
ಏಷ್ಯಾಕಪ್ 2025 (Asia Cup 2025) ರ ಐದನೇ ಪಂದ್ಯವು ಗ್ರೂಪ್ ಬಿ ತಂಡಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka vs Bangladesh) ನಡುವೆ ನಡೆಯಿತು. ಈ ಪಂದ್ಯವನ್ನು ಏಕಪಕ್ಷೀಯ ರೀತಿಯಲ್ಲಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದ ಶ್ರೀಲಂಕಾ ತಂಡ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ. ಇತ್ತ ತನ್ನ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಸುಲಭ ಜಯ ದಾಖಲಿಸಿದ್ದ ಬಾಂಗ್ಲಾದೇಶ ತಂಡ, ಲಂಕಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸಪ್ಪೆ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 140 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 14.4 ಓವರ್‌ಗಳಲ್ಲಿ ಜಯದ ನಗೆ ಬೀರಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ತಂಡದ ಆರಂಭಿಕರಿಬ್ಬರು ಯಾವುದೇ ರನ್ ಕಲೆಹಾಕದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ ಐದು ಎಸೆತಗಳ ಅಂತರದಲ್ಲಿ ತಂಡದ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ, ನುವಾನ್ ತುಷಾರ ಅವರು ತಂಜಿದ್ ಹಸನ್ ಅವರನ್ನು ಬೌಲ್ಡ್ ಮಾಡಿದರು. ಇದಾದ ನಂತರ, ದುಷ್ಮಂತ ಚಮೀರ, ಪರ್ವೇಜ್ ಹುಸೇನ್ ಎಮನ್ ಅವರನ್ನು ಔಟ್ ಮಾಡಿದರು.
ಆ ಬಳಿಕ ಬಂದ ತೌಹೀದ್ ಹೃದಯ್ ಕೂಡ ಎಂಟು ರನ್ ಗಳಿಸಿ ರನೌಟ್ ಆದರು. ಬಾಂಗ್ಲಾದೇಶಕ್ಕೆ ನಾಲ್ಕನೇ ಹೊಡೆತ ನೀಡಿದ ವನಿಂದು ಹಸರಂಗ ಮೆಹದಿ ಹಸನ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ನಾಯಕ ಲಿಟನ್ ದಾಸ್ ಕೂಡ ಕೇವಲ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಕೆಳಕ್ರಮಾಂಕದಲ್ಲಿ ಒಂದಾದ ಝಾಕಿರ್ ಮತ್ತು ಶಮೀಮ್ 70 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ಬಾಂಗ್ಲಾದೇಶದ ಸ್ಕೋರ್ ಅನ್ನು 139 ರನ್ಗಳಿಗೆ ಕೊಂಡೊಯ್ದರು. ಇವರಿಬ್ಬರು ಕ್ರಮವಾಗಿ 41 ಮತ್ತು 42 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ಶ್ರೀಲಂಕಾ ಪರ ಹಸರಂಗ ಎರಡು ವಿಕೆಟ್ ಪಡೆದರೆ, ನುವಾನ್ ತುಷಾರ ಮತ್ತು ದುಷ್ಮಂತ ಚಮೀರ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೂಡ ಕಳಪೆ ಆರಂಭವನ್ನೇ ಕಂಡಿತು. ವೇಗಿ ಮುಸ್ತಾಫಿಜುರ್ ರೆಹಮಾನ್ ಎರಡನೇ ಓವರ್ನಲ್ಲಿ ಕುಶಾಲ್ ಮೆಂಡಿಸ್ ಅವರನ್ನು ಬಲಿಪಶುವನ್ನಾಗಿ ಮಾಡಿದರು. ಆದರೆ ಆ ಬಳಿಕ ಜೊತೆಯಾದ ಪಾತುಮ್ ನಿಸ್ಸಂಕಾ ಹಾಗೂ ಕಾಮಿಲ್ ಮಿಶಾರ ಎರಡನೇ ವಿಕೆಟ್ಗೆ 95 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಈ ವೇಳೆ ಭರ್ಜರಿ ಅರ್ಧಶತಕ ಸಿಡಿಸಿದ ಆರಂಭಿಕ ನಿಸ್ಸಂಕಾ 34 ಎಸೆತಗಳಲ್ಲಿ 50 ರನ್ ಬಾರಿಸಿ ಔಟಾದರೆ, ಕಾಮಿಲ್ ಮಿಶಾರ ಅಜೇಯ 46 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ