AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಹ್ಸಿನ್ ನಖ್ವಿ ವಿರುದ್ಧ ತಿರುಗಿಬಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್!

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಅವಧಿಯು ಭಾರತ-ಪಾಕ್ ನಡುವಿನ ತೀವ್ರ ರಾಜಕೀಯ ಜಿದ್ದಾಜಿದ್ದಿನಿಂದಾಗಿ ಭಾರಿ ವಿವಾದಕ್ಕೀಡಾಗಿದೆ. ನಖ್ವಿ ಅವರ ಭಾರತ ವಿರೋಧಿ ನಿಲುವು ಹಾಗೂ ಪ್ರಚೋದನಾತ್ಮಕ ಪೋಸ್ಟ್‌ಗಳ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಏಷ್ಯಾಕಪ್ ಗೆದ್ದಾಗಲೂ ಅವರ ಕೈಯಿಂದ ನೇರವಾಗಿ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದವು.

ಮೊಹ್ಸಿನ್ ನಖ್ವಿ ವಿರುದ್ಧ ತಿರುಗಿಬಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್!
Mohsin NaqviImage Credit source: PCB
ಝಾಹಿರ್ ಯೂಸುಫ್
|

Updated on: Sep 30, 2026 | 7:44 AM

Share

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಲಯದಲ್ಲಿ ಈಗ ಭಾರಿ ಆಡಳಿತಾತ್ಮಕ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಸ್ತುತ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಕೌನ್ಸಿಲ್‌ನ ಪ್ರಮುಖ ಸದಸ್ಯ ರಾಷ್ಟ್ರಗಳು ತಿರುಗಿಬಿದ್ದಿದ್ದು, ಅವರ ಅಧಿಕಾರಾವಧಿ ವಿಸ್ತರಣೆಯ ಕನಸು ಕಮರಿಹೋಗಿದೆ. ಇದರ ಬೆನ್ನಲ್ಲೇ, ಇದರ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.

ಬೆಂಬಲ ಕಳೆದುಕೊಂಡ ನಖ್ವಿ:

ನಂಬಲರ್ಹ ಮೂಲಗಳ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಮುಖ 5 ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಪೈಕಿ (ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನ್) ಕನಿಷ್ಠ ಮೂರರಿಂದ ನಾಲ್ಕು ದೇಶಗಳು ಮೊಹ್ಸಿನ್ ನಖ್ವಿ ಅವರ ನಾಯಕತ್ವಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ನಡೆದ ಟೂರ್ನಿಗಳ ಆಯೋಜನೆ ಮತ್ತು ರಾಜಕೀಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ನಖ್ವಿ ನಡೆ ಜಾಗತಿಕ ಕ್ರಿಕೆಟ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಅಧಿಕಾರಾವಧಿ ಮತ್ತು ರೊಟೇಷನ್ ನೀತಿ:

  • ಮೊಹ್ಸಿನ್ ನಖ್ವಿ ಅವರ ಪ್ರಸ್ತುತ ಎರಡು ವರ್ಷಗಳ ಅಧಿಕಾರಾವಧಿಯು 2027ರ ಏಪ್ರಿಲ್ 2 ರಂದು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.
  • ಎಸಿಸಿ ನಿಯಮಾವಳಿಗಳ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಅಧ್ಯಕ್ಷರ ಅವಧಿ ವಿಸ್ತರಿಸಲು ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರ ಒಮ್ಮತದ ಬೆಂಬಲ ಅಗತ್ಯವಿರುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಖ್ವಿಗೆ ಬಹುಮತವೇ ಇಲ್ಲದ ಕಾರಣ ಅವಧಿ ವಿಸ್ತರಣೆ ಅಸಾಧ್ಯವಾಗಿದೆ.
  • ಎಸಿಸಿ ಅಧ್ಯಕ್ಷ ಸ್ಥಾನವು ರೊಟೇಷನ್ ಆಧಾರದ ಮೇಲೆ ನಡೆಯುತ್ತದೆ. ಪಾಕಿಸ್ತಾನದ ನಂತರ ಮುಂದಿನ ಸರದಿ ಬಾಂಗ್ಲಾದೇಶದ್ದಾಗಿದೆ.

ವಿವಾದದಲ್ಲೇ ಕಳೆದ ಮೊಹ್ಸಿನ್ ನಖ್ವಿ:

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರ ಅಧಿಕಾರಾವಧಿಯು ಭಾರತ ಮತ್ತು ಪಾಕಿಸ್ತಾನ ನಡುವಿನ ತೀವ್ರ ರಾಜಕೀಯ ಹಾಗೂ ಕ್ರೀಡಾ ಬಿಕ್ಕಟ್ಟುಗಳಿಂದಾಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ, ನಖ್ವಿ ಅವರ ಭಾರತ ವಿರೋಧಿ ನಿಲುವು ಹಾಗೂ ಪ್ರಚೋದನಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹಿನ್ನೆಲೆಯಲ್ಲಿ, ಭಾರತೀಯ ಪುರುಷರ ಕ್ರಿಕೆಟ್ ತಂಡ (2025) ಮತ್ತು ಮಹಿಳಾ ಕ್ರಿಕೆಟ್ ತಂಡ (2026) ಏಷ್ಯಾಕಪ್ ಟೂರ್ನಿಗಳನ್ನು ಗೆದ್ದಾಗ ಅವರ ಕೈಯಿಂದ ವಿಜೇತರ ಟ್ರೋಫಿ ಸ್ವೀಕರಿಸಲು ನೇರವಾಗಿ ನಿರಾಕರಿಸಿದ್ದವು.

ಇದರಿಂದ ಕುಪಿತರಾಗಿದ್ದ ನಖ್ವಿ ಅವರು ತಾವಿದ್ದ ಹೋಟೆಲ್‌ಗೆ ಟ್ರೋಫಿಗಳನ್ನು ಕೊಂಡೊಯ್ದು ಭಾರತ ತಂಡದ ಸಾಂಪ್ರದಾಯಿಕ ಸಂಭ್ರಮಾಚರಣೆಗೆ ಅಡ್ಡಿಪಡಿಸಿದ್ದರು ಮತ್ತು ಟ್ರೋಫಿ ಹಸ್ತಾಂತರಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿದ್ದರು. ಇದಲ್ಲದೆ, 2025ರ ಏಷ್ಯಾಕಪ್ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ಹ್ಯಾಂಡ್​ ಶೇಕ್ ಮಾಡದ ವಿವಾದ ಉಲ್ಬಣಗೊಳ್ಳಲು ಭಾರತವೇ ಕಾರಣ ಎಂದು ಸಾರ್ವಜನಿಕವಾಗಿ ದೂರಿದ್ದ ನಖ್ವಿ ನಡೆ, ಕೌನ್ಸಿಲ್‌ನ ಆಡಳಿತವನ್ನು ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಪರಿವರ್ತಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ನಖ್ವಿ ವಿರುದ್ಧ ಏಷ್ಯಾದ ಪ್ರಮುಖ ಕ್ರಿಕೆಟ್ ಮಂಡಳಿಗಳು ತಿರುಗಿ ನಿಂತಿವೆ.

ರೇಸ್‌ನಲ್ಲಿ ತಮೀಮ್ ಇಕ್ಬಾಲ್:

ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಬಿಸಿಬಿ ಮುಖ್ಯಸ್ಥರಾಗಿರುವ ತಮೀಮ್ ಇಕ್ಬಾಲ್ ಅವರು ಎಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲು ತೀವ್ರ ಆಸಕ್ತಿ ತೋರಿಸಿದ್ದಾರೆ. ತಾವು ಈ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿರುವುದಾಗಿ ಅವರು ಈಗಾಗಲೇ ಎಸಿಸಿ ಮಂಡಳಿಯ ಸದಸ್ಯರಿಗೆ ಅಧಿಕೃತವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಇರಾನಿ ಕಪ್​ ಪಂದ್ಯಕ್ಕೆ ತಂಡಗಳು ಪ್ರಕಟ

ಭಾರತ ಸೇರಿದಂತೆ ಇತರ ಪ್ರಮುಖ ಸದಸ್ಯ ರಾಷ್ಟ್ರಗಳು ಕೂಡ ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ. ಏಷ್ಯನ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ್ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಎಸಿಸಿ ಟೂರ್ನಿಗಳ ಆಯೋಜನೆಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಈಗ ತಮೀಮ್ ಇಕ್ಬಾಲ್ ಅವರ ಸಾರಥ್ಯದಲ್ಲಿ ಕೌನ್ಸಿಲ್ ಹೊಸ ಹಾದಿಯಲ್ಲಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More