
ಐಪಿಎಲ್ 2025 ಸೀಸನ್ ಮುಗಿಯುತ್ತಾ ಬಂದಿದ್ದು, ಯಾರು ಚಾಂಪಿಯನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಏತನ್ಮಧ್ಯೆ, ಅನೇಕ ದೇಶಗಳಲ್ಲಿ ಪ್ರಥಮ ದರ್ಜೆ ಪಂದ್ಯಾವಳಿಗಳು ನಡೆಯುತ್ತಿವೆ. ಅಫ್ಘಾನಿಸ್ತಾನದಲ್ಲೂ ದೇಶೀಯ ಪಂದ್ಯಾವಳಿ ಆರಂಭವಾಗಿದ್ದು ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ 811 ರನ್ ಕಲೆಹಾಕಿದೆ. ಅಲ್ಲದೆ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳು ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿಯಂತೆ, ಅಫ್ಘಾನಿಸ್ತಾನದಲ್ಲಿ ಪ್ರಥಮ ದರ್ಜೆ ಪಂದ್ಯಾವಳಿಯನ್ನು ಸಹ ನಡೆಸಲಾಗುತ್ತದೆ. ಅದರಂತೆ ಪ್ರಸ್ತುತ ಅಹ್ಮದ್ ಶಾ ಅಬ್ದಾಲಿ 4-ದಿನಗಳ ಟೂರ್ನಮೆಂಟ್‌ನ ಹೊಸ ಸೀಸನ್ ನಡೆಯುತ್ತಿದೆ. ಈ ಪಂದ್ಯಾವಳಿಯ 9 ನೇ ಪಂದ್ಯದಲ್ಲಿ, ಹಿಂದೂಕುಶ್ ಸ್ಟ್ರೈಕರ್ಸ್ ಪಮೀರ್ ಲೆಜೆಂಡ್ಸ್ ತಂಡವನ್ನು ಎದುರಿಸಿದೆ. ಹಿಂದಿನ ಪಂದ್ಯವನ್ನು ಸೋತಿದ್ದ ಹಿಂದೂಕುಶ್ ತಂಡ ಈ ಬಾರಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿ ರನ್‌ಗಳ ಬೆಟ್ಟವನ್ನೇ ಸೃಷ್ಟಿಸಿದೆ.
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಹಿಂದೂಕುಶ್ ತಂಡ ತಂಡದ ಬ್ಯಾಟ್ಸ್‌ಮನ್‌ಗಳು ಬೃಹತ್ ಸ್ಕೋರ್ ದಾಖಲಿಸಿದ್ದು, ಸೋಲುವುದು ಬಹುತೇಕ ಅಸಾಧ್ಯವಾಗಿದೆ. ಹಿಂದೂಕುಷ್ ತಂಡದ ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಸುಮಾರು ಎರಡೂವರೆ ದಿನಗಳ ಕಾಲ ಬ್ಯಾಟಿಂಗ್ ಮಾಡಿ 9 ವಿಕೆಟ್‌ಗಳಿಗೆ 811 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಹಾಗೂ ಈ ಸೀಸನ್ನ ಅತ್ಯಧಿಕ ಸ್ಕೋರ್ ಎಂಬ ದಾಖಲೆಯನ್ನು ಈ ತಂಡ ಸೃಷ್ಟಿಸಿದೆ.
ತಂಡವನ್ನು ಈ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಾಲ್ವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಪಾತ್ರ ವಹಿಸಿದರು. ಆರಂಭಿಕ ಆಟಗಾರ ಹಸನ್ ಇಸಾಖಿಲ್ 128 ರನ್ ಗಳಿಸಿದರೆ, ಅವರ ಜೊತೆಗಾರ ನೂರ್ ಉಲ್ ರೆಹಮಾನ್ 132 ರನ್ ಗಳಿಸಿದರು. ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಹಶ್ಮತುಲ್ಲಾ ಶಾಹಿದಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 153 ರನ್ ಗಳಿಸಿದರು. ಇವರ ಜೊತೆಗೆ ತಂಡದ ನಾಯಕ ಮೊಹಮ್ಮದ್ ಆಸಿಫ್ ಅವರು 245 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಪಮೀರ್ ತಂಡದ ಅಗ್ರ ಕ್ರಮಾಂಕಕ್ಕೆ ಈ ರೀತಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕೇವಲ 112 ರನ್‌ಗಳಿಗೆ 3 ವಿಕೆಟ್‌ಗಳು ಬಿದ್ದವು. ಆದರೆ ಇದಾದ ನಂತರ, ಅಫ್ಘಾನಿಸ್ತಾನ ಪರ ಆಡಿದ ರಹಮತ್ ಷಾ ತಮ್ಮ ಅನುಭವ ಮತ್ತು ಉತ್ತಮ ಪ್ರದರ್ಶನವನ್ನು ಮುಂದುವರೆಸಿ ಅದ್ಭುತ ಶತಕ ಗಳಿಸಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ರೆಹಮತ್ ಶಾ ತಂಡದ ಮೊದಲ ಇನ್ನಿಂಗ್ಸ್ ಜವಾಬ್ದಾರಿ ನಿರ್ವಹಿಸಿದರು. ಆದಾಗ್ಯೂ, ಹಿಂದೂಕುಶ್ ಮೊದಲ ಇನ್ನಿಂಗ್ಸ್ ಮುನ್ನಡೆಯಿಂದಾಗಿ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ