ಬ್ರಿಸ್ಬೇನ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (West Indies vs Australia) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆಲುವಿಗೆ 156 ರನ್‌ಗಳ ಸವಾಲಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೂರನೇ ದಿನ ವಿಂಡೀಸ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್ ಗಳಿಸಿ ಆಲೌಟ್ ಆಗಿತ್ತು. ಇದಾದ ಬಳಿಕ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 216 ರನ್‌ಗಳ ಗುರಿ ಪಡೆದ ಕಾಂಗರೂ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದ್ದು, ಇನ್ನೂ 156 ರನ್ ಗಳಿಸಬೇಕಿದೆ. ಆದರೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಎಸೆದ ಮಾರಕ ವೇಗದ ಚೆಂಡು ವಿಂಡೀಸ್ ಆಟಗಾರ ಶಮರ್ ಜೋಸೆಫ್ (Shamar Joseph) ಅವರ ಕಾಲ್ಬೆರಳನ್ನು ಮುರಿದಿದೆ. ಪರಿಣಾಮವಾಗಿ ಶಮರ್ ಜೋಸೆಫ್ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆಯಬೇಕಾಯಿತು.
ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನ 73 ನೇ ಓವರ್ ಬೌಲ್ ಮಾಡಲು ಸ್ಟಾರ್ಕ್ ದಾಳಿಗಿಳಿದರು. ಆ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಕೋರ್ 9 ವಿಕೆಟ್ ನಷ್ಟಕ್ಕೆ 193 ರನ್ ಆಗಿತ್ತು. ವಿಂಡೀಸ್ ಪರ ಶಮರ್ ಜೋಸೆಫ್ ಸ್ಟ್ರೈಕ್‌ನಲ್ಲಿದ್ದರು. ಸ್ಟಾರ್ಕ್ ಈ ಓವರ್‌ನ ನಾಲ್ಕನೇ ಎಸೆತವನ್ನು ಇನ್ಸ್ವಿಂಗ್ ಯಾರ್ಕರ್ ಬೌಲ್ ಮಾಡಿದರು. ಆ ಚೆಂಡು ನೇರವಾಗಿ ಜೋಸೆಫ್ ಅವರ ಕಾಲಿಗೆ ಬಡಿಯಿತು. ಇದರ ಮೇಲೆ ಆಸ್ಟ್ರೇಲಿಯಾ ತಂಡ ಎಲ್‌ಬಿಡಬ್ಲ್ಯುಗಾಗಿ ಮನವಿ ಕೂಡ ಮಾಡಿತು. ಆದರೆ ಸ್ಟಾರ್ಕ್ ನೋ ಬಾಲ್ ಬೌಲ್ ಮಾಡಿದ್ದರಿಂದ ಶಮರ್ ಔಟಾಗುವುದರಿಂದ ಬದುಕುಳಿದರು. ಆದರೆ ಜೋಸೆಫ್ ಅವರ ಹೆಬ್ಬೆರಳಿಗೆ ಚೆಂಡು ಬಲವಾಗಿ ಬಡಿದ ಕಾರಣ ಅವರು ನೋವಿನಿಂದ ನರಳಾಡಲಾರಂಭಿಸಿದರು.
Shamar Joseph has to retire hurt after this toe-crusher from Mitch Starc!
Australia need 216 to win #AUSvWI pic.twitter.com/3gAucaEfwg
— cricket.com.au (@cricketcomau) January 27, 2024
ಬಳಿಕ ಶಮರ್ ಜೋಸೆಫ್ ಅವರು ತಕ್ಷಣವೇ ಶೂಗಳನ್ನು ತೆಗೆದು ಮೈದಾನದಲ್ಲೇ ಮಲಗಿದರು. ಕೂಡಲೇ ಡ್ರೆಸ್ಸಿಂಗ್ ರೂಮ್‌ನಿಂದ ಓಡಿ ಬಂದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರು. ಇದರ ನಂತರ, ಶಮರ್ ಎದ್ದು ನಿಲ್ಲಲು ಪ್ರಯತ್ನಿಸಿದರು. ಆದರೆ ಅವರಿಗೆ ಎದ್ದು ನಿಂತು ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆಯಬೇಕಾಯಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ಕೂಡ 193 ರನ್‌ಗಳಿಗೆ ಕೊನೆಗೊಂಡಿತು.
ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ತಂಡದ ಪರ ಕ್ರಿಕ್ ಮೆಕೆಂಜಿ ಅತ್ಯಧಿಕ 41 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಅಲಿಕ್ ಅಥಾನಾಜೆ 35 ಹಾಗೂ ಜಸ್ಟಿನ್ ಗ್ರೀವ್ಸ್ 33 ರನ್‌ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿದರೆ ತಂಡದ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ ತಂಡ 193 ರನ್‌ಗಲಿಗೆ ಆಲೌಟ್ ಆಯಿತು. ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ನಾಥನ್ ಲಿಯಾನ್ ತಲಾ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sat, 27 January 24