ಕೊಲಂಬೊದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದಾಗಿ ಈ ಬಾರಿಯ ಏಷ್ಯಾಕಪ್ನ (Asia Cup 2023) ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲು ಎಸಿಸಿ ಯೋಚಿಸುತ್ತಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಪೂರ್ವ ನಿಗದಿಯಂತೆ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ (Colombo) ಏಷ್ಯಾಕಪ್ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಫೈನಲ್ ಪಂದ್ಯದ ದಿನದಂದು ಕೊಲಂಬೊದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಪಂದ್ಯವನ್ನು ಕೊಲಂಬೊದ ಬದಲು ಕ್ಯಾಂಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC ಮೂಲಗಳ ಪ್ರಕಾರ, ಏಷ್ಯಾಕಪ್ ಫೈನಲ್ ಪಂದ್ಯವು ಭಾನುವಾರ ಸೆಪ್ಟೆಂಬರ್ 17 ರಂದು ಕ್ಯಾಂಡಿಯ ಪಲ್ಲೆಕೆಲೆಯಲ್ಲಿರುವ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Pallekele International Cricket Stadium) ನಡೆಯಲಿದೆ ಎಂದು ವರದಿಯಾಗಿದೆ.
ಇಂದು ಅಂದರೆ, ಸೋಮವಾರ, ಸೆಪ್ಟೆಂಬರ್ 11 ರಂದು ಫೈನಲ್ ಪಂದ್ಯದ ಸ್ಥಳ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕೊಲಂಬೊದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾರತ-ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯವನ್ನು ಸಹ ಮೀಸಲು ದಿನಕ್ಕೆ ಮುಂದೂಡಲಾಗಿದೆ. ಆದರೆ ಮೀಸಲು ದಿನವೂ ಸಹ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈ ದಿನದಂದು ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
Asia Cup 2023: ಭಾರತ- ಪಾಕ್ ಪಂದ್ಯಕ್ಕೂ ಕ್ರೀಡಾಂಗಣ ಖಾಲಿ ಖಾಲಿ; 15 ಸಾವಿರ ಟಿಕೆಟ್ ಅನ್ಸೋಲ್ಡ್..!
ಕೊಲಂಬೊದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈ ಹಿಂದೆಯೂ ಸೂಪರ್ 4 ಪಂದ್ಯಗಳನ್ನು ಕೊಲಂಬೊದಿಂದ ಹಂಬಂಟೋಟಾಗೆ ಬದಲಾಯಿಸಲು ಎಸಿಸಿ ಯೋಜಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯಾವಳಿಗೆ ಹಿನ್ನಡೆಯುಂಟಾಗುವ ಆತಂಕದ ನಡುವೆಯೂ ಎಸಿಸಿ, ಸೂಪರ್ 4 ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿಸಲು ತೀರ್ಮಾನಿಸಿತ್ತು. ಇದೀಗ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡುವ ಆತಂಕವಿರುವುದರಿಂದ ಫೈನಲ್ ಪಂದ್ಯವನ್ನು ಕೊಲಂಬೊದಿಂದ ಕ್ಯಾಂಡಿಗೆ ಸ್ಥಳಾಂತರಿಸಲು ಎಸಿಸಿ ಚಿಂತಿಸಿದೆ ಎಂದು ವರದಿಯಾಗಿದೆ.
🚨 Breaking News 🚨
Asia Cup Final Likely To Be Played At Kandy, If India Vs Pakistan Washed Out Today.
You Will See Final In Kandy , Not Colombo.
According To ACC Sources. pic.twitter.com/QdXVaJJC9a
— Vaibhav Bhola 🇮🇳 (@VibhuBhola) September 11, 2023
ವಾಸ್ತವವಾಗಿ ಸೆಪ್ಟೆಂಬರ್ 10 ರಂದು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಆರಂಭವಾದಾಗ ಬಿಸಿಲಿತ್ತು. ಹೀಗಾಗಿ ಹವಾಮಾನ ಮಾಹಿತಿಯನ್ನು ಒದಗಿಸುವ ವೆಬ್‌ಸೈಟ್‌ಗಳು ತಪ್ಪು ಮಾಹಿತಿ ನೀಡಿವೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಭಾರತೀಯ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಆರಂಭವಾದ ಮಳೆಯು ಧಾರಾಕಾರ ರೂಪವನ್ನು ಪಡೆದುಕೊಂಡಿದ್ದು, ಔಟ್‌ಫೀಲ್ಡ್ ಕೆಸರುಮಯವಾಗಿತ್ತು. ಪರಿಣಾಮವಾಗಿ ಪಂದ್ಯವನ್ನು ನಿಲ್ಲಿಸಿದ್ದು, ಸೆಪ್ಟೆಂಬರ್ 11 ರಂದು ಅಂದರೆ, ಇಂದು ಪಂದ್ಯವನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ 90 ರಿಂದ 100 ರಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ವರದಿಯಾಗಿತ್ತು. ಆದರೆ ಸೆಪ್ಟೆಂಬರ್ 11ರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ದಿನ ಕೊಲಂಬೊದಲ್ಲಿ 80 ರಿಂದ 90 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಕ್ಯುವೆದರ್ ಪ್ರಕಾರ, ಸೆಪ್ಟೆಂಬರ್ 11 ರಂದು ಕೊಲಂಬೊದಲ್ಲಿ ಶೇಕಡಾ 80 ರಷ್ಟು ಮಳೆಯಾಗಲಿದೆ ಎಂದು ವರದಿಯಾದರೆ, Weather.com 90 ಪ್ರತಿಶತ ಮಳೆಯ ಮುನ್ಸೂಚನೆ ನೀಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Mon, 11 September 23