IPL 2022: ಧೋನಿ ಕಾಣಿಸಿಕೊಂಡ ಐಪಿಎಲ್ ಜಾಹೀರಾತಿಗೆ ನಿಷೇಧ..!

IPL 2022: ಭಾರೀ ವೈರಲ್ ಆಗಿದ್ದ ಎಂಎಸ್ ಧೋನಿಯ ಬಸ್ ಚಾಲಕನ ಜಾಹೀರಾತು ಶೀಘ್ರದಲ್ಲೇ ಎಡಿಟ್ ಆಗಿ ಅಥವಾ ಹೊಸ ರೂಪದಲ್ಲಿ ಐಪಿಎಲ್​ ಪ್ರೇಕ್ಷಕರ ಮುಂದೆ ಬರಲಿದೆ.

IPL 2022: ಧೋನಿ ಕಾಣಿಸಿಕೊಂಡ ಐಪಿಎಲ್ ಜಾಹೀರಾತಿಗೆ ನಿಷೇಧ..!
Dhoni
Updated By: ಝಾಹಿರ್ ಯೂಸುಫ್

Updated on: Apr 07, 2022 | 5:20 PM

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಜಾಹೀರಾತನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಹೀಗಾಗಿ ಕೂಡಲೇ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದ ಹಿನ್ನಲೆಯಲ್ಲಿ ಎಎಸ್‌ಸಿಐ ಈ ಶಿಫಾರಸು ಮಾಡಿದ್ದು, ಈ ಜಾಹೀರಾತಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಈ ಜಾಹೀರಾತಿನ ವಿರುದ್ಧ ಗ್ರಾಹಕರ ಏಕತೆ ಮತ್ತು ಟ್ರಸ್ಟ್ ಸೊಸೈಟಿ ದೂರು ದಾಖಲಿಸಲಾಗಿದ್ದು, ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಈ ಜಾಹೀರಾತಿನಲ್ಲಿ ಎಂಎಸ್ ಧೋನಿ ಅವರನ್ನು ಬಸ್ ಚಾಲಕನಾಗಿ ತೋರಿಸಲಾಗಿದೆ. ಅಲ್ಲದೆ ಜಾಹೀರಾತಿನಲ್ಲಿ ಜನನಿಬಿಡ ರಸ್ತೆಯ ಮಧ್ಯೆ ಬಸ್ ನಿಲ್ಲಿಸುವುದನ್ನು ಚಿತ್ರಿಸಲಾಗಿದೆ. ಈ ವೇಳೆ ಒಬ್ಬ ಟ್ರಾಫಿಕ್ ಪೊಲೀಸ್ ಬಂದು ಅವನನ್ನು ಪ್ರಶ್ನಿಸುತ್ತಾನೆ. ಇದಾದ ನಂತರ ಧೋನಿ ಪ್ರತಿಕ್ರಿಯಿಸಿ, ನಾನು ಐಪಿಎಲ್‌ನ ಸೂಪರ್ ಓವರ್ ಅನ್ನು ವೀಕ್ಷಿಸುತ್ತಿದ್ದೇನೆ ಎಂದು ತಿಳಿಸುತ್ತಾರೆ. ಇದನ್ನು ಟ್ರಾಫಿಕ್ ಪೋಲೀಸ್ ಸಾಮಾನ್ಯವೆಂದು ಪರಿಗಣಿಸಿ ಹೊರಡುತ್ತಾನೆ. ಇದನ್ನೇ ಪ್ರಸ್ತಾಪಿಸಿ ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದೆ.

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾಗೆ ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದ್ದು, ASCI ಗ್ರಾಹಕ ದೂರು ಸಮಿತಿ ಸದಸ್ಯರು ಈ ಜಾಹೀರಾತನ್ನು ಪ್ರೋಮೋ ಪರಿಶೀಲಿಸಿದ್ದಾರೆ. ಅಲ್ಲದೆ ASCI ಜಾಹೀರಾತಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಏಪ್ರಿಲ್ 20 ರೊಳಗೆ ಈ ಜಾಹೀರಾತನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ಗೆ ತಿಳಿಸಲಾಗಿದೆ.

ಒಟ್ಟಿನಲ್ಲಿ ಭಾರೀ ವೈರಲ್ ಆಗಿದ್ದ ಎಂಎಸ್ ಧೋನಿಯ ಬಸ್ ಚಾಲಕನ ಜಾಹೀರಾತು ಶೀಘ್ರದಲ್ಲೇ ಎಡಿಟ್ ಆಗಿ ಅಥವಾ ಹೊಸ ರೂಪದಲ್ಲಿ ಐಪಿಎಲ್​ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?