ಆರ್‌ಸಿಬಿಗೆ ಅಂಕಿಅಂಶಗಳ ಬೆಂಬಲ; ಕ್ವಾಲಿಫೈಯರ್-1 ಗೆದ್ದ ತಂಡ ಎಷ್ಟು ಬಾರಿ ಚಾಂಪಿಯನ್ ಆಗಿದೆ ಗೊತ್ತಾ?
IPL 2025: ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆಲ್ಲುವ ತಂಡವು ಫೈನಲ್‌ನಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ. ಕ್ವಾಲಿಫೈಯರ್ 1 ಗೆದ್ದ ತಂಡಗಳು ಹೆಚ್ಚಾಗಿ ಐಪಿಎಲ್ ಗೆದ್ದಿರುವ ಇತಿಹಾಸವಿದೆ. ಆದರೆ ಕ್ವಾಲಿಫೈಯರ್ 2 ಗೆದ್ದ ತಂಡಗಳು ಕೂಡ ಚಾಂಪಿಯನ್ ಆಗಿರುವ ಉದಾಹರಣೆಗಳಿವೆ.

ಐಪಿಎಲ್ 2025 (IPL 2025) ಮುಕ್ತಾಯದ ಹಂತ ತಲುಪಿದೆ. ಇಂದು ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ (PBKS vs MI) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಅಲ್ಲದೆ ಇದುವರೆಗೆ ನಡೆದಿರುವ ಐಪಿಎಲ್ ಇತಿಹಾಸ ಹಾಗೂ ಅಂಕಿಅಂಶಗಳೆಲ್ಲ ಆರ್‌ಸಿಬಿ ಪರವಾಗಿವೆ. ಏಕೆಂದರೆ ಐಪಿಎಲ್‌ನಲ್ಲಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಅಧಿಕ ಬಾರಿ ಪ್ರಶಸ್ತಿ ಗೆದ್ದಿದೆ.
11 ಬಾರಿ ಚಾಂಪಿಯನ್
ಐಪಿಎಲ್ ಆರಂಭದಲ್ಲಿ, ಅಂದರೆ 2008 ರಿಂದ 2010 ರವರೆಗೆ, ಲೀಗ್‌ನ ನಾಕೌಟ್ ಪಂದ್ಯಗಳನ್ನು ಸೆಮಿಫೈನಲ್ ಸ್ವರೂಪದಲ್ಲಿ ಆಡಲಾಗುತ್ತಿತ್ತು. ಆದಾಗ್ಯೂ, 2011 ರಿಂದ ಅದರ ನಿಯಮಗಳನ್ನು ಬದಲಾಯಿಸಿ ಪ್ಲೇಆಫ್‌ಗಳನ್ನು ಪರಿಚಯಿಸಲಾಯಿತು. ಕ್ವಾಲಿಫೈಯರ್-1, ಕ್ವಾಲಿಫೈಯರ್-2 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಜಾರಿಗೆ ತರಲಾಯಿತು. ಅಂದಿನಿಂದ 2024 ರವರೆಗೆ, ಒಟ್ಟು 14 ಸೀಸನ್‌ಗಳು ನಡೆದಿವೆ. ಈ ಪೈಕಿ 11 ಬಾರಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಫೈನಲ್ ಗೆದ್ದಿದೆ.
ಮೂರು ಬಾರಿ ಫೇಲ್
ಇತ್ತ ಕ್ವಾಲಿಫೈಯರ್-1 ಗೆದ್ದ ತಂಡವು ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ವಿಫಲವಾದದ್ದು ಕೇವಲ ಮೂರು ಬಾರಿ ಮಾತ್ರ. ಈ ಅಂಕಿ ಅಂಶ ಕೂಡ ಆರ್‌ಸಿಬಿಗೆ ಕೊಂಚ ತಲೆನೋವು ತಂದಿದೆ. ಇದಕ್ಕೆ ಪೂರಕವಾಗಿ ಇದು ಆರ್‌ಸಿಬಿಗೆ ನಾಲ್ಕನೇ ಫೈನಲ್. ಇದಕ್ಕೂ ಮೊದಲು, ತಂಡವು 2009, 2011 ಮತ್ತು 2016 ರಲ್ಲಿ ಫೈನಲ್ ತಲುಪಿತ್ತು. 2016 ರಲ್ಲಿ, ಆರ್‌ಸಿಬಿ ಕ್ವಾಲಿಫೈಯರ್ -1 ಗೆದ್ದ ನಂತರ ಫೈನಲ್ ತಲುಪಿತು, ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು.
ಇದು ಮಾತ್ರವಲ್ಲದೆ 2013, 2016 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 ಗೆದ್ದ ತಂಡ ಫೈನಲ್‌ನಲ್ಲಿ ಸೋತಿತ್ತು. ಇತ್ತ ಕ್ವಾಲಿಫೈಯರ್ 2 ಗೆದ್ದ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-1 ರಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ತಲುಪಿತು. ಆದಾಗ್ಯೂ, ಆ ನಂತರ ಮುಂಬೈ ಕ್ವಾಲಿಫೈಯರ್ -2 ಗೆದ್ದು ಫೈನಲ್ ತಲುಪಿ, ಸಿಎಸ್ಕೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 2017 ರಲ್ಲಿಯೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವು ಕ್ವಾಲಿಫೈಯರ್ -1 ರಲ್ಲಿ ಮುಂಬೈ ತಂಡವನ್ನು ಸೋಲಿಸಿತ್ತು. ಆದಾಗ್ಯೂ, ಮುಂಬೈ ತಂಡವು ಕ್ವಾಲಿಫೈಯರ್-2 ಗೆದ್ದುಕೊಂಡಿದಲ್ಲದೆ, ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಒಂದು ರನ್‌ನಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
IPL 2025: ಆರ್‌ಸಿಬಿ ಕಪ್ ಗೆಲ್ಲಬೇಕೆಂದರೆ ಮುಂಬೈ ಫೈನಲ್ಗೇರಲೇಬಾರದು..!
ಆರ್‌ಸಿಬಿಗೆ ಬಲ ತುಂಬಿದ ಅಂಕಿ ಅಂಶ
ಹೀಗಾಗಿ ಮುಂಬೈ ತಂಡಕ್ಕೆ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸುವ ಅವಕಾಶವಿದೆ. ಅಲ್ಲದೆ ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಂಜಾಬ್‌ಗೆ ಮತ್ತೊಂದು ಅವಕಾಶವಿದೆ. ಏಕಂದರೆ 2013 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 (ಮುಂಬೈ) ನಲ್ಲಿ ಸೋತ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇತ್ತ 2018 ರಿಂದ 2024 ರವರೆಗೆ ಕ್ವಾಲಿಫೈಯರ್ -1 ಗೆದ್ದ ತಂಡವೇ ಚಾಂಪಿಯನ್ ಆಗಿರುವುದರಿಂದ ಈ ಅಂಕಿ ಅಂಶ ಆರ್‌ಸಿಬಿಗೆ ಮತ್ತಷ್ಟು ಬಲ ತುಂಬಿದೆ. 2018, 2021, 2023 ರಲ್ಲಿ ಕ್ವಾಲಿಫೈಯರ್ 1 ಗೆದ್ದಿದ್ದ ಸಿಎಸ್ಕೆ ಚಾಂಪಿಯನ್ ಆಗಿದ್ದರೆ, 2019 ಮತ್ತು 2020 ರಲ್ಲಿ ಮುಂಬೈ ಈ ಸಾಧನೆ ಮಾಡಿತ್ತು. ಹಾಗೆಯೇ 2022 ರಲ್ಲಿ ಗುಜರಾತ್ ಮತ್ತು 2024 ರಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Sun, 1 June 25
