ವೈಭವ್‌ಗೆ ಆರಂಭಿಕ ಸ್ಥಾನವೇ ಸೂಕ್ತನಾ? ಟೀಂ ಇಂಡಿಯಾಗೆ ಅಶ್ವಿನ್ ಮಹತ್ವದ ಸಲಹೆ

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ 3ನೇ ಕ್ರಮಾಂಕದಲ್ಲಿ ಆಡಿದ್ದು ಚರ್ಚೆಗೆ ಕಾರಣವಾಗಿದೆ. ಕೇವಲ 4 ರನ್ ಗಳಿಸಿದ ನಂತರ, ಅಶ್ವಿನ್ ಇದು ಯುವ ಆಟಗಾರನಿಗೆ ಸೂಕ್ತ ಕ್ರಮಾಂಕವಲ್ಲ ಎಂದರು. ಅಶ್ವಿನ್ ಪ್ರಕಾರ, ವೈಭವ್‌ಗೆ ಅನುಭವಿ ಆಟಗಾರರ ಸಾಥ್ ಅಗತ್ಯ. ಇಲ್ಲವೇ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಎಂದು ಸಲಹೆ ನೀಡಿದ್ದಾರೆ.

ವೈಭವ್‌ಗೆ ಆರಂಭಿಕ ಸ್ಥಾನವೇ ಸೂಕ್ತನಾ? ಟೀಂ ಇಂಡಿಯಾಗೆ ಅಶ್ವಿನ್ ಮಹತ್ವದ ಸಲಹೆ
ವೈಭವ್ ಸೂರ್ಯವಂಶಿ
Image Credit source: PTI

Updated on: Oct 25, 2026 | 2:53 PM

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಿದ ಕ್ರಮಾಂಕ ಈಗ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ 15 ವರ್ಷದ ವೈಭವ್‌ನನ್ನು ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಗಿತ್ತು. ಆದರೆ, ಅವರು 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟಾದರು. ಇದಾದ ಬಳಿಕ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವೈಭವ್‌ಗೆ ಮೂರನೇ ಕ್ರಮಾಂಕದಲ್ಲಿ ಆಡೋದು ಅಷ್ಟು ಸಹಜವಾಗಿ ಕಾಣಿಸಲಿಲ್ಲ. ಅವರು ತಮ್ಮ ಸಹಜ ಆಟ ಆಡೋಕೆ ಕಷ್ಟಪಡುತ್ತಿರುವಂತೆ ಕಂಡುಬಂತು ಅಂತ ಅಶ್ವಿನ್ ಹೇಳಿದ್ದಾರೆ.

ಅಶ್ವಿನ್ ಹೇಳಿದ್ದೇನು?

ಪಂದ್ಯದ ಬಳಿಕ ವೈಭವ್ ಆಟದ ಬಗ್ಗೆ ಮಾತನಾಡಿದ ಅಶ್ವಿನ್, ಅವರ ಈ ಇನ್ನಿಂಗ್ಸ್‌ ಅನ್ನು ‘ಮಿಸ್’ ಅಂತ ಕರೆದಿದ್ದಾರೆ. ಆದರೆ, ಒಂದೇ ಇನ್ನಿಂಗ್ಸ್ ನೋಡಿ ಯುವ ಆಟಗಾರನ ಸಾಮರ್ಥ್ಯವನ್ನು ಅಳೆಯೋದು ಸರಿಯಲ್ಲ ಅನ್ನೋದನ್ನೂ ಸ್ಪಷ್ಟಪಡಿಸಿದ್ದಾರೆ. ವೈಭವ್ ಕ್ರೀಸ್‌ಗೆ ಬಂದ ಮೇಲೆ 8 ಎಸೆತಗಳವರೆಗೂ ತಮ್ಮ ಸಹಜ ಆಟ ಆಡೋಕೆ ಸಾಧ್ಯವಾಗಲಿಲ್ಲ. ಚೆಂಡನ್ನು ಸರಿಯಾಗಿ ಅಂದಾಜಿಸಿ ಹೊಡೆಯೋದಕ್ಕೂ ಕಷ್ಟಪಟ್ಟರು. ಅವರ ಆಟದಲ್ಲಿ ಹಿಟ್ ಅಥವಾ ಮಿಸ್ ಅನ್ನೋ ಎರಡೇ ಆಯ್ಕೆಗಳಿದ್ದಂತೆ ಕಾಣಿಸಿತು ಅಂತ ಅಶ್ವಿನ್ ವಿಶ್ಲೇಷಿಸಿದ್ದಾರೆ.

ಹಿರಿಯ ಆಟಗಾರರ ಸಾಥ್ ಬೇಕು

ವೈಭವ್‌ನಂತಹ ಯುವ ಆಟಗಾರನನ್ನು ಪರಿಚಯವಿಲ್ಲದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿಸುವಾಗ, ಅವರ ಜೊತೆ ಅನುಭವಿ ಬ್ಯಾಟ್ಸ್‌ಮನ್ ಇರೋದು ಮುಖ್ಯ ಅಂತ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಒತ್ತಡ ತೆಗೆದುಕೊಳ್ಳದೆ ಶಾಂತವಾಗಿ ಆಡು, ಚೆಂಡನ್ನು ಸರಿಯಾಗಿ ಗಮನಿಸು, ನಿನ್ನ ಸಹಜ ಆಟದ ಮೇಲೆ ನಂಬಿಕೆ ಇಡು ಅಂತ ಹೇಳಿ ಧೈರ್ಯ ತುಂಬುವ ಆಟಗಾರ ಜೊತೆಗಿರಬೇಕು. ಈ ಪಂದ್ಯದಲ್ಲಿ ಆರನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ವೈಭವ್, ಆ ಜವಾಬ್ದಾರಿಯಲ್ಲಿ ಆರಾಮಾಗಿ ಕಾಣಿಸಲಿಲ್ಲ ಅಂತ ಅಶ್ವಿನ್ ಹೇಳಿದ್ದಾರೆ.

ಆದರೆ, ಇದನ್ನ ವೈಭವ್ ಪ್ರತಿಭೆಯ ಬಗ್ಗೆ ನೀಡಿದ ತೀರ್ಪು ಅಂತ ತಿಳಿದುಕೊಳ್ಳಬಾರದು. ಅವರಿಗೆ ಯಾವ ಕ್ರಮಾಂಕದಲ್ಲಿ ಆಡಿಸಿದರೆ ಹೆಚ್ಚು ಅನುಕೂಲವಾಗುತ್ತೆ ಅನ್ನೋದನ್ನ ತಂಡ ಯೋಚಿಸಬೇಕು ಅನ್ನೋದು ಅಶ್ವಿನ್ ಮಾತಿನ ಮುಖ್ಯ ಉದ್ದೇಶ.

ಸಂಜು ಸ್ಯಾಮ್ಸನ್‌ಗೆ 3ನೇ ಕ್ರಮಾಂಕ?

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಈ ಮೂವರನ್ನೂ ಒಂದೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಬೇಕು ಅನ್ನೋದು ಟೀಂ ಮ್ಯಾನೇಜ್‌ಮೆಂಟ್ ಉದ್ದೇಶವಾಗಿದ್ದರೆ, ಸಂಜು ಸ್ಯಾಮ್ಸನ್‌ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸೋ ಬಗ್ಗೆ ಯೋಚಿಸಬಹುದು ಅಂತ ಅಶ್ವಿನ್ ಸಲಹೆ ನೀಡಿದ್ದಾರೆ.

ಈ ಹಿಂದೆ ಇದೇ ರೀತಿಯ ಸಂಯೋಜನೆಯಲ್ಲಿ ಸಂಜು ಮೂರನೇ ಕ್ರಮಾಂಕದಲ್ಲಿ ಆಡಿದ್ದನ್ನೂ ಅವರು ನೆನಪಿಸಿದ್ದಾರೆ. ಹಾಗಿರುವಾಗ, ವೈಭವ್‌ನನ್ನೇ ಆ ಕ್ರಮಾಂಕದಲ್ಲಿ ಆಡಿಸೋದು ಅಗತ್ಯನಾ ಅನ್ನೋ ಪ್ರಶ್ನೆಯನ್ನೂ ಎತ್ತಿದ್ದಾರೆ. ಆದರೆ ಅಂತಿಮವಾಗಿ ಯಾರು ಯಾವ ಕ್ರಮಾಂಕದಲ್ಲಿ ಆಡಬೇಕು ಅನ್ನೋದು ತಂಡದ ತಂತ್ರ ಮತ್ತು ಆಟಗಾರರ ಪಾತ್ರಗಳ ಮೇಲೆ ನಿರ್ಧಾರವಾಗಲಿದೆ ಎಂದಿದ್ದಾರೆ.

ವೈಭವ್‌ಗೆ ಓಪನಿಂಗ್ ಕೊಡಬೇಕಿತ್ತಾ? 3ನೇ ಕ್ರಮಾಂಕದಲ್ಲಿ ಆಡಿಸಿ ಮಾಡಿದ ತಪ್ಪೇನು?

ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 19.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು. ಭಾರತದ ಪರ ತಿಲಕ್ ವರ್ಮಾ 26 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿದರೆ, ನಮನ್ ಧೀರ್ 31 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.

ಭಾರತ ಪಂದ್ಯ ಗೆದ್ದಿದ್ದರೂ, ವೈಭವ್‌ನನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದ ನಿರ್ಧಾರದ ಬಗ್ಗೆ ಚರ್ಚೆ ಮಾತ್ರ ನಿಂತಿಲ್ಲ. ಯುವ ಆಟಗಾರನಿಂದ ಉತ್ತಮ ಪ್ರದರ್ಶನ ಪಡೆಯಬೇಕಾದರೆ, ಅವರ ಸಹಜ ಆಟಕ್ಕೆ ಸೂಕ್ತವಾದ ಬ್ಯಾಟಿಂಗ್ ಕ್ರಮಾಂಕ ನೀಡೋದು ಮುಖ್ಯ ಅನ್ನೋ ಅಶ್ವಿನ್ ಸಲಹೆ ಈಗ ಗಮನ ಸೆಳೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sun, 25 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us