Virat Kohli: ನೆಟ್ಟಿಗರ ಹೃದಯ ಗೆದ್ದ ಕಿಂಗ್ ಕೊಹ್ಲಿಯ ಶ್ವಾನ ಪ್ರೀತಿ; ವಿಡಿಯೋ ನೋಡಿ

|

Updated on: Sep 09, 2023 | 8:00 AM

Virat Kohli: ಕೇವಲ ವಿರಾಟ್ ಕೊಹ್ಲಿಗೆ ಮಾತ್ರವಲ್ಲ. ಅವರ ಮಡದಿ ಅನುಷ್ಕಾ ಶರ್ಮಾ ಅವರಿಗೂ ಪ್ರಾಣಿಗಳೆಂದರೇ ಬಹಳ ಇಷ್ಟ. ಹೀಗಾಗಿ ಈ ದಂಪತಿಗಳು ವಿದೇಶ ಪ್ರಯಾಣ ಮಾಡಿದಾಗಲೆಲ್ಲ ಅಲ್ಲಿನ ಪ್ರಾಣಿಗಳೊಂದಿಗೆ ಸಮಯ ಕಳೆಯವುದುನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಇನ್ನು ಕೊಹ್ಲಿ ತಮ್ಮ ಮನೆಯಲ್ಲಿ ಡ್ಯೂಡ್ ಹೆಸರಿನ ಲ್ಯಾಬ್ರಡಾರ್ ತಳಿಯ ನಾಯಿಯನ್ನು ಸಾಕುತ್ತಿದ್ದಾರೆ.

Virat Kohli: ನೆಟ್ಟಿಗರ ಹೃದಯ ಗೆದ್ದ ಕಿಂಗ್ ಕೊಹ್ಲಿಯ ಶ್ವಾನ ಪ್ರೀತಿ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ
Follow us on

ಏಷ್ಯಾಕಪ್‌ನ (Asia Cup 2023) ಸೂಪರ್-4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಇದೇ ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಪ್ರಶ್ನೆ ಎದ್ದಿದೆ. ಕಾರಣ- ಶ್ರೀಲಂಕಾದ ರಾಜಧಾನಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದು. ಆದರೆ ಮಳೆಯ ಮನ್ಸೂಚನೆಯನ್ನು ಗಮನಿಸಿರುವ ಎಸಿಸಿ, ಈ ಉಭಯ ತಂಡಗಳ ಕಾಳಗಕ್ಕೆ ಮೀಸಲು ದಿನವನ್ನು ನಿಗದಿಪಡಿಸಿದೆ. ಹೀಗಾಗಿ ಸೆ. 10 ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಸೆ. 11 ರಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಈ ನಡುವೆ ಸತತ ಮಳೆಯಿಂದಾಗಿ ಒಳಾಂಗಣ ಅಭ್ಯಾಸ ನಡೆಸಿದ್ದ ಟೀಂ ಇಂಡಿಯಾ ಆಟಗಾರರು, ಮಳೆ ಕೊಂಚ ಬ್ರೇಕ್ ತೆಗೆದುಕೊಂಡ ಬಳಿಕ ಮೈದಾನಕ್ಕಿಳಿದು ಅಭ್ಯಾಸ ನಡೆಸಿದ್ದರು. ಈ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಅಭ್ಯಾಸದ ಸ್ಥಳಕ್ಕಾಗಮನಿಸಿದ ಪುಟ್ಟ ಅತಿಥಿಯ ಜೊತೆಗೆ ಕೊಂಚ ಸಮಯ ಕಳೆದರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕೊಹ್ಲಿಯ ಪ್ರಾಣಿ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶ್ವಾನದ ಮರಿಯೊಂದಿಗೆ ಸಮಯ ಕಳೆದ ಕೊಹ್ಲಿ

ವಾಸ್ತವವಾಗಿ, ಸೆ. 8 ರಂದು ಮಳೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರಿಂದಾಗಿ ಟೀಂ ಇಂಡಿಯಾ ಆಟಗಾರರು ಮೈದಾನಕ್ಕಿಳಿದು ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದ ಜಾಗಕ್ಕೆ ಪುಟ್ಟ ನಾಯಿ ಮರಿಯೊಂದು ಬಂದಿದೆ. ಪುಟ್ಟ ಶ್ವಾನವನ್ನು ನೋಡಿದ ವಿರಾಟ್, ಅದನ್ನು ತನ್ನ ಬಳಿಗೆ ಕರೆದಿದ್ದಾರೆ. ಶ್ವಾನ ಕೂಡ ಕೊಹ್ಲಿ ಕರೆದ ಕೂಡಲೇ ಅವರ ಬಳಿಗೆ ದಾವಿಸಿದೆ. ಕೊಂಚ ಸಮಯ ಶ್ವಾನದ ಮರಿಯನ್ನು ವಿರಾಟ್ ಮುದಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನು ಕಿಂಗ್ ಕೊಹ್ಲಿಗೆ ಶ್ವಾನಗಳೆಂದರೆ ಬಹಳ ಅಚ್ಚು ಮೆಚ್ಚು. ಇದಕ್ಕೆ ಸಾಕಷ್ಟು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ. ಈ ಹಿಂದೆ ಐಪಿಎಲ್ ವೇಳೆ ಬೆಂಗಳೂರಿನಲ್ಲಿರುವ ಚಾರ್ಲೀಸ್ ಎನಿಮಲ್ ರೆಸ್ಕ್ಯೂಗೆ ಸೆಂಟರ್​ಗೆ ಭೇಟಿ ನೀಡಿದ್ದ ವಿರಾಟ್, ಸುಮಾರು ಒಂದು ಗಂಟೆಕಾಲ ಪ್ರಾಣಿಗಳೊಂದಿಗೆ ಸಮಯ ಕಳೆದು, ಅನಾರೋಗ್ಯ ಹಾಗೂ ಅಂಗ ವೈಫಲ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಕಂಡು ಅವುಗಳ ಚಿಕಿತ್ಸೆಗೆ ಪೂರ್ಣ ವೆಚ್ಚ ಬರಿಸುವುದಾಗಿ ಹೇಳಿದ್ದರು.

ಕೊಹ್ಲಿ ಬಳಿಯೂ ಇದೆ ಶ್ವಾನ

ಕೇವಲ ವಿರಾಟ್ ಕೊಹ್ಲಿಗೆ ಮಾತ್ರವಲ್ಲ. ಅವರ ಮಡದಿ ಅನುಷ್ಕಾ ಶರ್ಮಾ ಅವರಿಗೂ ಪ್ರಾಣಿಗಳೆಂದರೇ ಬಹಳ ಇಷ್ಟ. ಹೀಗಾಗಿ ಈ ದಂಪತಿಗಳು ವಿದೇಶ ಪ್ರಯಾಣ ಮಾಡಿದಾಗಲೆಲ್ಲ ಅಲ್ಲಿನ ಪ್ರಾಣಿಗಳೊಂದಿಗೆ ಸಮಯ ಕಳೆಯವುದುನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಇನ್ನು ಕೊಹ್ಲಿ ತಮ್ಮ ಮನೆಯಲ್ಲಿ ಡ್ಯೂಡ್ ಹೆಸರಿನ ಲ್ಯಾಬ್ರಡಾರ್ ತಳಿಯ ನಾಯಿಯನ್ನು ಸಾಕುತ್ತಿದ್ದಾರೆ.

ಪ್ರಾಣಿ ಸಂರಕ್ಷಣ ಕೇಂದ್ರ ತೆರೆದಿರುವ ವಿರಾಟ್

ಇನ್ನು ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೊಹ್ಲಿ, 2021 ರಲ್ಲಿ ಮುಂಬೈನಲ್ಲಿ ಮಲಾಡ್ ಮತ್ತು ಬೋಯ್ಸರ್​ ಎಂಬ ಹೆಸರಿನ ಎರಡು ಪ್ರಾಣಿಗಳ ಸಂರಕ್ಷಣ ಕೇಂದ್ರವನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ನಾಯಿಗಳು ಮತ್ತು ಬೆಕ್ಕುಗಳಿಗೆ ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ಗಾಯಗೊಂಡ ಪ್ರಾಣಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ. ಹಾಗೆಯೇ ಇನ್ನೊಂದು ಕೇಂದ್ರದಲ್ಲಿ ಕುರುಡು, ಪಾರ್ಶ್ವವಾಯು ಮತ್ತು ಜೀವಿತಾವಧಿಯ ಕಾಯಿಲೆಗಳು ಅಥವಾ ವೃದ್ಧಾಪ್ಯದಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಶ್ರಯ ನೀಡಲಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ