ಭಾರತದ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಅಬ್ಬರದಿಂದ ಆರಂಭವಾಗಿದೆ. ಟೂರ್ನಿಯ ಮೊದಲ ದಿನವೇ ಹಲವು ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಅರುಣಾಚಲ ಪ್ರದೇಶ ಮತ್ತು ಪಂಜಾಬ್ ತಂಡಗಳ ನಡುವೆ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅನ್ಮೋಲ್ಪ್ರೀತ್ ಸಿಂಗ್ ಸಿಡಿಲಬ್ಬರದ ಶತಕ ಸಿಡಿಸಿ ಬರೋಬ್ಬರಿ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ ಅನ್ಮೋಲ್ಪ್ರೀತ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಟೀಂ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಹೆಸರಿನಲ್ಲಿತ್ತು.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅನ್ಮೋಲ್‌ಪ್ರೀತ್ ಸಿಂಗ್ 45 ಎಸೆತಗಳಲ್ಲಿ 115 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 12 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್‌ಗಳು ಸಿಡಿದವು. ಬರೋಬ್ಬರಿ 255.56 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕಿದ ಅನ್ಮೋಲ್‌ಪ್ರೀತ್ ಏಕಪಕ್ಷೀಯ ರೀತಿಯಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಅನ್ಮೋಲ್‌ಪ್ರೀತ್‌ಗಿಂತ ಮೊದಲು ಯೂಸುಫ್ ಪಠಾಣ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಶತಕ ದಾಖಲಿಸಿದ್ದರು. 2009-10ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಬರೋಡಾ ಪರ ಕಣಕ್ಕಿಳಿದಿದ್ದ ಯೂಸುಫ್ 40 ಎಸೆತಗಳಲ್ಲಿ ಅತಿ ವೇಗದ ಶತಕ ಬಾರಿಸಿದ್ದ ಸಾಧನೆ ಮಾಡಿದ್ದರು. ಇದೀಗ ಆ ದಾಖಲೆ ಅನ್ಮೋಲ್‌ಪ್ರೀತ್ ಪಾಲಾಗಿದೆ.
ಇದಲ್ಲದೆ ಅನ್ಮೋಲ್ಪ್ರೀತ್ ಸಿಂಗ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರಿಗಿಂತ ಮುಂದೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮಾತ್ರ ಇದ್ದಾರೆ. ಜೇಕ್ ಫ್ರೇಸರ್-ಮೆಕ್‌ಗುರ್ಕ್ 29 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, ಡಿವಿಲಿಯರ್ಸ್ 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ತಂಡ ಕೇವಲ 48.4 ಓವರ್‌ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕೇವಲ 12.3 ಓವರ್‌ಗಳಲ್ಲಿ ಜಯ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ