Mayank Agarwal: ಮಯಾಂಕ್ ಅಗರ್ವಾಲ್ ಆರೋಗ್ಯ ಈಗ ಹೇಗಿದೆ? ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

|

Updated on: Jan 30, 2024 | 11:05 PM

Mayank Agarwal: ರಣಜಿ ಪಂದ್ಯಕ್ಕಾಗಿ ತ್ರಿಪುರದಿಂದ ಸೂರತ್​ಗೆ ವಿಮಾನ ಪ್ರಯಾಣ ಮಾಡುವ ವೇಳೆ ವಿಮಾನದಲ್ಲಿದ ನೀರನ್ನು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅಗರ್ತಲಾದ ಎಎಲ್​ಎಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

Mayank Agarwal: ಮಯಾಂಕ್ ಅಗರ್ವಾಲ್ ಆರೋಗ್ಯ ಈಗ ಹೇಗಿದೆ? ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
ಮಯಾಂಕ್ ಅಗರ್ವಾಲ್
Follow us on

ರಣಜಿ (Ranji Trophy 2024) ಪಂದ್ಯಕ್ಕಾಗಿ ತ್ರಿಪುರದಿಂದ ಸೂರತ್​ಗೆ ವಿಮಾನ ಪ್ರಯಾಣ ಮಾಡುವ ವೇಳೆ ವಿಮಾನದಲ್ಲಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅಗರ್ತಲಾದ ಎಎಲ್​ಎಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ (Health Bulletin) ಬಿಡುಗಡೆ ಮಾಡಿದೆ. ಅದರಂತೆ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ನುರಿತ ವೈದ್ಯರ ತಂಡ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಯಾಂಕ್ ಅವರ ಆರೋಗ್ಯ ಸ್ಥಿರವಾಗಿದೆ

ಎಎಲ್​ಎಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​ನಲ್ಲಿರುವಂತೆ ‘ಇಂದು ಸಂಜೆ ಕರ್ನಾಟಕದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್, ಗಂಟಲಿನಲ್ಲಿ ಕಿರಿಕಿರಿ ಅನುಭವ ಹಾಗೂ ತುಟಿಯ ಮೇಲೆ ಗುಳ್ಳೆಗಳು ಎದ್ದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಮಯಾಂಕ್ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ತಿಳಿಸಿದೆ.

ಮುಂದಿನ ರಣಜಿ ಪಂದ್ಯಕ್ಕೆ ಅಲಭ್ಯ

ಮಯಾಂಕ್ ಅವರ ಅನಾರೋಗ್ಯದ ಬಗ್ಗೆ ಎಎನ್​ಐ ವರದಿ ಮಾಡಿದ್ದು, ‘ ವಾಂತಿ ಮತ್ತು ತೀವ್ರ ಸುಸ್ತಿನಿಂದಾಗಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರನ್ನು ಎಎಲ್​ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಯಾಂಕ್ ಅವರೊಂದಿಗೆ ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಯಾಂಕ್ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿದಿದ್ದು, ತಂಡದ ಉಳಿದ ಆಟಗಾರರು ಇಂದು ರಾತ್ರಿ ರಾಜ್ ಕೋಟ್​ಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದನ್ನು ತಿಳಿಸಿದೆ.

ರಣಜಿಯಲ್ಲಿ ಕರ್ನಾಟಕ ತಂಡದ ಪ್ರದರ್ಶನ

ಮಯಾಂಕ್ ಅಗರ್ವಾಲ್ ರಣಜಿಯಲ್ಲಿ ಕರ್ನಾಟಕದ ನಾಯಕರಾಗಿದ್ದು, ಇವರ ನಾಯಕತ್ವದಲ್ಲಿ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಏಳು ವಿಕೆಟ್​ಗಳಿಂದ ಸೋಲಿಸಿತ್ತು. ನಂತರ ನಡೆದ ಗುಜರಾತ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಂಡ ಆರು ರನ್​ಗಳಿಂದ ಸೋತಿತ್ತು. ಬಳಿಕ ಗೋವಾ ವಿರುದ್ಧದ ಮೂರನೇ ಪಂದ್ಯ ಡ್ರಾ ಆಗಿತ್ತು. ಇದೀಗ ತ್ರಿಪುರಾ ವಿರುದ್ಧ ನಡೆದಿರುವ ನಾಲ್ಕನೇ ಪಂದ್ಯವನ್ನು ತಂಡ 29 ರನ್‌ಗಳಿಂದ ಗೆದ್ದುಕೊಂಡಿತ್ತು. ಈಗ ಮುಂದಿನ ಪಂದ್ಯವು ಫೆಬ್ರವರಿ 2 ರಿಂದ ಸೂರತ್‌ನಲ್ಲಿ ರೈಲ್ವೇಸ್ ವಿರುದ್ಧ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Tue, 30 January 24