ಮಳೆಯಿಂದ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ರದ್ದಾದರೆ 2 ತಂಡಗಳಿಗೂ ನಷ್ಟವಿಲ್ಲ..!

2026ರ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಮಳೆಯಿಂದ ಕ್ವಾರ್ಟರ್ ಫೈನಲ್ ರದ್ದುಗೊಂಡಿದ್ದು, ಭಾರತ-ಪಾಕ್ ಶ್ರೇಯಾಂಕ ಆಧಾರದಲ್ಲಿ ಸೆಮಿಫೈನಲ್ ತಲುಪಿವೆ. ಸೆಮಿಫೈನಲ್ ಅಥವಾ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದರೆ, ಶ್ರೇಯಾಂಕದ ಆಧಾರದ ಮೇಲೆ ಮುಂದಿನ ಸುತ್ತಿಗೆ ಅರ್ಹತೆ ಅಥವಾ ಪದಕ ನಿರ್ಧರಿಸಲಾಗುತ್ತದೆ. ಈ ಬಾರಿ ಫೈನಲ್ ರದ್ದಾದರೆ, ಎರಡೂ ತಂಡಗಳಿಗೆ ಚಿನ್ನದ ಪದಕ ನೀಡುವ ಹೊಸ ನಿಯಮ ಜಾರಿಯಾಗಿದೆ.

ಮಳೆಯಿಂದ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ರದ್ದಾದರೆ 2 ತಂಡಗಳಿಗೂ ನಷ್ಟವಿಲ್ಲ..!
ಏಷ್ಯನ್ ಗೇಮ್ಸ್ ಕ್ರಿಕೆಟ್

Updated on: Sep 28, 2026 | 4:37 PM

ಮಳೆಯಿಂದಾಗಿ 2026 ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಮ್ಮ ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ಆಡದೆ ಸೆಮಿಫೈನಲ್ ತಲುಪಿವೆ. ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಈ ಎರಡೂ ತಂಡಗಳಿಗೆ ಸೆಮೀಸ್ ಟಿಕೆಟ್ ಸಿಕ್ಕಿದೆ. ಮುಂದೆ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದರೆ, ಅದೇ ಶ್ರೇಯಾಂಕಗಳ ಆಧಾರದ ಮೇಲೆ ಫೈನಲ್​ಗೇರುವ ತಂಡಗಳನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಫೈನಲ್​ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದರೆ ಯಾವ ತಂಡಕ್ಕೆ ಚಿನ್ನದ ಪದಕ ಸಿಗಲಿದೆ ಮತ್ತು ಯಾವ ತಂಡಕ್ಕೆ ಬೆಳ್ಳಿ ಪದಕ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಮಳೆಯಿಂದ ಕ್ವಾರ್ಟರ್ ಫೈನಲ್ ರದ್ದು

ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದವು. ಇತರ ತಂಡಗಳು ಗುಂಪು ಹಂತದ ಪಂದ್ಯಗಳನ್ನು ಆಡಿ ಮುಂದಿನ ಸುತ್ತಿಗೆ ಮುನ್ನಡೆದಿದ್ದವು. ಆದರೆ ಕ್ವಾರ್ಟರ್ ಫೈನಲ್ ಸುತ್ತು ನಡೆಯುವುದಕ್ಕೆ ಮಳೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಐಸಿಸಿ ರ್ಯಾಂಕಿಂಗ್​ನಲ್ಲಿ ಮೇಲಿದ್ದ ತಂಡಗಳು ನೇರವಾಗಿ ಸೆಮಿಫೈನಲ್‌ಗೇರಿದರೆ, ಉಳಿದ ತಂಡಗಳು ಟೂರ್ನಿಯಿಂದ ಹೊರಬಿದ್ದವು.

ಸೆಮೀಸ್​ಗೇರಿದ ಭಾರತ-ಪಾಕ್

ಸೆಪ್ಟೆಂಬರ್ 28 ರಂದು ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಯಿತು. ಹೀಗಾಗಿ ಶ್ರೇಯಾಂಕದ ಆಧಾರದ ಮೇಲೆ ಸೆಮಿಫೈನಲ್‌ಗೇರುವ ತಂಡಗಳನ್ನು ನಿರ್ಧರಿಸಲಾಯಿತು. ಆ ಪ್ರಕಾರ ತಮ್ಮ ಎದುರಾಳಿಗಳಿಗಿಂತ ಉತ್ತಮ ಶ್ರೇಯಾಂಕಗಳನ್ನು ಹೊಂದಿದ್ದ ಭಾರತ ಮತ್ತು ಪಾಕಿಸ್ತಾನ ಮುಂದಿನ ಹಂತಕ್ಕೆ ಮುನ್ನಡೆದವು. ಸೆಮಿಫೈನಲ್‌ನಲ್ಲಿಯೂ ಸಹ ಪಂದ್ಯ ರದ್ದಾದರೆ, ಶ್ರೇಯಾಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ನಿಯಮವಿದೆ. ಟೀಂ ಇಂಡಿಯಾದ ಶ್ರೇಯಾಂಕವು ಇತರ ತಂಡಗಳಿಗಿಂತ ಉತ್ತಮವಾಗಿದೆ. ಹೀಗಾಗಿ ಸೆಮಿಫೈನಲ್‌ ಪಂದ್ಯ ರದ್ದಾದರೆ ಟೀಂ ಇಂಡಿಯಾ ನೇರವಾಗಿ ಫೈನಲ್​ಗೇರಲಿದೆ.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4ನೇ ಸ್ವರ್ಣ; ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಕಬಡ್ಡಿ ತಂಡ..!

ಫೈನಲ್​ಗೆ ಹೊಸ ನಿಯಮ

ಇನ್ನು ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಆಗ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. ಏಕೆಂದರೆ ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪ್ರಶಸ್ತಿ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಹೀಗಾಗಿ ರ್ಯಾಂಕಿಂಗ್​ನಲ್ಲಿ ಮೇಲಿದ್ದ ಟೀಂ ಇಂಡಿಯಾವನ್ನು ಚಾಂಪಿಯನ್ ಎಂದು ಘೋಷಿಸಿ ಚಿನ್ನದ ಪದಕ ನೀಡಲಾಗಿತ್ತು. ಆದಾಗ್ಯೂ ಈ ನಿರ್ಧಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಆದ್ದರಿಂದ ಈ ಬಾರಿ ಆ ನಿಯಮವನ್ನು ಬದಲಾಯಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಹೊಸ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ. ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದರೆ, ಈ ಬಾರಿ ಎರಡೂ ತಂಡಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us