ಅಪ್ಪನಂತೆ ಮಗ; 34 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಚಚ್ಚಿದ ಮರಿ ಸೆಹ್ವಾಗ್

|

Updated on: Nov 22, 2024 | 8:50 AM

Aryaveer Sehwag's Double Century: ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ಅದ್ಭುತ ದ್ವಿಶತಕ ಸಿಡಿಸಿದ್ದಾರೆ. 229 ಎಸೆತಗಳಲ್ಲಿ 200 ರನ್ ಗಳಿಸಿದ ಅವರು ತಮ್ಮ ತಂದೆಯಂತೆ ಆಕರ್ಷಕ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆರ್ಯವೀರ್ ಅವರ ಈ ದ್ವಿಶತಕದ ಇನ್ನಿಂಗ್ಸ್​ನಿಂದಾಗಿ ದೆಹಲಿ ತಂಡಕ್ಕೆ ಭರ್ಜರಿ ಮುನ್ನಡೆ ಸಾಧಿಸಿದೆ.

ಅಪ್ಪನಂತೆ ಮಗ; 34 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಚಚ್ಚಿದ ಮರಿ ಸೆಹ್ವಾಗ್
ಸೆಹ್ವಾಗ್, ಆರ್ಯವೀರ್ ಸೆಹ್ವಾಗ್
Follow us on

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಕ್ರಿಕೆಟಿಗರಿದ್ದಾರೆ. ತಮ್ಮ ಆಟದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಅವರು ಆ ಬಳಿಕ ತಮ್ಮ ಮಕ್ಕಳನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿದ್ದಾರೆ. ಇದರಲ್ಲಿ ಕೆಲವರು ಮಕ್ಕಳು ಯಶಸ್ವಿಯಾದರೆ, ಉಳಿದವರ ಮಕ್ಕಳು ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಇದೀಗ ಭಾರತ ಮಾಜಿ ಕ್ರಿಕೆಟಿಗರು ಮಕ್ಕಳು ದೇಶೀ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಕದ ತಟ್ಟಲು ಶುರು ಮಾಡಿದ್ದಾರೆ. ಅವರುಗಳಲ್ಲಿ ಭಾರತದ ಮಾಜಿ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಒಬ್ಬರಾಗಿದ್ದಾರೆ. ಕಳೆದ ತಿಂಗಳಷ್ಟೇ ದೆಹಲಿ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದ ಆರ್ಯವೀರ್, ಸದ್ಯ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಅವರು ಮೇಘಾಲಯ ವಿರುದ್ಧ ದೆಹಲಿ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ.

ದ್ವಿಶತಕ ಸಿಡಿಸಿದ ಸೆಹ್ವಾಗ್ ಪುತ್ರ

ಶಿಲ್ಲಾಂಗ್‌ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರ್ಯವೀರ್ ಸೆಹ್ವಾಗ್, ಮೇಘಾಲಯ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 229 ಎಸೆತಗಳನ್ನು ಎದುರಿಸಿದ ಆರ್ಯವೀರ್ 34 ಬೌಂಡರಿ ಮತ್ತು ಎರಡು ಸಿಕ್ಸರ್​ಗಳ ಸಹಿತ 200 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ ಆರ್ಯವೀರ್, ಅದ್ಭುತ ಹೊಡೆತಗಳನ್ನು ಹೊಡೆದು ಎಲ್ಲರ ಗಮನ ಸೆಳೆದರು. ಇದಕ್ಕೂ ಮೊದಲು, ಆರ್ಯವೀರ್ ಅಕ್ಟೋಬರ್‌ನಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿ, ಮಣಿಪುರ ವಿರುದ್ಧ 49 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಲ್ಲಿ ತಮ್ಮ ತಂಡಕ್ಕೆ ಆರು ವಿಕೆಟ್‌ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಬೃಹತ್ ಮುನ್ನಡೆಯತ್ತ ಡೆಲ್ಲಿ

ಈ ಪಂದ್ಯದಲ್ಲಿ ಮೇಘಾಲಯ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಮೇಘಾಲಯ ತಂಡ 104.3 ಓವರ್‌ಗಳಲ್ಲಿ 260 ರನ್ ಗಳಿಸುವಷ್ಟರಲ್ಲಿ ಕುಸಿಯಿತು. ಇದಾದ ಬಳಿಕ ಆರ್ಯವೀರ್ ಸೆಹ್ವಾಗ್ ಮತ್ತು ಅರ್ನವ್ ಬುಗ್ಗಾ ಡೆಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಅರ್ನವ್ ಬುಗ್ಗಾ ಕೂಡ ಶತಕ ಗಳಿಸಿ 114 ರನ್ ಗಳಿಸಿ ಔಟಾದರು. ಇಬ್ಬರೂ ಆರಂಭಿಕರು ಮೊದಲ ವಿಕೆಟ್‌ಗೆ 180 ರನ್‌ಗಳ ಜೊತೆಯಾಟ ನೀಡಿದರು. ಈ ಇಬ್ಬರು ಆಟಗಾರರ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ ಡೆಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿ 208 ರನ್ ಮುನ್ನಡೆ ಸಾಧಿಸಿದೆ.

ಆರ್ಯವೀರ್ ಇದಕ್ಕೂ ಮುನ್ನ ದೆಹಲಿ ಅಂಡರ್-16 ತಂಡದ ಭಾಗವಾಗಿದ್ದರು. ಆಗಲೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರ್ಯವೀರ್ ತನ್ನ ತಂದೆಯಂತೆ ಆರಂಭಿಕ ಬ್ಯಾಟ್ಸ್‌ಮನ್. ವೀರೇಂದ್ರ ಸೆಹ್ವಾಗ್ ಭಾರತದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಕ್ರಿಕೆಟ್ ಆಡಿದ್ದರು. ಇದಲ್ಲದೆ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಈಗ ಅವರ ಮಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ