ಭಾರತ- ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ; ಬಾಂಗ್ಲಾ- ಲಂಕಾ ಮಂಡಳಿಗಳು ಹೇಳಿದ್ದೇನು?

Asia Cup 2023: ಹಲವು ಊಹಾಪೋಹಗಳ ನಂತರ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ವಿಷಯದ ಬಗ್ಗೆ ಟ್ವೀಟ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದೆ. ಎಸಿಸಿಯ ತಾಂತ್ರಿಕ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶುಕ್ರವಾರ ತಡರಾತ್ರಿ ಟ್ವೀಟ್‌ನಲ್ಲಿ ಬಾಂಗ್ಲಾ ಮಂಡಳಿ ತಿಳಿಸಿದೆ

ಭಾರತ- ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ; ಬಾಂಗ್ಲಾ- ಲಂಕಾ ಮಂಡಳಿಗಳು ಹೇಳಿದ್ದೇನು?
ಭಾರತ- ಪಾಕಿಸ್ತಾನ
Follow us
ಪೃಥ್ವಿಶಂಕರ
|

Updated on:Sep 09, 2023 | 7:10 AM

ಏಷ್ಯಾಕಪ್ (Asia Cup 2023) ಆರಂಭಕ್ಕೂ ಮುನ್ನವೇ ಎದ್ದಿದ್ದ ವಿವಾದಗಳು, ಟೂರ್ನಿ ಮುಗಿಯುವ ಹಂತ ತಲುಪಿದ್ದರೂ ನಿಲ್ಲುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಟೂರ್ನಿ ಹೋಸ್ಟಿಂಗ್​ನಿಂದ ಹಿಡಿದು ಮಳೆಯಿಂದಾಗಿ ಸ್ಥಳವನ್ನು ಬದಲಾಯಿಸುವ ಬಗ್ಗೆ ನಡೆಯುತ್ತಿರುವ ಗದ್ದಲದ ನಡುವೆ ಇದೀಗ ಹೊಸ ಸಮಸ್ಯೆ ಉದ್ಭವಿಸಿದೆ. ಕೊಲಂಬೊದಲ್ಲಿ ನಡೆಯಲಿರುವ ಸೂಪರ್-4 ಸುತ್ತಿನ ಪಂದ್ಯಗಳಿಗೆ ಮಳೆಯ ಭೀತಿ ಎದುರಾಗಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಏಕಾಏಕಿ ಭಾರತ-ಪಾಕಿಸ್ತಾನ (India vs Pakistan) ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿಪಡಿಸುವ ಮೂಲಕ ಕೋಲಾಹಲ ಸೃಷ್ಟಿಸಿದೆ. ಇತರ ಸೂಪರ್-4 ಪಂದ್ಯಗಳಿಗೆ ಈ ವ್ಯವಸ್ಥೆ ಲಭ್ಯವಿಲ್ಲದ ಕಾರಣ, ಕ್ರಿಕೆಟ್ ಅಭಿಮಾನಿಗಳು ಎಸಿಸಿ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದೀಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ (Bangladesh and Sri Lanka) ಕ್ರಿಕೆಟ್ ಮಂಡಳಿಗಳು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿ, ಗೊಂದಲಗಳಿಗೆ ತೆರೆಎಳೆದಿದೆ.

ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ ಎಂದು ಎಸಿಸಿ ಸೆಪ್ಟೆಂಬರ್ 8 ರಂದು ಶುಕ್ರವಾರ ಘೋಷಿಸಿತು. ಅಂದರೆ, ಸೆಪ್ಟೆಂಬರ್ 10 ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಆ ಪಂದ್ಯವನ್ನು ಸೆಪ್ಟೆಂಬರ್ 11 ರಂದು ಪೂರ್ಣಗೊಳ್ಳಿಸಲಾಗುತ್ತದೆ. ಇಲ್ಲಿಯವರೆಗೆ, ಈ ವ್ಯವಸ್ಥೆಯು ಸೆಪ್ಟೆಂಬರ್ 17 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಮಾತ್ರವಾಗಿತ್ತು. ಆದರೆ ಕೊಲಂಬೊದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

Breaking: ಸೆ. 10 ರಂದು ಮಳೆ ಬಂದರೂ ಚಿಂತೆ ಇಲ್ಲ; ಭಾರತ- ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಗದಿ..!

ಬಾಂಗ್ಲಾ- ಶ್ರೀಲಂಕಾ ಮಂಡಳಿ ಹೇಳಿದ್ದೇನು?

ಈ ನಿರ್ಧಾರವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮಾತ್ರವಲ್ಲ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ತಮ್ಮ ತಮ್ಮ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಬೇಕಾಗಿದೆ. ಆದರೆ ಈ ತಂಡಗಳ ಪಂದ್ಯಗಳಿಗೆ ಮಾತ್ರ ಈ ವ್ಯವಸ್ಥೆ ಇಲ್ಲ. ಕೇವಲ ಒಂದು ಪಂದ್ಯಕ್ಕಾಗಿ ಆಟದ ನಿಯಮಗಳನ್ನು ಬದಲಾಯಿಸುವುದು ಆಘಾತಕಾರಿಯಾಗಿದ್ದು, ಇದರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗಳು ಸಹ ಉದ್ಭವಿಸಲಾರಂಭಿಸಿದವು.

ಹಲವು ಊಹಾಪೋಹಗಳ ನಂತರ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ವಿಷಯದ ಬಗ್ಗೆ ಟ್ವೀಟ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದೆ. ಎಸಿಸಿಯ ತಾಂತ್ರಿಕ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶುಕ್ರವಾರ ತಡರಾತ್ರಿ ಟ್ವೀಟ್‌ನಲ್ಲಿ ಬಾಂಗ್ಲಾ ಮಂಡಳಿ ತಿಳಿಸಿದೆ, ಇದು ಆಟದ ಪರಿಸ್ಥಿತಿಯನ್ನು ಬದಲಾಯಿಸಿದೆ. ಸೂಪರ್-4 ಮತ್ತು ಎಸಿಸಿಯಲ್ಲಿ ಭಾಗವಹಿಸುವ ನಾಲ್ಕು ತಂಡಗಳ ಒಮ್ಮತದ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಂಡಳಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದೇ ಸಮಯದಲ್ಲಿ, ಕ್ರಿಕೆಟ್ ಶ್ರೀಲಂಕಾ ಕೂಡ ಇದೇ ವಿಷಯವನ್ನು ಪುನರುಚ್ಚರಿಸಿ, ಒಪ್ಪಿಗೆಯ ನಂತರವೇ ಮೀಸಲು ದಿನವನ್ನು ಸೇರಿಸಲಾಗಿದೆ ಎಂದು ಹೇಳಿಕೊಂಡಿದೆ.

ಅಸಮಾಧಾನ ಹೊರಹಾಕಿದ ತರಬೇತುದಾರರು

ಈಗ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳು ಈ ರೀತಿ ಹೇಳುತ್ತಿರುವುದರಿಂದ ಇದನ್ನು ಅಧಿಕೃತ ಹೇಳಿಕೆ ಎಂದು ಪರಿಗಣಿಸಲಾಗುವುದು. ಆದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಶನಿವಾರ ನಡೆಯಲಿದ್ದು, ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎರಡೂ ತಂಡಗಳ ಕೋಚ್‌ಗಳು ಈ ನಿರ್ಧಾರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ಕೋಚ್ ಚಂಡಿಕಾ ಹತುರುಸಿಂಗ ಅವರು ತಮ್ಮ ಪಂದ್ಯಗಳಿಗೂ ಮೀಸಲು ದಿನ ಬೇಕು ಎಂದರೆ, ಶ್ರೀಲಂಕಾದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಇದು ಸಂಪೂರ್ಣ ಅನ್ಯಾಯ ಎಂದು ಹೇಳಿಕೆ ನೀಡಿ ಎಲ್ಲರಿಗೂ ಆಘಾತ ನೀಡಿದರು.

ಯಾರು ನಿಜ, ಯಾರು ಸುಳ್ಳು?

ಇಷ್ಟೇ ಅಲ್ಲ, ತಾಂತ್ರಿಕ ಸಮಿತಿಯಲ್ಲಿ ಬಾಂಗ್ಲಾದೇಶ ಮಂಡಳಿಯನ್ನು ಪ್ರತಿನಿಧಿಸುವ ಅಧಿಕಾರಿಯು ಸಹ ಸಮಾಲೋಚನೆಯ ಕಲ್ಪನೆಯನ್ನು ನಿರಾಕರಿಸಿದ್ದಾರೆ ಎಂದು ಕ್ರಿಕ್‌ಬಜ್ ವರದಿಯಲ್ಲಿ ಹೇಳಿಕೊಂಡಿದೆ. ವರದಿಯಲ್ಲಿ, ಬಿಸಿಬಿ ನಿರ್ದೇಶಕ ಅಕ್ರಮ್ ಖಾನ್ ಅವರನ್ನು ಉಲ್ಲೇಖಿಸಿ, ಎಸಿಸಿ ಈ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಂಡಿದೆ. ಇದರ ಬಗ್ಗೆ ನಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಲಾಗಿದೆ. ಈಗ ಯಾರು ಸರಿ ಮತ್ತು ಯಾರು ತಪ್ಪು ಎಂದು ಹೇಳುವುದು ಕಷ್ಟ, ಆದರೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಒಂದೇ ಪಂದ್ಯಾವಳಿಯಲ್ಲಿ ವಿಭಿನ್ನ ಆಟದ ಪರಿಸ್ಥಿತಿಗಳಲ್ಲಿ ಆಡಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 am, Sat, 9 September 23