
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿತು. ತಂಡದ ಈ ಗೆಲುವಿಗೆ ದಾಖಲೆಯ ಶತಕದ ಕೊಡುಗೆ ನೀಡಿದ ಅಭಿಷೇಕ್ ಶರ್ಮಾರನ್ನು ಅವರ ಗುರು ಯುವರಾಜ್ ಸಿಂಗ್ ತಮಾಷೆಯಾಗಿ ಕಾಲೆಳೆದಿದ್ದರು. ನನ್ನ 12 ಎಸೆತಗಳ ಅರ್ಧಶತಕದ ದಾಖಲೆಯನ್ನು ನಿನಗೆ ಈ ಪಂದ್ಯದಲ್ಲೂ ಮುರಿಯಲು ಸಾಧ್ಯವಾಗಲಿಲ್ಲವಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಆ ಪೋಸ್ಟ್ಗೆ ಅಭಿಷೇಕ್ ಶರ್ಮಾ ನಯವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಈ ಪಂದ್ಯದಲ್ಲಿ ಅಭಿಷೇಕ್ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನಂತರ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್ ತಮಾಷೆಯಾಗಿ, ‘ನಿನಗೆ ಇನ್ನೂ 12 ಎಸೆತಗಳಲ್ಲಿ 50 ರನ್ ಗಳಿಸಲು ಆಗುತ್ತಿಲ್ಲ ಅಲ್ವಾ ಅಭಿಷೇಕ್?’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಇದೀಗ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಯುವರಾಜ್ ಅವರ ತಮಾಷೆಗೆ ಪ್ರತಿಕ್ರಿಯಿಸಿದರುವ ಅಭಿಷೇಕ್, ‘ನಾನು ಈ ಹಿಂದೆಯೂ ಹೇಳಿದ್ದೇನೆ. ಆ ಸಮಯದಲ್ಲಿ ಅವರು ಯಾವ ರೀತಿಯ ಕ್ರಿಕೆಟ್ ಆಡುತ್ತಿದ್ದರೋ ನನಗೆ ಗೊತ್ತಿಲ್ಲ. ಯಾರಾದರೂ ಕ್ರೀಸ್ಗೆ ಹೋಗಿ ಹಾಗೆ ಬ್ಯಾಟಿಂಗ್ ಮಾಡಬೇಕು ಅಂದುಕೊಂಡರೂ ಅದು ಸುಲಭವಲ್ಲ. 12 ಎಸೆತಗಳಲ್ಲಿ ಅರ್ಧಶತಕ ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ನಾವು ಅದರ ಬಗ್ಗೆ ಯೋಚಿಸುವುದಿಲ್ಲ. ನಮ್ಮ ತಂಡವನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ’ ಎಂದು ಅಭಿಷೇಕ್ ಹೇಳಿದ್ದಾರೆ.
ಗಮನಾರ್ಹವಾಗಿ, ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅಭಿಷೇಕ್ ಶರ್ಮಾ ಅವರಿಗೆ ಮಾರ್ಗದರ್ಶನ ನೀಡಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಯುವರಾಜ್, ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಇದೇ ಪಂದ್ಯದಲ್ಲಿ ಯುವರಾಜ್, ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್ನಲ್ಲಿ ಸತತ ಆರು ಸಿಕ್ಸರ್ಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದ್ದರು.
ತಮ್ಮ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅಭಿಷೇಕ್, 15 ವರ್ಷದ ವೈಭವ್ ಸೂರ್ಯವಂಶಿ ಜೊತೆಗಿನ ಆರಂಭಿಕ ಜೊತೆಯಾಟದಲ್ಲಿ ಇಬ್ಬರೂ ಆಟವನ್ನು ಆನಂದಿಸುವುದರ ಜೊತೆಗೆ ಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಗಮನ ನೀಡಿದ್ದಾಗಿ ಹೇಳಿದರು.
‘ನಾನು ಮತ್ತು ವೈಭವ್ ಕ್ರೀಸ್ನಲ್ಲಿ ನಮ್ಮ ಸಮಯವನ್ನು ಆನಂದಿಸುವುದೇ ಮುಖ್ಯವಾಗಿತ್ತು. ನಾವು ಫೀಲ್ಡಿಂಗ್ ಮಾಡುವಾಗ ಪಿಚ್ನಲ್ಲಿ ಹೆಚ್ಚುವರಿ ಬೌನ್ಸ್ ಇರುವುದನ್ನು ಗಮನಿಸಿದ್ದೆವು. ಜೊತೆಗೆ ಬೌಂಡರಿ ದೂರ ಕಡಿಮೆ ಇರುವ ಭಾಗವನ್ನು ಗುರಿಯಾಗಿಸಿಕೊಳ್ಳಬಹುದೆಂದು ಅರಿತುಕೊಂಡಿದ್ದೆವು. ವೈಭವ್ ಉತ್ತಮ ಆರಂಭ ನೀಡಿದರು. ಅಲ್ಲಿಂದ ನಾವು ಅದೇ ವೇಗವನ್ನು ಮುಂದುವರಿಸಿದೆವು.
‘ನನ್ನ ದಾಖಲೆ ಮುರಿಯಲು ಇನ್ನೂ ಆಗಿಲ್ಲ ಅಲ್ವಾ?’; ಅಭಿಷೇಕ್ಗೆ ಯುವರಾಜ್ ಟಾಂಗ್!
ಇದೆಲ್ಲ ಸುಲಭವಾಗಿ ಆಗುವುದಿಲ್ಲ. ಇದರ ಹಿಂದೆ ಉತ್ತಮ ತಯಾರಿ ಇರುತ್ತದೆ. ನಮ್ಮ ಕೋಚಿಂಗ್ ಸಿಬ್ಬಂದಿ ಮತ್ತು ಸೈಡ್ಆರ್ಮ್ ಬೌಲರ್ಗಳಿಗೆ ವಿಶೇಷ ಧನ್ಯವಾದಗಳು. ಹಿಂದಿನ ದಿನ ನಾವು ಉತ್ತಮ ಅಭ್ಯಾಸ ನಡೆಸಿದ್ದೆವು. ಆ ಅಭ್ಯಾಸದ ಲಾಭವನ್ನು ಪಂದ್ಯದಲ್ಲಿ ಬಳಸಿಕೊಳ್ಳಬೇಕೆಂದುಕೊಂಡಿದ್ದೆ. ಈ ಇನ್ನಿಂಗ್ಸ್ ಆಡಬೇಕೆಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ, ಅದು ಈಗ ನಿಜವಾಗಿದೆ’ ಎಂದಿದ್ದಾರೆ.
Published On - 7:37 pm, Tue, 27 October 26