Viral Video: ಪಾಕ್ ಸೋಲನ್ನು ಸಂಭ್ರಮಿಸಿದ ಗೌತಮ್ ಗಂಭೀರ್: ಹೊಸ ವಿವಾದ ಶುರು..!
Gautam Gambhir's video: ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು.
ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಶ್ರೀಲಂಕಾ ತಂಡವು ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲಂಕಾ ತಂಡವು ಏಷ್ಯನ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಶ್ರೀಲಂಕಾದ ಈ ಗೆಲುವನ್ನು ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕೂಡ ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ ಇದೇ ವೇಳೆ ಶ್ರೀಲಂಕಾ ಧ್ವಜ ಹಿಡಿದುಕೊಂಡಿದ್ದ ಗಂಭೀರ್ ವಿಡಿಯೋ ಇದೀಗ ವೈರಲ್ ಆಗಿದೆ. ಇದರೊಂದಿಗೆ ಮತ್ತೊಂದು ವಿವಾದ ಕೂಡ ಶುರುವಾಗಿದೆ.
ಏಕೆಂದರೆ ಗೌತಮ್ ಗಂಭೀರ್ ಯಾವುದೇ ತಂಡದ ಬೆಂಬಲಿಗನಾಗಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಕ್ರಿಕೆಟ್ ಕಾಮೆಂಟರಿ ಮಾಡಲು ಬಂದಿದ್ದರು. ಇದಾಗ್ಯೂ ಒಂದು ತಂಡವನ್ನು ಬೆಂಬಲಿಸಿ ಮೈದಾನದಲ್ಲಿ ಧ್ವಜ ಹಿಡಿದು ಸಂಭ್ರಮಿಸಿರುವುದಕ್ಕೆ ಹಲವು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಪಾಕಿಸ್ತಾನ್ ತಂಡದ ವಿರುದ್ದ ಲಂಕಾ ಗೆದ್ದಿದ್ದನ್ನು ಗೌತಮ್ ಗಂಭೀರ್ ಬೇಕೆಂದೇ ಸಂಭ್ರಮಿಸಿದ್ದಾರೆ ಎಂದು ಅನೇಕ ಪಾಕ್ ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಪಾಕಿಸ್ತಾನ್ ವಿರುದ್ದದ ಆಟಗಾರರೊಂದಿಗೆ ಸದಾ ದ್ವೇಷಕಾರು ಗಂಭೀರ್, ಇದೀಗ ಲಂಕಾ ಜಯವನ್ನೂ ಕೂಡ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಪಾಕ್ ಕ್ರಿಕೆಟ್ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಾಗ್ಯೂ ಭಾರತೀಯ ಕ್ರಿಕೆಟಿಗನಿಗೆ ಶ್ರೀಲಂಕಾ ಅಭಿಮಾನಿಗಳಿಂದ ಭರಪೂರ ಬೆಂಬಲ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಗೌತಮ್ ಗಂಭೀರ್ ಕಾಮೆಂಟ್ರಿ ಮಾಡುವುದರ ಜೊತೆಗೆ ಶ್ರೀಲಂಕಾ ತಂಡ ಧ್ವಜವನ್ನು ಹಾರಿಸುವ ಮೂಲಕ ಮೈದಾನದಲ್ಲಿ ಕಾಣಿಸಿಕೊಂಡು ಇದೀಗ ಹೊಸ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದ ಮತ್ತಷ್ಟು ಮಹತ್ವ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಗೌತಮ್ ಗಂಭೀರ್ ಕಾಮೆಂಟ್ರಿ ಪ್ಯಾನೆಲ್ನಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು. 171 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವನ್ನು 147 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಶ್ರೀಲಂಕಾ ತಂಡವು 23 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
Published On - 2:06 pm, Mon, 12 September 22