Updated on:Jun 19, 2023 | 11:20 PM
World Cup Qualifiers 2023: ಏಕದಿನ ವಿಶ್ವಕಪ್ 2023 ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ಶ್ರೀಲಂಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನ ರೂವಾರಿ ವನಿಂದು ಹಸರಂಗ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಪರ ಆರಂಭಿಕರಾದ ಪಾತುಂ ನಿಸ್ಸಾಂಕ (57) ಹಾಗೂ ಕರುಣರತ್ನೆ (52) ಅರ್ಧಶತಕ ಬಾರಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಮೆಂಡಿಸ್ 78 ರನ್ ಕಲೆಹಾಕಿದರು.
ಇನ್ನು ಸಮರವಿಕ್ರಮ 73 ರನ್ ಬಾರಿಸಿದರೆ, ಅಸಲಂಕಾ ಕೇವಲ 23 ಎಸೆತಗಳಲ್ಲಿ 48 ರನ್ ಚಚ್ಚಿದರು. ಹಾಗೆಯೇ ಅಂತಿಮ ಹಂತದಲ್ಲಿ ವನಿಂದು ಹಸರಂಗ 12 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಇದರೊಂದಿಗೆ ನಿಗದಿತ 50 ಓವರ್ಗಳಲ್ಲಿ ಶ್ರೀಲಂಕಾ ತಂಡವು 6 ವಿಕೆಟ್ ನಷ್ಟಕ್ಕೆ 355 ರನ್ ಕಲೆಹಾಕಿತು.
356 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಯುಎಇ ತಂಡಕ್ಕೆ ಸ್ಪಿನ್ ಮೋಡಿಗಾರ ವನಿಂದು ಹಸರಂಗ ಮಾರಕವಾಗಿ ಪರಿಣಮಿಸಿದರು. ಯುಎಇ 2 ವಿಕೆಟ್ ನಷ್ಟಕ್ಕೆ 82 ರನ್ಗಳಿಸಿದ್ದ ವೇಳೆ ದಾಳಿಗಿಳಿದ ಹಸರಂಗ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಹಾದಿ ತೋರಿಸಿದರು.
8 ಓವರ್ ಬೌಲಿಂಗ್ ಮಾಡಿದ್ದ ಹಸರಂಗ ಕೇವಲ 24 ರನ್ ನೀಡಿ 6 ವಿಕೆಟ್ ಉರುಳಿಸಿದರು. ಇದರೊಂದಿಗೆ ಯುಎಇ ತಂಡವು 39 ಓವರ್ಗಳಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ ತಂಡವು 175 ರನ್ಗಳ ಭರ್ಜರಿ ಜಯದೊಂದಿಗೆ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿದೆ.
Published On - 11:20 pm, Mon, 19 June 23