ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ: ಪ್ಯಾಟ್ ಕಮಿನ್ಸ್ ರಿಟರ್ನ್

|

Updated on: Oct 14, 2024 | 11:54 AM

Australia vs Pakistan: ಏಕದಿನ ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದ ಪ್ಯಾಟ್ ಕಮಿನ್ಸ್ ಇದೀಗ ಒಡಿಐ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಅದರಂತೆ ನವೆಂಬರ್​​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ಪ್ಯಾಟ್ ಕಮಿನ್ಸ್ ಮತ್ತೆ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ: ಪ್ಯಾಟ್ ಕಮಿನ್ಸ್ ರಿಟರ್ನ್
Australia
Follow us on

ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರ ಈ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಒಡಿಐ ತಂಡದಿಂದ ಹೊರಗುಳಿದಿದ್ದ ಕಮಿನ್ಸ್ ಇದೀಗ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇನ್ನು ಸ್ಟಾರ್ ಆಲ್​ರೌಂಡರ್ ಮಿಚೆಲ್ ಮಾರ್ಷ್ ಹಾಗೂ ಸ್ಪೋಟಕ ಆರಂಭಿಕ ಟ್ರಾವಿಸ್ ಹೆಡ್ ಪಿತೃತ್ವ ರಜೆಯೊಂದಿಗೆ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಹೆಡ್ ಹಾಗೂ ಮಾರ್ಷ್ ಕಾಣಿಸಿಕೊಳ್ಳುವುದಿಲ್ಲ.

ಇತ್ತ ಟ್ರಾವಿಸ್ ಹೆಡ್ ಹೊರಗುಳಿದಿರುವ ಕಾರಣ ಯುವ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮ್ಯಾಟ್ ಶಾರ್ಟ್‌ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮುಂದಿದೆ ಮೂರು ಭರ್ಜರಿ ದಾಖಲೆಗಳು

ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಮಾರ್ಕಸ್ ಸ್ಟೋಯಿನಿಸ್ ಇದೀಗ ತಂಡಕ್ಕೆ ಮರಳಿದ್ದು, ಇವರೊಂದಿಗೆ ಉದಯೋನ್ಮುಖ ತಾರೆಗಳಾದ ಕೂಪರ್ ಕೊನೊಲಿ ಮತ್ತು ಆರೋನ್ ಹಾರ್ಡಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಆಸ್ಟ್ರೇಲಿಯಾ ಏಕದಿನ ತಂಡ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಏಕದಿನ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಶಾನ್ ಅಬಾಟ್, ಕೂಪರ್ ಕೊನೊಲಿ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರೋನ್ ಹಾರ್ಡಿ, ಜೋಶ್ ಹ್ಯಾಝ್ಲ್‌ವುಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಆ್ಯಡಂ ಝಂಪಾ.

ಆಸ್ಟ್ರೇಲಿಯಾ – ಪಾಕಿಸ್ತಾನ್ ಏಕದಿನ ಸರಣಿ ವೇಳಾಪಟ್ಟಿ:

  • ಮೊದಲ ಏಕದಿನ: ನವೆಂಬರ್ 4 – ಮೆಲ್ಬೋರ್ನ್
  • ಎರಡನೇ ಏಕದಿನ: ನವೆಂಬರ್ 8 – ಅಡಿಲೇಡ್
  • ಮೂರನೇ ಏಕದಿನ: ನವೆಂಬರ್ 10 – ಪರ್ತ್

ಈ ಸರಣಿ ಮುಕ್ತಾಯದ ಬಳಿಕ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯನ್ನೂ ಸಹ ಆಡಲಿದೆ. ಈ ಸಿರೀಸ್ ನವೆಂಬರ್ 15 ರಿಂದ ಶುರುವಾಗಲಿದ್ದು, ನವೆಂಬರ್ 17 ರಂದು ಎರಡನೇ ಪಂದ್ಯ ನಡೆಯಲಿದೆ. ಹಾಗೆಯೇ ನವೆಂಬರ್ 19 ರಂದು ಮೂರನೇ ಟಿ20 ಪಂದ್ಯ ಜರುಗಲಿದೆ.