ರೋಹಿತ್, ಕೊಹ್ಲಿ ಬಳಿಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಮತ್ತೊಬ್ಬ ಲೆಜೆಂಡರಿ ಕ್ರಿಕೆಟಿಗ

Angelo Mathews Retires from Test Cricket: ಏಂಜೆಲೊ ಮ್ಯಾಥ್ಯೂಸ್ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 2009 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಮ್ಯಾಥ್ಯೂಸ್ 118 ಪಂದ್ಯಗಳಲ್ಲಿ 8167 ರನ್ ಗಳಿಸಿದ್ದಾರೆ. ಶ್ರೀಲಂಕಾ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿರುವ ಮ್ಯಾಥ್ಯೂಸ್, ಒಡಿಐ ಮತ್ತು ಟಿ20 ಯಲ್ಲಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ.

ರೋಹಿತ್, ಕೊಹ್ಲಿ ಬಳಿಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಮತ್ತೊಬ್ಬ ಲೆಜೆಂಡರಿ ಕ್ರಿಕೆಟಿಗ
Angelo Mathews

Updated on: May 23, 2025 | 3:46 PM

ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದರು. ಈಗ ಮತ್ತೊಬ್ಬ ಶ್ರೇಷ್ಠ ಆಟಗಾರ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ (Angelo Mathews) ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮ್ಯಾಥ್ಯೂಸ್ ತಮ್ಮ ಅಭಿಮಾನಿಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ. 2009 ರಿಂದ ಈ ಸ್ವರೂಪದ ಭಾಗವಾಗಿದ್ದ ಮ್ಯಾಥ್ಯೂಸ್ ಅವರ ಈ ನಿರ್ಧಾರ ಶ್ರೀಲಂಕಾ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗಿದೆ.

ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

ಏಂಜೆಲೊ ಮ್ಯಾಥ್ಯೂಸ್ 2009 ರಲ್ಲಿ ಗಾಲೆಯಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ 16 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮ್ಯಾಥ್ಯೂಸ್ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 44.63 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 16 ಶತಕಗಳು ಮತ್ತು 45 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 200 ರನ್‌. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿರುವ ಮ್ಯಾಥ್ಯೂಸ್, ತಮ್ಮ ವೃತ್ತಿಜೀವನದಲ್ಲಿ 33 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದು, ಕುಮಾರ್ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ನಂತರದ ಸ್ಥಾನದಲ್ಲಿದ್ದಾರೆ.

ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಏಂಜೆಲೊ ಮ್ಯಾಥ್ಯೂಸ್, ‘ನನ್ನ ಪ್ರೀತಿಯ ಸ್ನೇಹಿತರೇ ಮತ್ತು ಕುಟುಂಬವೇ, ಈಗ ನಾನು ಆಟದ ಅತ್ಯಂತ ಪ್ರೀತಿಯ ಸ್ವರೂಪವಾದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಬಂದಿದೆ. ಕಳೆದ 17 ವರ್ಷಗಳಿಂದ ಶ್ರೀಲಂಕಾ ಪರ ಕ್ರಿಕೆಟ್ ಆಡುವುದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ ಮತ್ತು ಹೆಮ್ಮೆ. ರಾಷ್ಟ್ರೀಯ ಜೆರ್ಸಿ ಧರಿಸಿದಾಗ ಮೂಡುವ ದೇಶಭಕ್ತಿ ಭಾವನೆಯನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ನಾನು ನನ್ನ ಎಲ್ಲವನ್ನೂ ಕ್ರಿಕೆಟ್‌ಗೆ ನೀಡಿದ್ದೇನೆ ಮತ್ತು ಪ್ರತಿಯಾಗಿ ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನನ್ನ ದೇಶಕ್ಕಾಗಿ ನನ್ನ ಕೊನೆಯ ರೆಡ್-ಬಾಲ್ ಪಂದ್ಯವಾಗಿರುತ್ತದೆ.

Rohit Sharma: ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ; ವಿಡಿಯೋ ನೋಡಿ

ವೈಟ್ ಬಾಲ್ ಮಾದರಿಗೆ ಲಭ್ಯ

‘ನಾನು ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳುವುದರ ಬಗ್ಗೆ ಆಯ್ಕೆದಾರರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ ನನ್ನ ದೇಶಕ್ಕೆ ನನ್ನ ಅಗತ್ಯವಿದ್ದಾಗಲೆಲ್ಲಾ ನಾನು ಬಿಳಿ ಚೆಂಡಿನ ಸ್ವರೂಪಕ್ಕೆ ಆಯ್ಕೆಗೆ ಲಭ್ಯವಿರುತ್ತೇನೆ. ಲಂಕಾ ಟೆಸ್ಟ್ ತಂಡವು ಪ್ರತಿಭಾನ್ವಿತ ತಂಡವಾಗಿದ್ದು, ಭವಿಷ್ಯದ ಮತ್ತು ಪ್ರಸ್ತುತದ ಅನೇಕ ಶ್ರೇಷ್ಠ ಆಟಗಾರರು ಆಡುತ್ತಿದ್ದಾರೆ. ನಮ್ಮ ದೇಶಕ್ಕಾಗಿ ಯುವ ಆಟಗಾರನೊಬ್ಬ ಮಿಂಚಲು ಈಗ ದಾರಿ ಮಾಡಿಕೊಡಲು ಇದು ಅತ್ಯುತ್ತಮ ಸಮಯವೆಂದು ತೋರುತ್ತದೆ. ಒಂದು ಅಧ್ಯಾಯ ಮುಗಿದಿದೆ, ಆದರೆ ಆಟದ ಮೇಲಿನ ಪ್ರೀತಿ ಶಾಶ್ವತವಾಗಿ ಉಳಿಯುತ್ತದೆ ಎಂದು ಏಂಜೆಲೊ ಮ್ಯಾಥ್ಯೂಸ್ ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Fri, 23 May 25