ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಪ್ರತಿಷ್ಠಿತ ಆ್ಯಶಸ್ (Ashes) ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಬರ್ಮಿಂಗ್ಹ್ಯಾಮ್ನ ಎಜ್‌ಬಾಸ್ಟನ್‌ನಲ್ಲಿ (Edgbaston) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದಂತೆ ಗೋಚರಿಸುತ್ತಿದೆ. ಪ್ರಥಮ ಇನ್ನಿಂಗ್ಸ್ನಲ್ಲಿ ಮೊದಲ ದಿನದಾಟ ಮುಗಿಯುವ ಮುನ್ನವೇ ಅಚ್ಚರಿಯ ಡಿಕ್ಲೇರ್ ಘೋಷಿಸಿದ್ದ ಇಂಗ್ಲೆಂಡ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಂಗ್ಲರು 273 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾಕ್ಕೆ ಗೆಲ್ಲಲು 281 ರನ್ಗಳ ಟಾರ್ಗೆಟ್ ನೀಡಿದೆ.
ಸದ್ಯ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾನ್ನರು ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿದೆ. ಕೊನೆಯ ಒಂದು ದಿನದಾಟ ಬಾಕಿ ಉಳಿದಿದ್ದು ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್ನ 7 ವಿಕೆಟ್ ಕೀಳಬೇಕು, ಇತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಉಸ್ಮಾನ್ ಖ್ವಾಜಾ 34 ರನ್ ಗಳಿಸಿ ಹಾಗೂ ಸ್ಕಾಟ್ ಬೋಲಂಡ್ 13 ರನ್ ಬಾರಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಬ್ಯಾಟಿಂಗ್ಗೆ ಬಂದ ಡೇವಿಡ್ ವಾರ್ನರ್ (36), ಮಾರ್ನಸ್ ಲಾಬುಶೇನ್ (16) ಹಾಗೂ ಸ್ಟೀವ್ ಸ್ಮಿತ್ (6) ಬೇಗನೆ ಔಟಾಗಿದ್ದರು.
Joe Root: ಎಬಿಡಿ, ಕಿಂಗ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಜಾಕ್ ಕ್ರಾವ್ಲಿ (61) ಹಾಗೂ ಒಲಿ ಪೋಪ್ (31) 70 ರನ್ಗಳ ಜೊತೆಯಾಟ ಆಡಿದರು. ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭರ್ಜರಿ ಬ್ಯಾಟ್ ಬೀಸಿದರು. ಜಾನಿ ಬೇರ್ಸ್ಟೋವ್ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್ಗಳ ಜತೆಯಾಟ ನೀಡಿದರು. ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ನೊಂದಿಗೆ ಅಜೇಯ 118 ರನ್ ಚಚ್ಚಿದರು.
ತನ್ನ ಪ್ರಥಮ ಇನಿಂಗ್ಸ್ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಉಸ್ಮಾನ್ ಖ್ವಾಜಾ 321 ಎಸೆತಗಳಲ್ಲಿ 141 ರನ್ ಗಳಿಸಿದರೆ, ಟ್ರೇವಿಸ್ ಹೆಡ್ (50), ಕ್ಯಾಮರೂನ್ ಗ್ರೀನ್ 38 ರನ್, ಅಲೆಕ್ಸ್ ಕ್ಯಾರಿ 66, ಪ್ಯಾಟ್ ಕಮಿನ್ಸ್ 38 ರನ್ಗಳ ಕೊಡುಗೆ ನೀಡಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 273 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಸೀಸ್ ಪರ ಪ್ಯಾಟ್ ಕಮಿನ್ಸ್ ಹಾಗೂ ನೇಥನ್ ಲಿಯಾನ್ ತಲಾ 4 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ