ಅಶ್ವಿನ್ ಫ್ಯಾಬ್ ಫೈವ್ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್ ಇಲ್ಲ; ಸ್ಥಾನ ಪಡೆದ ಭಾರತೀಯ ಯಾರು?
ರವಿಚಂದ್ರನ್ ಅಶ್ವಿನ್ ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ನ ಟಾಪ್ 5 ಬ್ಯಾಟರ್ ಮತ್ತು ಬೌಲರ್‌ಗಳನ್ನು ಹೆಸರಿಸಿದ್ದಾರೆ. ಬ್ಯಾಟರ್‌ಗಳಲ್ಲಿ ಶುಭ್ಮನ್ ಗಿಲ್, ಹ್ಯಾರಿ ಬ್ರೂಕ್, ಟ್ರಾವಿಸ್ ಹೆಡ್, ಶಾಯ್ ಹೋಪ್, ಟೆಂಬಾ ಬವುಮಾ ಇದ್ದಾರೆ. ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಕಗಿಸೊ ರಬಾಡ, ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್, ಮ್ಯಾಟ್ ಹೆನ್ರಿ ಸ್ಥಾನ ಪಡೆದಿದ್ದಾರೆ. ಭಾರತದಿಂದ ಗಿಲ್ ಮತ್ತು ಬುಮ್ರಾ ಮಾತ್ರ ಅಶ್ವಿನ್ ಪಟ್ಟಿಯಲ್ಲಿದ್ದಾರೆ.

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಐವರು ಬ್ಯಾಟರ್‌ಗಳ ಹೆಸರನ್ನು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಅಶ್ವಿನ್ ಅವರ ಈ ಐವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಒಬ್ಬರೇ ಒಬ್ಬ ಭಾರತೀಯ ಆಟಗಾರ. ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಜೊತೆಗೆ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡದ ನಾಯಕ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಹಾಗೂ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಟೆಂಬಾ ಬವುಮಾ ಕೂಡ ಸ್ಥಾನ ಪಡೆದಿದ್ದಾರೆ.
ಶುಭ್ಮನ್ ಗಿಲ್ ಏಕೈಕ ಭಾರತೀಯ
ಹ್ಯಾರಿ ಬ್ರೂಕ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಎದುರಾಳಿ ತಂಡ ಯಾವುದೇ ಇರಲಿ, ರನ್ ಗಳಿಸುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ಇನ್ನು ಶುಭ್ಮನ್ ಗಿಲ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೆಂಬಾ ಬವುಮಾ ತಂಡವನ್ನು ಮುನ್ನಡೆಸುವುದರ ಜೊತೆಗೆ ಬ್ಯಾಟಿಂಗ್‌ನಲ್ಲೂ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ.
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಕೆಲವೇ ಆಟಗಾರರಲ್ಲಿ ಟ್ರಾವಿಸ್ ಹೆಡ್ ಕೂಡ ಒಬ್ಬರು. ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಕೂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಭಾರತದ ವಿರುದ್ಧ ಮುಕ್ತಾಯಗೊಂಡ ದ್ವಿಪಕ್ಷೀಯ ಸರಣಿಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಐವರು ಶ್ರೇಷ್ಠ ಬೌಲರ್‌ಗಳ ಹೆಸರಿಸಿದ ಅಶ್ವಿನ್
ಬ್ಯಾಟರ್‌ಗಳ ಬಳಿಕ ಪ್ರಸ್ತುತ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಐವರು ಬೌಲರ್‌ಗಳ ಹೆಸರನ್ನೂ ರವಿಚಂದ್ರನ್ ಅಶ್ವಿನ್ ಪ್ರಕಟಿಸಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್ ಹಾಗೂ ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರ ಮೇಲಿನ ಕೆಲಸದ ಒತ್ತಡವನ್ನು ಟೀಂ ಮ್ಯಾನೇಜ್‌ಮೆಂಟ್ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಭಾರತ ತಂಡದ ಪರ ಹಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಬುಮ್ರಾ ಸಾಕಷ್ಟು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದಾರೆ. ಅವರ ಬೌಲಿಂಗ್ ಎದುರಿಸುವುದು ಬ್ಯಾಟರ್‌ಗಳಿಗೆ ಸುಲಭದ ಕೆಲಸವಲ್ಲ. ದೀರ್ಘಕಾಲದವರೆಗೆ ಅವರ ವಿರುದ್ಧ ಪ್ರಾಬಲ್ಯ ಸಾಧಿಸಿದ ಬ್ಯಾಟರ್‌ಗಳು ಬಹಳ ಕಡಿಮೆ.
ಕಿವೀಸ್ ವಿರುದ್ಧ 2-0 ಮುನ್ನಡೆ ಸಾಧಿಸಿದ ಭಾರತಕ್ಕೆ ಮೂವರದ್ದೇ ತಲೆನೋವು
ಸ್ಥಿರ ಪ್ರದರ್ಶನ ನೀಡುತ್ತಾರೆ
ಕಗಿಸೊ ರಬಾಡ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್ ಎರಡರಲ್ಲೂ ಪರಿಣಾಮಕಾರಿ ಬೌಲಿಂಗ್ ಮಾಡುವ ಕೆಲವೇ ಬೌಲರ್‌ಗಳಲ್ಲಿ ರಬಾಡ ಕೂಡ ಒಬ್ಬರು. ಇನ್ನು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ತಮ್ಮ ನಿಖರ ಬೌಲಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡುತ್ತಿದ್ದಾರೆ. ಎದುರಾಳಿ ಯಾರೇ ಇರಲಿ, ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಸ್ಥಿರ ಪ್ರದರ್ಶನ ನೀಡುತ್ತಾರೆ. ಆಸ್ಟ್ರೇಲಿಯಾ ತಂಡದ ಹಲವು ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡದ ಟೆಸ್ಟ್ ಹಾಗೂ ಏಕದಿನ ನಾಯಕನಾಗಿದ್ದಾರೆ. ತಮ್ಮ ವೇಗ ಮತ್ತು ನಿಖರತೆಯಿಂದ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡುತ್ತಿರುವ ಅವರು, ಪ್ರಮುಖ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಕೂಡ ತಮ್ಮ ಅದ್ಭುತ ಬೌಲಿಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಆಫ್‌ಸ್ಟಂಪ್ ಗುರಿಯಾಗಿಸಿಕೊಂಡು ನಿಖರ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವ ಅವರ ವಿರುದ್ಧ ರನ್ ಗಳಿಸುವುದು ಸುಲಭವಲ್ಲ. ನ್ಯೂಜಿಲೆಂಡ್ ತಂಡ ಹೆನ್ರಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಅವರು ಕೂಡ ತಂಡದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.




