MI vs LSG: ಮೈದಾನದಲ್ಲೇ ಸ್ಟಾಯಿನಿಸ್​ರ ಮೈಚಳಿ ಬಿಡಿಸಿದ ಅರ್ಜುನ್ ತೆಂಡೂಲ್ಕರ್: ರೋಚಕ ವಿಡಿಯೋ ನೋಡಿ

Arjun Tendulkar- Marcus Stoinis Video: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್ 2024 ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದರು. ಎಡಗೈ ವೇಗದ ಬೌಲರ್ ಬೌಲಿಂಗ್ ಮಾಡುವಾಗ ಆಕ್ರಮಣಕಾರಿಯಾಗಿ ಕಾಣಿಸಿಕೊಂಡರು. ಅರ್ಜುನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ನಡುವೆ ಜಗಳ ನಡೆಯುವ ಸಾಧ್ಯತೆಯೂ ಇತ್ತು.

MI vs LSG: ಮೈದಾನದಲ್ಲೇ ಸ್ಟಾಯಿನಿಸ್​ರ ಮೈಚಳಿ ಬಿಡಿಸಿದ ಅರ್ಜುನ್ ತೆಂಡೂಲ್ಕರ್: ರೋಚಕ ವಿಡಿಯೋ ನೋಡಿ
Arjun Tendulkar- Marcus Stoinis

Updated on: May 18, 2024 | 8:27 AM

ಮುಂಬೈ ಇಂಡಿಯನ್ಸ್ (Mumbai Indians) ಐಪಿಎಲ್ 2024 ರ ತಮ್ಮ ಕೊನೆಯ ಪಂದ್ಯದಲ್ಲಿ ಕೂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 18 ರನ್​ಗಳಿಂದ ಸೋಲು ಕಂಡಿತು. ಈ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯುವ ಮೂಲಕ ಈ ಆವೃತ್ತಿಯನ್ನು ಕೊನೆಗೊಳಿಸಿದೆ. ಇದು ಔಪಚಾರಿಕ ಪಂದ್ಯ ಆಗಿದ್ದರಿಂದ ಮುಂಬೈ ತಮ್ಮ ಆಡುವ XI ನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿತು. ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಜುನ್ ತೆಂಡೂಲ್ಕರ್ ಐಪಿಎಲ್ 2024 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಎಡಗೈ ವೇಗದ ಬೌಲರ್ ಬೌಲಿಂಗ್ ಮಾಡುವಾಗ ಆಕ್ರಮಣಕಾರಿಯಾಗಿ ಕಾಣಿಸಿಕೊಂಡರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಮಾಡಲು ಬಂದರು. ಕ್ರೀಸ್​ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಇದ್ದರು. ಅರ್ಜುನ್ ಬಾಲ್ ಅದ್ಭುತವಾಗಿ ಸ್ವಿಂಗ್ ಆಗುತ್ತಿತ್ತು. ಮೂರನೇ ಎಸೆತದಲ್ಲಿ ಅರ್ಜುನ್, ಸ್ಟೊಯಿನಿಸ್ ಅವರನ್ನು ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಆದರೆ ಅಂತಿಮವಾಗಿ ಡಿಆರ್‌ಎಸ್ ಕರೆಯ ಮೂಲಕ ನಿರ್ಧಾರವನ್ನು ಬದಲಾಯಿಸಲಾಯಿತು. ನಂತರ ಈ ಓವರ್​ನ ಕೊನೆಯ ಎಸೆತದಲ್ಲಿ ಸ್ಟೊಯಿನಿಸ್ ನೇರವಾಗಿ ಶಾಟ್ ಹೊಡೆಯಲು ಮುಂದಾದರು. ಆದರೆ, ಚೆಂಡು ನೇರವಾಗಿ ತೆಂಡೂಲ್ಕರ್ ಕೈ ಸೇರಿತು. ಆಗ ಅರ್ಜುನ್ ಕೋಪದಲ್ಲಿ ಚೆಂಡನ್ನು ಎತ್ತಿಕೊಂಡು ನೇರವಾಗಿ ಸ್ಟಾಯಿನಿಸ್​ನತ್ತ ಎಸೆಯಲು ಪ್ರಯತ್ನಿಸಿದರು. ಇದರಿಂದ ಗಾಬರಿಗೊಂಡ ಸ್ಟೊಯಿನಿಸ್‌ ಪ್ರತಿಕ್ರಿಯಿಸಿ, ತೆಂಡೂಲ್ಕರ್‌ಗೆ ಏನನ್ನೋ ಕೂಗಿದರು.

ಇಂದು ಬೆಂಗಳೂರಿನಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ: ಸಂಜೆ ವೇಳೆ ಹವಾಮಾನ ಹೇಗಿರಲಿದೆ?

ಅರ್ಜುನ್ ತೆಂಡೂಲ್ಕರ್ ಹಾಗೂ ಸ್ಟೊಯಿನಿಸ್‌ ನಡುವಣ ವಿಡಿಯೋ ಇಲ್ಲಿದೆ:

 

ಅರ್ಜುನ್ ತೆಂಡೂಲ್ಕರ್ ಹಾಗೂ ಸ್ಟೊಯಿನಿಸ್‌ ನಡುವಣ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರಂಭದಲ್ಲಿ ಎರಡು ಓವರ್​ಗಳನ್ನು ಮಾಡಿದ್ದ ಅರ್ಜುನ್ ಕೇವಲ 10 ರನ್ ನೀಡಿದ್ದರು. ಬಳಿಕ ಇವರಿಗೆ 15ನೇ ಓವರ್ ನೀಡಲಾಯಿತು. ಆದರೆ, ಈ ಸಂದರ್ಭ ಇಂಜುರಿಗೆ ತುತ್ತಾದ ಇವರು ಮೊದಲ ಎಸೆತ ಬೌಲ್ ಮಾಡುವ ಮುನ್ನವೇ ಓಡಲು ತೊಂದರೆಯಾಗುತ್ತಿತ್ತು. ಬಳಿಕ ಫಿಸಿಯೋ ಅರ್ಜುನ್‌ನನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ತಮ್ಮ ವೃತ್ತಿಜೀವನದಲ್ಲಿ ಮುಂಬೈ ಫ್ರಾಂಚೈಸಿಗಾಗಿ 4 ಪಂದ್ಯಗಳನ್ನು ಆಡಿರುವ ಅರ್ಜುನ್ 3 ವಿಕೆಟ್ ಪಡೆದಿದ್ದಾರೆ.

ಕೊನೆಯ ಪಂದ್ಯಕ್ಕೆ ಆರ್​ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್​ಕೆಗೆ ನಡುಕ ಶುರು

ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಪಯಣ ಸೋಲಿನೊಂದಿಗೆ ಅಂತ್ಯಗೊಂಡಿತು. ತವರು ನೆಲ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳಿಂದ ಸೋಲನುಭವಿಸಿತು. ಇದರಿಂದಾಗಿ ಹಾರ್ದಿಕ್ ಪಾಂಡ್ಯ ಸಾರಥ್ಯದ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ. ಮುಂಬೈ 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 6 ವಿಕೆಟ್‌ಗೆ 214 ರನ್ ಗಳಿಸಿತು. ಮುಂಬೈ ತಂಡ 6 ವಿಕೆಟ್‌ಗೆ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ವಿರುದ್ಧ ಐಪಿಎಲ್‌ನಲ್ಲಿ 6 ಪಂದ್ಯಗಳಲ್ಲಿ ಮುಂಬೈ 5ನೇ ಸೋಲು ಕಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ