AUS vs SA: ವಾರ್ನರ್- ಲಬುಶೇನ್ ಶತಕ; ಆಸೀಸ್ ಎದುರು ಮತ್ತೆ ಮಂಡಿಯೂರಿದ ಆಫ್ರಿಕಾ..!

|

Updated on: Sep 10, 2023 | 9:59 AM

AUS vs SA: ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿದ್ದ ಆಸೀಸ್ ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 392 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 269 ರನ್​ಗಳಿಗೆ ಆಲೌಟ್ ಆಗುವ ಮೂಲಕ 123 ರನ್​ಗಳ ಹೀನಾಯ ಸೋಲು ಅನುಭವಿಸಿತು.

AUS vs SA: ವಾರ್ನರ್- ಲಬುಶೇನ್ ಶತಕ; ಆಸೀಸ್ ಎದುರು ಮತ್ತೆ ಮಂಡಿಯೂರಿದ ಆಫ್ರಿಕಾ..!
ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ
Follow us on

ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಕಾಂಗರೂ ಪಡೆ, ಹರಿಣಗಳ (Australia beats South Africa) ಮೇಲೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಈ ಮೊದಲು ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ರಿಕಾ ತಂಡವನ್ನು ವೈಟ್ ವಾಶ್ ಮಾಡಿದ್ದ ಆಸೀಸ್, ಏಕದಿನ ಸರಣಿಯಲ್ಲೂ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿದೆ. ಐದು ಪಂದ್ಯಗಳ ಏಕದಿನ ಸರಣಿಯ (ODI Series ) ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿದ್ದ ಆಸೀಸ್ ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 392 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 269 ರನ್​ಗಳಿಗೆ ಆಲೌಟ್ ಆಗುವ ಮೂಲಕ 123 ರನ್​ಗಳ ಹೀನಾಯ ಸೋಲು ಅನುಭವಿಸಿತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ವಾರ್ನರ್- ಲಬುಶೇನ್ ಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಶತಕದ ಜೊತೆಯಾಟ ನಡೆಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ವೇಳೆ 64 ರನ್ ಸಿಡಿಸಿ ಆಡುತ್ತಿದ್ದ ಹೆಡ್ ಶಮ್ಸಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್​ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಹೀಗಾಗಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನದಿಂದ ಆಸೀಸ್ ಕೊಂಚ ಹಿನ್ನಡೆ ಅನುಭವಿಸಿತು.

AUS vs SA: ಬವುಮಾ ಶತಕ ವ್ಯರ್ಥ; ಮೊದಲ ಏಕದಿನ ಪಂದ್ಯ ಗೆದ್ದ ಆಸೀಸ್

ಆದರೆ ಮಾರ್ಷ್ ವಿಕೆಟ್ ಬಳಿಕ ವಾರ್ನರ್ ಜೊತೆಗೂಡಿದ ಲಬುಶೇನ್ ಆಫ್ರಿಕನ್ ಬೌಲರ್​ಗಳ ಬೆವರಿಳಿಸಿದರು. ಈ ಇಬ್ಬರು ತಲಾ ಶತಕ ಸಿಡಿಸುವುದರೊಂದಿಗೆ ತಂಡವನ್ನು ಬೃಹತ್ ಗುರಿಯತ್ತ ಮುನ್ನಡೆಸಿದರು. ವಾರ್ನರ್ 93 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 106 ರನ್ ಗಳಿಸಿ ಔಟಾದರೆ, ಲಬುಶೇನ್ 99 ಎಸೆತಗಳಲ್ಲಿ 19 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 124 ರನ್ ಬಾರಿಸಿದರು. ಈ ಇಬ್ಬರ ಜೊತೆಗೆ ಅರ್ಧಶತಕ ಸಿಡಿಸಿದ ಜೋಸ್ ಇಂಗ್ಲಿಸ್​, ಆಸೀಸ್ ತಂಡ 392 ರನ್​ಗಳಿಸಲು ನೆರವಾದರು.

ಉತ್ತಮ ಆರಂಭ ಪಡೆದ ಆಫ್ರಿಕಾ

392 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಬವುಮಾ 81 ರನ್​ಗಳ ಜೊತೆಯಾಟ ನೀಡಿದರು. ಆದರೆ ಇಬ್ಬರಿಗೂ ಅರ್ಧಶತಕ ಸಿಡಿಸಿಲು ಸಾಧ್ಯವಾಗಲಿಲ್ಲ. ಡಿ ಕಾಕ್ 45 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಬವುಮಾ 46 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಈ ಇಬ್ಬರ ವಿಕೆಟ್ ಪತನದ ಬಳಿಕ ಬಂದ ದುಸೇನ್ ಹಾಗೂ ಐಡೆನ್ ಮಾರ್ಕ್ರಾಮ್ 20 ರ ಗಡಿ ದಾಟಲಿಲ್ಲ. ಹೀಗಾಗಿ ಆಫ್ರಿಕ ಇನ್ನಿಂಗ್ಸ್ಗೆ ಭಾರಿ ಹೊಡೆತ ಬಿದ್ದಿತು.

ಆದರೆ ಐದು ಮತ್ತು ಆರನೇ ವಿಕೆಟ್​ಗೆ ಜೊತೆಯಾದ ಕ್ಲಾಸೆನ್ ಹಾಗೂ ಮಿಲ್ಲರ್ ತಲಾ 49 ರನ್ ಬಾರಿಸುವ ಮೂಲಕ ತಂಡದ ಇನ್ನಿಂಗ್ಸ್ಗೆ ಜೀವ ತುಂಬಿದರಾದರೂ, ಇದನ್ನು ಬಿಗ್ ಇನ್ನಿಂಗ್ಸ್ ಆಡಿ ಪರಿವರ್ತಿಸುವಲ್ಲಿ ಇಬ್ಬರೂ ಎಡವಿದರು. ಈ ಇಬ್ಬರ ವಿಕೆಟ್ ಪತನದ ಬಳಿಕ ಆಫ್ರಿಕಾದ ಪೆವಲಿಯನ್ ಪರೇಡ್ ಆರಂಭವಾಯಿತು. ಅಂತಿಮವಾಗಿ ತಂಡ 42ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 269 ರನ್​ಗಳಿಸಲಷ್ಟೇ ಶಕ್ತವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:57 am, Sun, 10 September 23