
2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ (2028 LA Olympics ) ಕ್ರಿಕೆಟ್ ಅನ್ನು ಸಹ ಸೇರ್ಪಡೆಗೊಳಿಸಲಾಗಿದೆ. ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ತಲಾ ಆರು ತಂಡಗಳು ಭಾಗವಹಿಸಲಿವೆ. ಹಾಗೆಯೇ 2028 ರ ಜುಲೈ 22 ರಿಂದ ಜುಲೈ 29 ನಡುವೆ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಜುಲೈ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳನ್ನು ಟಿ20 ಸ್ವರೂಪದಲ್ಲಿ ಆಡಿಸಲು ತೀರ್ಮಾನಿಸಲಾಗಿದೆ. ಈ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾ (Team India) ಪದಕ ಗೆಲ್ಲುವುದು ಖಚಿತ ಎಂಬ ಕೂಗು ಜೋರಾಗಿ ಕೇಳಿಬರುತ್ತಿತ್ತು. ಆದರೆ ಭಾರತ ಟಿ20 ತಂಡದ ಇತ್ತೀಚಿನ ಪ್ರದರ್ಶನವನ್ನು ನೋಡಿದಾಗ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಕಷ್ಟಕರವಾಗಿ ಕಾಣುತ್ತಿದೆ.
ಮೇಲೆ ಹೇಳಿದಂತೆ ಒಲಿಂಪಿಕ್ಸ್‌ನಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಇದರಲ್ಲಿ 4 ತಂಡಗಳನ್ನು ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಾಲ್ಕು ಖಂಡಗಳಿಂದ ಅಗ್ರಸ್ಥಾನದಲ್ಲಿರುವ 4 ತಂಡಗಳು ಒಲಿಂಪಿಕ್ಸ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ. ಈ 4 ತಂಡಗಳನ್ನು ಡಿಸೆಂಬರ್ 31, 2026 ರಂದು ಐಸಿಸಿ ಶ್ರೇಯಾಂಕದ ಮೂಲಕ ನಿರ್ಧರಿಸಲಾಗುತ್ತದೆ. ಇದರ ಅಡಿಯಲ್ಲಿ, ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಓಷಿಯಾನಿಯಾದಿಂದ ತಲಾ ಒಂದು ತಂಡವು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ. ಇದರರ್ಥ ಏಷ್ಯಾದಿಂದ ಭಾರತ, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ, ಯುರೋಪ್‌ನಿಂದ ಇಂಗ್ಲೆಂಡ್ ಮತ್ತು ಓಷಿಯಾನಿಯಾದಿಂದ ಆಸ್ಟ್ರೇಲಿಯಾ ನೇರ ಸ್ಥಾನ ಪಡೆಯುತ್ತವೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಭಾರತ ಪುರುಷರ ತಂಡದ ಇತ್ತೀಚಿನ ಪ್ರದರ್ಶನವನ್ನು ಗಮನಿಸಿದರೆ, ತಂಡ ಅರ್ಹತೆ ಪಡೆಯುವುದು ಅನುಮಾನ ಎನ್ನಲಾಗುತ್ತಿದೆ.
ವಾಸ್ತವವಾಗಿ ಭಾರತ ಟಿ20 ತಂಡ ಐರ್ಲೆಂಡ್ ಪ್ರವಾಸವನ್ನು ಆರಂಭಿಸಿದಾಗ ಒಟ್ಟು 275 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿತ್ತು. ಆದರೆ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 2-0 ಅಂತರದ ಹೀನಾಯ ಸೋಲನ್ನು ಅನುಭವಿಸಿತು. ಇದರಿಂದಾಗಿ ಭಾರತ ತಂಡದ ರೇಟಿಂಗ್ ಪಾಯಿಂಟ್‌ಗಳು 272 ಕ್ಕೆ ಕುಸಿದಿದೆ. ಈಗ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ, ಭಾರತವು ಇಲ್ಲಿಯವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಅವಮಾನಕರ ಪ್ರದರ್ಶನದ ನಂತರ, ಟೀಂ ಇಂಡಿಯಾದ ರೇಟಿಂಗ್ ಪಾಯಿಂಟ್‌ಗಳು 269 ಕ್ಕೆ ಕುಸಿದಿದೆ.
ಮತ್ತೊಂದೆಡೆ, ಇಂಗ್ಲೆಂಡ್ ತಂಡ ಸತತ ಗೆಲುವುಗಳ ಮೂಲಕ ತನ್ನ ರೇಟಿಂಗ್ ಪಾಯಿಂಟ್‌ಗಳನ್ನು 267ಕ್ಕೆ ಏರಿಸಿಕೊಂಡಿದೆ. ಅಂದರೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ಕೇವಲ ಎರಡು ಪಾಯಿಂಟ್‌ಗಳ ಅಂತರವಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಸೋತರೆ, ತನ್ನ ನಂಬರ್ ಒನ್ ಸ್ಥಾನವನ್ನು ಕಳೆದುಕೊಳ್ಳುತ್ತದೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ; ಟಿವಿ9 ಜೊತೆ ಯುವ ಟೆನಿಸ್ ಆಟಗಾರ್ತಿ ಸೃಷ್ಟಿ ಕಿರಣ್ ಮಾತು
ಒಲಿಂಪಿಕ್ಸ್ ಅರ್ಹತಾ ನಿಯಮಗಳ ಪ್ರಕಾರ, ಭಾರತ ಪುರುಷರ ತಂಡವು ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆಯಲು ಬಯಸಿದರೆ, 2026 ರ ಅಂತ್ಯದ ವೇಳೆಗೆ ಏಷ್ಯನ್ ತಂಡಗಳಲ್ಲಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಯಬೇಕು. ಒಂದು ವೇಳೆ ಟೀಂ ಇಂಡಿಯಾದ ಪ್ರದರ್ಶನ ಇದೇ ರೀತಿ ಕುಸಿಯುತ್ತಲೇ ಇದ್ದರೆ, ಭವಿಷ್ಯದಲ್ಲಿ ಅದು ಗಮನಾರ್ಹ ನಷ್ಟವನ್ನು ಎದುರಿಸಬೇಕಾಗುತ್ತದೆ. ಏಷ್ಯನ್ ತಂಡ ಶ್ರೇಯಾಂಕದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನವು ಒಟ್ಟಾರೆ ಶ್ರೇಯಾಂಕದಲ್ಲಿ 240 ರೇಟಿಂಗ್ ಅಂಕಗಳೊಂದಿಗೆ ಪ್ರಸ್ತುತ ಆರನೇ ಸ್ಥಾನದಲ್ಲಿದೆ, ಭಾರತಕ್ಕಿಂತ ಗಮನಾರ್ಹವಾಗಿ ಹಿಂದಿದೆ. ಆದಾಗ್ಯೂ, ಭಾರತ ತನ್ನ ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯಾಗಿ ಸೋಲುತ್ತಾ ಹೋದರೆ, ಅದರ ರೇಟಿಂಗ್ ಪಾಯಿಂಟ್‌ಗಳು ಕಡಿಮೆಯಾಗಲಿವೆ. ಇದು ಪಾಕಿಸ್ತಾನಕ್ಕೆ ಲಾಭದಾಯಕವಾಗಬಹುದು. ಹೀಗಾಗಿ ಟೀಂ ಇಂಡಿಯಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ತನ್ನ ಮುಂದಿನ ಟಿ20 ಪಂದ್ಯಗಳನ್ನು ಗೆಲ್ಲಲೇಬೇಕಿದೆ.