Asia Cup 2022: ಫೈನಲ್​ನಲ್ಲಿ ಸೋತ ಪಾಕಿಸ್ತಾನ; ಪಟಾಕಿ ಸಿಡಿಸಿ ಸಂಭ್ರಮಿಸಿದ ಅಫ್ಘಾನ್ ಪ್ರಜೆಗಳು! ವಿಡಿಯೋ

| Updated By: ಪೃಥ್ವಿಶಂಕರ

Updated on: Sep 12, 2022 | 3:03 PM

Asia Cup 2022: ಶ್ರೀಲಂಕಾ ಏಷ್ಯನ್ ಚಾಂಪಿಯನ್ ಆದದ್ದನ್ನು ಕಂಡ ಆಫ್ಘನ್ನರು ಬೀದಿಗಿಳಿದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇವರಲ್ಲಿ ಕೆಲವರು ಕುಣಿದು ಕುಪ್ಪಳಿಸಿದರೆ, ಇನ್ನೂ ಕೆಲವರು ಕಣ್ಣೀರು ಹಾಕಿದರು.

Asia Cup 2022: ಫೈನಲ್​ನಲ್ಲಿ ಸೋತ ಪಾಕಿಸ್ತಾನ; ಪಟಾಕಿ ಸಿಡಿಸಿ ಸಂಭ್ರಮಿಸಿದ ಅಫ್ಘಾನ್ ಪ್ರಜೆಗಳು! ವಿಡಿಯೋ
Afghans celebrate
Follow us on

ಭಾನುವಾರ ನಡೆದ ಏಷ್ಯಾಕಪ್ 2022 ರ ಫೈನಲ್‌ನಲ್ಲಿ (Asia Cup 2022 final) ಶ್ರೀಲಂಕಾ, ಪಾಕಿಸ್ತಾನವನ್ನು ಮಣಿಸಿ 6ನೇ ಬಾರಿಗೆ ಎಷ್ಯಾಕಪ್​ ಗೆದ್ದು ಸಂಭ್ರಮಿಸಿತು. ಆದರೆ ಪಾಕಿಸ್ತಾನದ ಸೋಲಿಗೆ ಯಾವ ದೇಶ ಎಷ್ಟು ನೊಂದುಕೊಂಡಿತೋ ಗೊತ್ತಿಲ್ಲ. ಆದರೆ ಪಾಕ್ ತಂಡದ ಸೋಲನ್ನು ಅದರ ನೆರೆಯ ದೇಶ ಅಫ್ಘಾನಿಸ್ತಾನ ಹಬ್ಬದಂತೆ ಆಚರಿಸಿಕೊಂಡಿದೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ ಏಷ್ಯನ್ ಚಾಂಪಿಯನ್ ಆದದ್ದನ್ನು ಕಂಡ ಆಫ್ಘನ್ನರು ಬೀದಿಗಿಳಿದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇವರಲ್ಲಿ ಕೆಲವರು ಕುಣಿದು ಕುಪ್ಪಳಿಸಿದರೆ, ಇನ್ನೂ ಕೆಲವರು ಕಣ್ಣೀರು ಹಾಕಿದರು. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ

ವಾಸ್ತವವಾಗಿ ಅಂದೊಂದು ಘಟನೆ ನಡೆಯದೆ ಇದ್ದರೆ ಅಫ್ಘನ್ನರು ಈ ರೀತಿಯ ಸಂಭ್ರಮಾಚರಣೆ ಮಾಡುತ್ತಿರಲಿಲ್ಲ ಅನಿಸುತ್ತದೆ. ಅಷ್ಟಕ್ಕೂ ಅಫ್ಘನ್ನರ ಈ ಸಂಭ್ರಮಕ್ಕೆ ಶಾರ್ಜಾದಲ್ಲಿ ಬುಧವಾರ ನಡೆದ ಏಷ್ಯಾಕಪ್ 2022 ರ ಸೂಪರ್ ಫೋರ್ ಪಂದ್ಯದಲ್ಲಿ ಪಾಕ್ ಕ್ರಿಕೆಟಿಗ ತೋರಿದ ದುರ್ವತನೆ ಹಾಗೂ ಅಂತಿಮ ಓವರ್​ನಲ್ಲಿನ ಸೋಲಿನಿಂದಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಆ ಬಳಿಕ ಎರಡು ದೇಶಗಳ ಅಭಿಮಾನಿಗಳು ಹಾವು ಮುಂಗುಸಿಗಳಂತೆ ಸೋಶಿಯಲ್ ಮೀಡಿಯಾದಲ್ಲಿ ಕಾಲ್ಕೆರೆದು ಜಗಳದಲ್ಲಿ ತೊಡಗಿದ್ದರು. ಈಗ ಫೈನಲ್​ನಲ್ಲಿ ಪಾಕಿಸ್ತಾನದ ಸೋಲನ್ನು ಅಫ್ಘಾನ್ ದೇಶದ ನಾಗರಿಕರು ಹಬ್ಬದಂತೆ ಆಚ್ಚರಿಸಿಕೊಂಡಿದ್ದಾರೆ.

ಏಷ್ಯಾಕಪ್ 2022 ರಲ್ಲಿ ಅಫ್ಘಾನಿಸ್ತಾನ ಯಾರೂ ಊಹಿಸದ ಪ್ರದರ್ಶನ ನೀಡಿತ್ತು. ಈ ತಂಡ ಗ್ರೂಪ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಭರ್ಜರಿಯಾಗಿ ಗೆದ್ದು, ಪಂದ್ಯಾವಳಿಯ ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆದಿತ್ತು. ಆದರೆ ಸೂಪರ್ ಫೋರ್ ಹಂತದಲ್ಲಿ ಯಾವುದೇ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿತ್ತು.

171 ರನ್‌ಗಳ ಗುರಿಯನ್ನು ರಕ್ಷಿಸಿದ ಶ್ರೀಲಂಕಾ, ಪ್ರಮೋದ್ ಮದುಶನ್ ಮತ್ತು ವನಿಂದು ಹಸರಂಗ ಅವರ ನಾಲ್ಕು ಮತ್ತು ಮೂರು ವಿಕೆಟ್‌ಗಳ ನೆರವಿನಿಂದ ಪಾಕಿಸ್ತಾನವನ್ನು 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಮಾಡಿತು.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಭಾನುಕಾ ರಾಜಪಕ್ಸೆ ಅವರ 45 ಎಸೆತಗಳಲ್ಲಿ ಅಜೇಯ 71 ರನ್ಗಳ ಆದಾರದ ಮೇಲೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 170 ರನ್ ಗಳಿಸಿತು. ಇದರಲ್ಲಿ ಹಸರಂಗ ಕೂಡ 21 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸುವ ಮೂಲಕ ನಿರ್ಣಾಯಕ ಆಟವಾಡಿದರು. ಇದೇ ವೇಳೆ ಪಾಕ್ ಪರ ಹ್ಯಾರಿಸ್ ರೌಫ್ ಮೂರು ವಿಕೆಟ್ ಪಡೆದರು.