AUS vs BAN: ಬಾಂಗ್ಲ ವಿರುದ್ಧ ಗೆದ್ದು ಟೀಂ ಇಂಡಿಯಾಕ್ಕೂ ಆಘಾತ ನೀಡಿದ ಆಸ್ಟ್ರೇಲಿಯಾ..!

|

Updated on: Jun 21, 2024 | 3:53 PM

T20 World Cup 2024: ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿದೆ. ಉತ್ತಮ ರನ್ ರೇಟ್‌ನಲ್ಲಿ ಭಾರತ ತಂಡವನ್ನು ಕೆಳಕ್ಕೆ ತಳ್ಳಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ತಂಡ 2.350 ರನ್ ರೇಟ್ ಜೊತೆಗೆ ಈಗ ಎ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ 2.471 ರನ್ ರೇಟ್​ನೊಂದಿಗೆ ಮೊದಲ ಸ್ಥಾನಕ್ಕೇರಿದೆ.

AUS vs BAN: ಬಾಂಗ್ಲ ವಿರುದ್ಧ ಗೆದ್ದು ಟೀಂ ಇಂಡಿಯಾಕ್ಕೂ ಆಘಾತ ನೀಡಿದ ಆಸ್ಟ್ರೇಲಿಯಾ..!
ಆಸ್ಟ್ರೇಲಿಯಾ- ಟೀಂ ಇಂಡಿಯಾ
Follow us on

2024 ರ ಟಿ20 ವಿಶ್ವಕಪ್‌ನ (T20 World Cup 2024) ಸೂಪರ್-8 ಸುತ್ತಿನಲ್ಲಿ ನಿರೀಕ್ಷೆಯಂತೆ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು (AUS vs BAN) ಸೋಲಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರ ಹೊರತಾಗಿಯೂ ಬಾಂಗ್ಲಾದೇಶ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಆಸ್ಟ್ರೇಲಿಯಾ ತಂಡ 28 ರನ್​ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 11.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 100 ರನ್ ಕಲೆಹಾಕಿತ್ತು. ಈ ವೇಳೆಗೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಅದಾಗ್ಯೂ ಡಕ್ವರ್ತ್ ಲೂಯಿಸ್ (DLS) ನಿಯಮದಡಿಯಲ್ಲಿ ಆಸ್ಟ್ರೇಲಿಯಾಕ್ಕೆ ಗೆಲುವು ಧಕ್ಕಿತು. ಬಾಂಗ್ಲಾದೇಶ ವಿರುದ್ಧದ ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಟೀಂ ಇಂಡಿಯಾಕ್ಕೂ (Team India) ಪಾಯಿಂಟ್ ಪಟ್ಟಿಯಲ್ಲಿ ಆಘಾತ ನೀಡಿದೆ.

ತತ್ತರಿಸಿದ ಬಾಂಗ್ಲಾ

ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದರ ಲಾಭವೂ ತಂಡಕ್ಕೆ ಸಿಕ್ಕಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ ಪಂದ್ಯದ ಮೂರನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಯಿತು. ಆದರೆ ಈ ಜೊತೆಯಾಟ ಮುರಿದ ತಕ್ಷಣ ಬಾಂಗ್ಲಾದೇಶದ ಬ್ಯಾಟಿಂಗ್ ಸ್ಥಿತಿ ಹದಗೆಟ್ಟಿತು. ನಾಯಕ ಶಾಂಟೊ ಮತ್ತು ತೌಹೀದ್ ಕ್ರಮವಾಗಿ 40 ಮತ್ತು 41 ರನ್ ಕಲೆಹಾಕಿದ್ದನ್ನು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 ರನ್ ಗಳಿಸಿತು. ಆಸೀಸ್ ಪರ ಪ್ಯಾಟ್ ಕಮ್ಮಿನ್ಸ್ ಸತತ 3 ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ಆಡಮ್ ಝಂಪಾ 2 ವಿಕೆಟ್ ಪಡೆದರೆ, ಸ್ಟಾರ್ಕ್, ಮ್ಯಾಕ್ಸ್ ವೆಲ್ ಮತ್ತು ಸ್ಟೊಯಿನಿಸ್ ತಲಾ 1 ವಿಕೆಟ್ ಪಡೆದರು.

T20 World Cup 2024: ಟಿ20 ವಿಶ್ವಕಪ್‌ನಲ್ಲಿ ಬೇಡದ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ..!

ಮಳೆಯಿಂದಾಗಿ ಪಂದ್ಯ ಸ್ಥಗಿತ

ಗೆಲುವಿಗೆ 141 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ ಸ್ಕೋರ್ ಬೋರ್ಡ್‌ಗೆ 65 ರನ್ ಸೇರಿಸಿದರು. ಹೆಡ್ 21 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 31 ರನ್ ಗಳಿಸಿ ಔಟಾದರು. ಅವರ ವಿಕೆಟ್ ಅನ್ನು ರಿಶಾದ್ ಹುಸೇನ್ ಪಡೆದರು. ರಿಶಾದ್ ಅವರು ತಮ್ಮ ಮುಂದಿನ ಓವರ್‌ನಲ್ಲಿ ಕೇವಲ 1 ರನ್ ಗಳಿಸಿದ ನಾಯಕ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು.

ಡೇವಿಡ್ ವಾರ್ನರ್ 35 ಎಸೆತಗಳಲ್ಲಿ 53 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ 6 ಎಸೆತಗಳಲ್ಲಿ 14 ರನ್ ಗಳಿಸಿದ್ದರು. ಈ ವೇಳೆ ಆಸ್ಟ್ರೇಲಿಯಾ ಸ್ಕೋರ್ 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಆಗಿತ್ತು. ಅಂದರೆ ಗೆಲುವು ದೂರವಿರಲಿಲ್ಲ. ಆದರೆ ಇಲ್ಲಿಗೆ ಪಂದ್ಯ ನಿಂತಿದ್ದರಿಂದ ಮತ್ತೆ ಆರಂಭವಾಗಲಿಲ್ಲ. ಪರಿಣಾಮವಾಗಿ ಆಸ್ಟ್ರೇಲಿಯಾವನ್ನು ವಿಜೇತ ಎಂದು ಘೋಷಿಸಲಾಯಿತು. ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಪ್ಯಾಟ್ ಕಮ್ಮಿನ್ಸ್ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.

ಕುಸಿದ ಟೀಂ ಇಂಡಿಯಾ

ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿದೆ. ಉತ್ತಮ ರನ್ ರೇಟ್‌ನಲ್ಲಿ ಭಾರತ ತಂಡವನ್ನು ಕೆಳಕ್ಕೆ ತಳ್ಳಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ತಂಡ 2.350 ರನ್ ರೇಟ್ ಜೊತೆಗೆ ಈಗ ಎ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ 2.471 ರನ್ ರೇಟ್​ನೊಂದಿಗೆ ಮೊದಲ ಸ್ಥಾನಕ್ಕೇರಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 21 June 24