7.1 ರನ್ ರೇಟ್… ಆಸ್ಟ್ರೇಲಿಯಾದಲ್ಲಿ ಆಂಗ್ಲ ದಾಂಡಿಗರ ಅಬ್ಬರ!
ಕಾಂಗರೂಗಳ ನಾಡಿನಲ್ಲಿ ಆಂಗ್ಲ ದಾಂಡಿಗರ ಅಬ್ಬರಕ್ಕೆ 23 ವರ್ಷಗಳ ಹಳೆಯ ದಾಖಲೆ ಉಡೀಸ್ ಆಗಿದೆ. ಅಡಿಲೇಡ್ ಓವಲ್‌ನಲ್ಲಿ ಬೌಂಡರಿ-ಸಿಕ್ಸರ್‌ಗಳ ಮಳೆಗರೆದ ಇಂಗ್ಲೆಂಡ್ ಬ್ಯಾಟರ್‌ಗಳು, 7.1 ರನ್ ರೇಟ್‌ನಲ್ಲಿ ರನ್ ಕಲೆಹಾಕಿ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಸಾರ್ವಕಾಲಿಕ ಶ್ರೇಷ್ಠ ಏಕದಿನ ಮೊತ್ತವನ್ನು ದಾಖಲಿಸಿದೆ. ಇದರ ಜೊತೆಗೆ ಶ್ರೀಲಂಕಾದ ದಾಖಲೆಯನ್ನು ಮುರಿದಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನವೆಂಬರ್ 15, 2026 ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಂಗ್ಲ ಪಡೆ ಬರೋಬ್ಬರಿ 355/6 ರನ್ ಕಲೆಹಾಕುವ ಮೂಲಕ, ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಅತ್ಯಧಿಕ ಏಕದಿನ ಮೊತ್ತವನ್ನು ದಾಖಲಿಸಿದೆ. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ 135 ರನ್‌ಗಳ ಬೃಹತ್ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.
7.10 ರನ್ ರೇಟ್‌ನಲ್ಲಿ ಆಂಗ್ಲರ ಅಬ್ಬರ:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭದಿಂದಲೂ ಉತ್ತಮ ಅಡಿಪಾಯ ಸಿಕ್ಕಿತು. ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಇಂಗ್ಲೆಂಡ್ ಬ್ಯಾಟರ್‌ಗಳು ಇಡೀ ಇನ್ನಿಂಗ್ಸ್‌ನಲ್ಲಿ ಪ್ರತಿ ಓವರ್‌ಗೆ 7.10 ಸರಾಸರಿಯಲ್ಲಿ ರನ್ ಗಳಿಸಿ ಅಬ್ಬರಿಸಿದರು.
ಈ ಐತಿಹಾಸಿಕ ಮೊತ್ತದ ಹಿಂದೆ ಟಾಮ್ ಬ್ಯಾಂಟನ್ ಅವರ ಭರ್ಜರಿ ಶತಕ ಪ್ರಮುಖ ಪಾತ್ರ ವಹಿಸಿತು. ಕೇವಲ 99 ಎಸೆತಗಳನ್ನು ಎದುರಿಸಿದ ಬ್ಯಾಂಟನ್ 121 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಬ್ಯಾಟರ್ ಜೋ ರೂಟ್ (62), ಜೋರ್ಡನ್ ಕಾಕ್ಸ್ (67) ಹಾಗೂ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿಲ್ ಜ್ಯಾಕ್ಸ್ (ಅಜೇಯ 54) ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ವಿಶೇಷವೆಂದರೆ, 1971ರಿಂದಲೂ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ತಂಡವು, 55 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗರೂಗಳ ನಾಡಿನಲ್ಲಿ 350+ ರನ್ ಕಲೆಹಾಕಿದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಪ್ರತಿ ಓವರ್‌ಗೆ 7+ ರನ್ ರೇಟ್‌ನಲ್ಲಿ ಇನ್ನಿಂಗ್ಸ್ ಕಟ್ಟಿರುವುದು ಕೂಡ ಇದೇ ಮೊದಲು. ಈ ಮೂಲಕ ಅಡಿಲೇಡ್ ಮೈದಾನದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
23 ವರ್ಷಗಳ ಹಳೆಯ ದಾಖಲೆ ಉಡೀಸ್!
ಈ ಪಂದ್ಯದಲ್ಲಿ ದಾಖಲಾದ 355/6 ರನ್‌ಗಳು ಕೇವಲ ಇಂಗ್ಲೆಂಡ್ ತಂಡದ ವೈಯಕ್ತಿಕ ದಾಖಲೆ ಮಾತ್ರವಲ್ಲ, ಆಸ್ಟ್ರೇಲಿಯಾ ನೆಲದಲ್ಲಿ ಯಾವುದೇ ಪ್ರವಾಸಿ ತಂಡವೊಂದು ಆತಿಥೇಯರ ವಿರುದ್ಧ ಗಳಿಸಿದ ಅತ್ಯಧಿಕ ಏಕದಿನ ಮೊತ್ತವಾಗಿದೆ. ಈ ಮೂಲಕ 2003ರಲ್ಲಿ ಶ್ರೀಲಂಕಾ ತಂಡ ದಾಖಲಿಸಿದ್ದ 343/5 ರನ್‌ಗಳ 23 ವರ್ಷಗಳ ಹಳೆಯ ದಾಖಲೆಯನ್ನು ಇಂಗ್ಲೆಂಡ್ ಅಳಿಸಿ ಹಾಕಿದೆ. .
ಆಸ್ಟ್ರೇಲಿಯಾ ವಿರುದ್ಧ ಅತಿದೊಡ್ಡ ಗೆಲುವು:
356 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿ ಕೇವಲ 220 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಇಂಗ್ಲೆಂಡ್ 135 ರನ್‌ಗಳ ಐತಿಹಾಸಿಕ ಜಯ ದಾಖಲಿಸಿತು. ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯರ ವಿರುದ್ಧ ಇಂಗ್ಲೆಂಡ್ ಗಳಿಸಿದ ಅತಿದೊಡ್ಡ ಏಕದಿನ ಗೆಲುವು ಇದಾಗಿದೆ.
ಒಟ್ಟಾರೆಯಾಗಿ, ಕಾಂಗರೂಗಳ ನಾಡಿನಲ್ಲಿ ಆಂಗ್ಲ ಬ್ಯಾಟರ್‌ಗಳ ಈ ರುದ್ರನರ್ತನ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. 355 ರನ್‌ಗಳ ಐತಿಹಾಸಿಕ ಮೊತ್ತ ಮತ್ತು 135 ರನ್‌ಗಳ ಬೃಹತ್ ಜಯದೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿರುವ ಇಂಗ್ಲೆಂಡ್, ಮುಂದಿನ ಪಂದ್ಯಗಳಲ್ಲಿ ಆತಿಥೇಯರಿಗೆ ಮತ್ತಷ್ಟು ಕಠಿಣ ಸವಾಲು ಒಡ್ಡುವ ಸೂಚನೆ ನೀಡಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮಿಚೆಲ್ ಮಾರ್ಷ್ (ನಾಯಕ) , ಟ್ರಾವಿಸ್ ಹೆಡ್ , ಕೂಪರ್ ಕೊನೊಲ್ಲಿ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮ್ಯಾಟ್ ರೆನ್ಶಾ , ಕ್ಯಾಮರೋನ್ ಗ್ರೀನ್ , ಜ್ಯಾಕ್ ಎಡ್ವರ್ಡ್ಸ್ , ಕ್ಸೇವಿಯರ್ ಬಾರ್ಟ್ಲೆಟ್ , ಆ್ಯಡಂ ಝಂಪಾ , ಸ್ಪೆನ್ಸರ್ ಜಾನ್ಸನ್ , ರಿಲೇ ಮೆರೆಡಿತ್.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ… ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರು ಆಯ್ಕೆ!
ಇಂಗ್ಲೆಂಡ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್ , ಬೆನ್ ಡಕೆಟ್ , ಜೋ ರೂಟ್ , ಹ್ಯಾರಿ ಬ್ರೂಕ್ (ನಾಯಕ) , ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಸ್ಯಾಮ್ ಕರನ್ , ವಿಲ್ ಜ್ಯಾಕ್ಸ್ , ಲಿಯಾಮ್ ಡಾಸನ್ , ಗಸ್ ಅಟ್ಕಿನ್ಸನ್ , ಜೋಫ್ರಾ ಆರ್ಚರ್ , ಸೋನಿ ಬೇಕರ್.
Published On - 12:57 pm, Mon, 16 November 26




