AFG vs SA: ಸೋತು ಸೋತು ಗೆದ್ದ ಸೌತ್ ಆಫ್ರಿಕಾ

| Updated By: ವಿವೇಕ ಬಿರಾದಾರ

Updated on: Sep 23, 2024 | 7:50 AM

Afghanistan vs South Africa: ಮೊದಲ ಪಂದ್ಯದಲ್ಲಿ ಅಫ್ಘಾನ್ ಪಡೆ ಸೌತ್ ಆಫ್ರಿಕಾವನ್ನು 6 ವಿಕೆಟ್ ಗಳಿಂದ ಸೋಲಿಸಿತ್ತು. ಅಲ್ಲದೆ 2ನೇ ಏಕದಿನ ಪಂದ್ಯದಲ್ಲಿ 177 ರನ್ ಗಳ ಅಮೋಘ ಗೆಲುವು ದಾಖಲಿಸಿತ್ತು. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧ ಚೊಚ್ಚಲ ಸರಣಿ ಗೆಲ್ಲುವಲ್ಲಿ ಅಫ್ಘಾನಿಸ್ತಾನ್ ತಂಡ ಯಶಸ್ವಿಯಾಗಿದೆ.

AFG vs SA: ಸೋತು ಸೋತು ಗೆದ್ದ ಸೌತ್ ಆಫ್ರಿಕಾ
Follow us on

ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲೆರಡು ಮ್ಯಾಚ್ ಗಳಲ್ಲಿ ಮುಗ್ಗರಿಸಿದ್ದ ಆಫ್ರಿಕನ್ನರು ಕೊನೆಯ ಪಂದ್ಯದಲ್ಲಿ ಗೆದ್ದು ಕ್ಲೀನ್ ಸ್ವೀಪ್ ತಪ್ಪಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನ್ ಪಡೆಗೆ ರಹಮಾನುಲ್ಲಾ ಗುರ್ಬಾಝ್ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ಅಬ್ದುಲ್ ಮಲಿಕ್ (9), ರಹಮತ್ ಶಾ (1) ಬೇಗನೆ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಶಾಹಿದಿ 10 ರನ್ ಗಳಿಸಿದರೆ, ಒಮರ್ ಝಾಹಿ ಕೇವಲ 2 ರನ್ ಬಾರಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಇಕ್ರಮ್ (4) ಹಾಗೂ ಅನುಭವಿ ಮೊಹಮ್ಮದ್ ನಬಿ (5) ಸಹ ವಿಕೆಟ್ ಕೈ ಚೆಲ್ಲಿದರು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ರಹಮಾನುಲ್ಲಾ ಗುರ್ಬಾಝ್ 94 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 89 ರನ್ ಸಿಡಿಸಿದರು. ಆದರೆ ಗುರ್ಬಾಝ್ ಔಟ್ ಆಗುತ್ತಿದ್ದಂತೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸೌತ್ ಆಫ್ರಿಕಾ ಬೌಲರ್‌ಗಳು ಅಫ್ಘಾನಿಸ್ತಾನ್ ತಂಡವನ್ನು 34 ಓವರ್‌ಗಳಲ್ಲಿ ಕೇವಲ 169 ರನ್ ಗಳಿಗೆ ಆಲೌಟ್ ಮಾಡಿದರು. ಸೌತ್ ಆಫ್ರಿಕಾ ಪರ ಲುಂಗಿ ಎನ್ಗಿಡಿ, ನಬಾ ಪೀಟರ್ ಹಾಗೂ ಪೆಹ್ಕುವಾವೊ ತಲಾ 2 ವಿಕೆಟ್ ಪಡೆದರು.

ಸೌತ್ ಆಫ್ರಿಕಾ ಸುಲಭ ಗುರಿ:

170 ರನ್ ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ತೆಂಬಾ ಬವುಮಾ (22) ಹಾಗೂ ಟೋನಿ ಡಿ ಝೋರ್ಝಿ (26) ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಐಡೆನ್ ಮಾರ್ಕ್ರಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

67 ಎಸೆತಗಳನ್ನು ಎದುರಿಸಿದ ಮಾರ್ಕ್ರಾಮ್ 3 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 69 ರನ್ ಬಾರಿಸಿದರು. ಈ ಮೂಲಕ 33 ಓವರ್‌ಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸರಣಿ ಗೆದ್ದ ಅಫ್ಘಾನಿಸ್ತಾನ್:

ಮೂರನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲನುಭವಿಸಿದರೂ ಅಫ್ಘಾನಿಸ್ತಾನ್ ತಂಡ 2-1 ಅಂತರದಿಂದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಅಫ್ಘಾನ್ ಪಡೆ ಸೌತ್ ಆಫ್ರಿಕಾವನ್ನು 6 ವಿಕೆಟ್ ಗಳಿಂದ ಸೋಲಿಸಿತ್ತು. ಅಲ್ಲದೆ 2ನೇ ಏಕದಿನ ಪಂದ್ಯದಲ್ಲಿ 177 ರನ್ ಗಳ ಅಮೋಘ ಗೆಲುವು ದಾಖಲಿಸಿತ್ತು. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧ ಚೊಚ್ಚಲ ಸರಣಿ ಗೆಲ್ಲುವಲ್ಲಿ ಅಫ್ಘಾನಿಸ್ತಾನ್ ತಂಡ ಯಶಸ್ವಿಯಾಗಿದೆ.