡೀ ವಿಶ್ವದ ಕ್ರೀಡಾ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ.
ಕಾಮನ್‌ವೆಲ್ತ್ ಎಂದರೇನು?
ಕಾಮನ್‌ವೆಲ್ತ್ ಎಂಬುದು 1949 ರಲ್ಲಿ ಔಪಚಾರಿಕ ಸಂವಿಧಾನದ ಮೂಲಕ ಸ್ಥಾಪಿತವಾದ ರಾಷ್ಟ್ರಗಳ ಒಕ್ಕೂಟ. ಈ ಒಕ್ಕೂಟದಲ್ಲಿ ಪ್ರಸ್ತುತ 56 ಸದಸ್ಯ ರಾಷ್ಟ್ರಗಳಿವೆ. ವಿಶೇಷ ಎಂದರೆ ಈ ಹಿಂದೆ ಬ್ರಿಟಿಷರು ವಸಾಹತು ಹೊಂದಿದ್ದ ಬಹುಪಾಲು ರಾಷ್ಟ್ರಗಳು ಕಾಮನ್‌ವೆಲ್ತ್ ಒಕ್ಕೂಟದಲ್ಲಿದೆ. ರಾಜಕೀಯ, ಆರ್ಥಿಕ ಮತ್ತು ಮಾನವೀಯ ದೃಷ್ಟಿಕೋನದಲ್ಲಿ ಇಂತಹದೊಂದು ಒಕ್ಕೂಟವನ್ನು ರೂಪಿಸಲಾಗಿದೆ. ದೇಶಗಳ ಸಮೃದ್ಧಿ, ಪ್ರಜಾಪ್ರಭುತ್ವ ಮತ್ತು ಶಾಂತಿ ಈ ಒಕ್ಕೂಟದ ಮೂಲ ಧ್ಯೇಯವಾಗಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರವಾಗಿರುವ ಭಾರತಕ್ಕೆ ಯಾವುದಾದರೂ ಸಂದಿಗ್ಧ ಪರಿಸ್ಥಿತಿ ಎದುರಾದರೆ ಕಾಮನ್‌ವೆಲ್ತ್ ದೇಶಗಳಿಂದ ನೆರವು ಸಿಗಲಿದೆ. ಅಂದರೆ ಇಲ್ಲಿ ಎಲ್ಲಾ ರಾಷ್ಟ್ರಗಳು ಒಕ್ಕೂಟದೊಂದಿಗೆ ಒಗ್ಗಟ್ಟು ಪ್ರದರ್ಶಿಸಲಿದೆ.
ಏನಿದು ಕಾಮನ್‌ವೆಲ್ತ್ ಗೇಮ್ಸ್?
ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆಯಾಗಿದ್ದು, ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್‌ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಸದ್ಯ ಕಾಮನ್‌ವೆಲ್ತ್ ಒಕ್ಕೂಟದಲ್ಲಿ 56 ಸದಸ್ಯ ರಾಷ್ಟ್ರಗಳಿವೆ. ಇದಲ್ಲದೆ ಒಲಿಂಪಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸದ ಇತರ ಪ್ರಾಂತ್ಯಗಳಿಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿ 72 ಧ್ವಜಗಳ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ USA ತಂಡವಿದೆಯೇ?
ಯುಎಸ್ಎ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದರೂ ಸಹ, ಕಾಮನ್ವೆಲ್ತ್ನ ಭಾಗವಲ್ಲ. ಹೀಗಾಗಿ ಯುಎಸ್ಎ ತಂಡವು ಇದುವರೆಗೆ ಈ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿಲ್ಲ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಷ್ಟ್ರಗಳು ಯಾವುವು?
ಜುಲೈ 28 ರಿಂದ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
Published On - 5:33 pm, Mon, 25 July 22