Asia Cup 2025: ಮೊದಲ ಬಾರಿಗೆ ಅರ್ಹತೆ ಪಡೆದು ಇತಿಹಾಸ ಸೃಷ್ಟಿಸಿದ ಓಮನ್; ಭಾರತಕ್ಕೆ ಎದುರಾಳಿ

Asia Cup 2025: 2025ರ ಏಷ್ಯಾಕಪ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆಯುವ ಮೂಲಕ ಕ್ರಿಕೆಟ್ ಶಿಶು ಓಮನ್ ಇತಿಹಾಸ ಸೃಷ್ಟಿಸಿದೆ.2025 ರ ಏಷ್ಯಾಕಪ್‌ನಲ್ಲಿ 8 ತಂಡಗಳು ಭಾಗವಹಿಸಲಿದ್ದು, ಇದನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಪ್ರಕಾರ ಓಮನ್ ಮತ್ತು ಭಾರತ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ.

Asia Cup 2025: ಮೊದಲ ಬಾರಿಗೆ ಅರ್ಹತೆ ಪಡೆದು ಇತಿಹಾಸ ಸೃಷ್ಟಿಸಿದ ಓಮನ್; ಭಾರತಕ್ಕೆ ಎದುರಾಳಿ
Oman

Updated on: Feb 28, 2025 | 5:32 PM

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ನಡುವೆ ಭಾರತದ ಆತಿಥ್ಯದಲ್ಲಿ ಕೆಲವೇ ತಿಂಗಳಲ್ಲಿ ನಡೆಯಲ್ಲಿರುವ ಏಷ್ಯಾಕಪ್ (Asia Cup 2025) ಬಗ್ಗೆ ಬಿಗ್​ ಅಪ್​ಡೇಟ್ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಏಷ್ಯಾಕಪ್ ಸೆಪ್ಟಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಏಷ್ಯಾದ 8 ತಂಡಗಳು ಭಾಗವಹಿಸಲಿದ್ದು, ಇದೇ ಮೊದಲ ಬಾರಿಗೆ ಈ ಟೂರ್ನಿಗೆ ಅರ್ಹತೆ ಪಡೆಯುವ ಮೂಲಕ ಕ್ರಿಕೆಟ್ ಶಿಶು ಓಮನ್ (Oman) ಇತಿಹಾಸ ಸೃಷ್ಟಿಸಿದೆ. ವಾಸ್ತವವಾಗಿ, 54 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ಮೊದಲ ಬಾರಿಗೆ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ.

ACC ಪುರುಷರ ಪ್ರೀಮಿಯರ್ ಕಪ್ 2024 ರಲ್ಲಿ, ಓಮನ್ ತಂಡವು ಯುಎಇ, ಕುವೈತ್, ಬಹ್ರೇನ್ ಮತ್ತು ಕಾಂಬೋಡಿಯಾದಂತಹ ತಂಡಗಳೊಂದಿಗೆ ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿತ್ತು. ಗುಂಪು ಹಂತದಲ್ಲಿ ಅಗ್ರ 2ನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದದಿದ್ದ ಓಮನ್, ಏಕಪಕ್ಷೀಯ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಪಂದ್ಯದಲ್ಲಿ ಓಮನ್, ಯುಎಇ ವಿರುದ್ಧ 55 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಇದರ ಹೊರತಾಗಿಯೂ, ಯುಎಇ ಮತ್ತು ಹಾಂಗ್ ಕಾಂಗ್ ಜೊತೆಗೆ ಟೂರ್ನಮೆಂಟ್‌ನಲ್ಲಿ ಅಗ್ರ-3 ನೇ ಸ್ಥಾನ ಪಡೆದ ಓಮನ್, 2025 ರ ಏಷ್ಯಾ ಕಪ್‌ಗೆ ಅರ್ಹತೆ ಪಡೆದುಕೊಂಡಿತು.

ಭಾರತದ ಗುಂಪಿನಲ್ಲಿ ಓಮನ್

2025 ರ ಏಷ್ಯಾ ಕಪ್‌ನಲ್ಲಿ 8 ತಂಡಗಳು ಭಾಗವಹಿಸಲಿದ್ದು, ಇದನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಪ್ರಕಾರ ಓಮನ್ ಮತ್ತು ಭಾರತ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಬಾರಿ ಭಾರತ ಮತ್ತು ಪಾಕಿಸ್ತಾನ ಕೂಡ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಗುಂಪು ಹಂತದ ನಂತರ ಸೂಪರ್-4 ಹಂತದ ಪಂದ್ಯಗಳನ್ನು ಆಡಲಾಗುತ್ತದೆ. ಈ ಸುತ್ತಿಗೆ ಅರ್ಹತೆ ಪಡೆದರೆ ಎರಡೂ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಈ ಸುತ್ತಿನಲ್ಲಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಗಳಿಸುವ ತಂಡಗಳು ಫೈನಲ್‌ಗೆ ಸ್ಥಾನ ಪಡೆಯುತ್ತವೆ. ಭಾರತ ಮತ್ತು ಪಾಕಿಸ್ತಾನ ಸೂಪರ್-4 ರಲ್ಲಿ ಅಗ್ರ-2 ಸ್ಥಾನ ಪಡೆಯಲು ಸಾಧ್ಯವಾದರೆ, ಫೈನಲ್‌ನಲ್ಲಿಯೂ ಈ ಎರಡು ತಂಡಗಳು ಮುಖಾಮುಖಿಯಾಗಬಹುದು.

U19 Asia Cup 2024: ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್​ಗೇರಿದ ಟೀಂ ಇಂಡಿಯಾ

ಪಂದ್ಯಾವಳಿಯನ್ನು ಎಲ್ಲಿ ಆಯೋಜಿಸಲಾಗುವುದು?

ಏಷ್ಯಾಕಪ್ ಆತಿಥ್ಯ ಭಾರತದ ಬಳಿ ಇದ್ದರೂ, ಈ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ವಿವಾದದಿಂದಾಗಿ, ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಒಪ್ಪಿಗೆ ನೀಡಲಾಗಿದೆ, ಆದರೆ ಆತಿಥೇಯ ಹಕ್ಕುಗಳು ಬಿಸಿಸಿಐ ಬಳಿಯೇ ಇರುತ್ತವೆ. ಅದೇ ರೀತಿ, ಮುಂದಿನ ಬಾರಿ ಭಾರತ ಅಥವಾ ಪಾಕಿಸ್ತಾನ ಪಂದ್ಯಾವಳಿಯನ್ನು ಆಯೋಜಿಸುವ ಸರದಿ ಬಂದಾಗ, ಈ ಪಂದ್ಯಾವಳಿಯನ್ನು ಕೂಡ ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ