ಬಾಂಗ್ಲಾ ವಿರುದ್ಧ ಕೊನೆಯ ಓವರ್‌ನಲ್ಲಿ ಗೆದ್ದು ಕ್ಲೀನ್ ಸ್ವೀಪ್ನಿಂದ ಪಾರಾದ ಆಸ್ಟ್ರೇಲಿಯಾ
Australia vs Bangladesh ODI: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ, ಕ್ಲೀನ್ ಸ್ವೀಪ್ ತಪ್ಪಿಸಲು ಕೊನೆಯ ಪಂದ್ಯ ಗೆದ್ದಿತು. ಕೂಪರ್ ಕೊನೊಲಿ ಅವರ 149 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 275 ರನ್ ಗುರಿಯನ್ನು ಕೊನೆಯ ಓವರ್‌ನಲ್ಲಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಬಾಂಗ್ಲಾದೇಶ 274 ರನ್ ಗಳಿಸಿತ್ತು, ಲಿಟನ್ ದಾಸ್, ತೌಹಿದ್ ಹೃದಯ್ ಪ್ರಮುಖ ರನ್ ಗಳಿಸಿದ್ದರು.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ (Australia vs Bangladesh ODI) ತಂಡ 2-0 ಅಂತರದಿಂದ ಏಕದಿನ ಸರಣಿ ಸೋತಿತ್ತು. ಆದರೆ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಆಸ್ಟ್ರೇಲಿಯಾ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೂಪರ್ ಕನೋಲಿ (Cooper Connolly) ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಕೊನೆಯ ಓವರ್‌ನಲ್ಲಿ ಗುರಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 274 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 50ನೇ ಓವರ್‌ನಲ್ಲಿ 9 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
274 ರನ್ ಕಲೆಹಾಕಿದ ಬಾಂಗ್ಲಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಸೌಮ್ಯ ಸರ್ಕಾರ್ ನಾಲ್ಕು ಎಸೆತಗಳಲ್ಲಿ ಎರಡು ರನ್ ಗಳಿಸಿ ಔಟಾದರು. ತಾಂಜಿದ್ ಹಸನ್ ಕೂಡ 20 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್ ಕೂಡ 24 ರನ್ಗಳಿಗೆ ಅಂತ್ಯವಾಯಿತು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಟನ್ ದಾಸ್ ಅರ್ಧಶತಕ ಗಳಿಸಿ ಬಾಂಗ್ಲಾದೇಶದ ಇನ್ನಿಂಗ್ಸ್ ಸ್ಥಿರಗೊಳಿಸಿದರು.
ಲಿಟನ್ ದಾಸ್ 78 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿದರೆ, ತೌಹಿದ್ ಹೃದಯ್ ಕೂಡ 88 ಎಸೆತಗಳಲ್ಲಿ 83 ರನ್ ಗಳಿಸಿ ಲಿಟನ್ಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ, ಮೊಸದ್ದೇಕ್ ಹೊಸೈನ್ ಕೂಡ 51 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡವನ್ನು 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 274 ರನ್ಗಳಿಗೆ ಕೊಂಡೊಯ್ದರು.
IND vs AFG: ಏಕದಿನದಲ್ಲಿ 37 ವರ್ಷಗಳ ಹಳೆಯ ದಾಖಲೆ ಮುರಿದ ರೋಹಿತ್ ಶರ್ಮಾ
149 ರನ್ ಬಾರಿಸಿದ ಕೊನೊಲಿ
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳಪೆ ಆರಂಭವನ್ನು ಪಡೆಯಿತು. ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಆದರೆ ಮತ್ತೊಬ್ಬ ಆರಂಭಿಕ ಕೂಪರ್ ಕೊನೊಲಿ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 149 ರನ್ ಬಾರಿಸಿದರು. ಆದಾಗ್ಯೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಟ್ ರೆನ್‌ಶಾ ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಅಲೆಕ್ಸ್ ಕ್ಯಾರಿ ಕೂಡ 16 ಎಸೆತಗಳಲ್ಲಿ 8 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 29 ರನ್ಗಳಿಗೆ ಸುಸ್ತಾದರು. ಗ್ರೀನ್ ಇನ್ನಿಂಗ್ಸ್ 27 ರನ್ಗಳಿಗೆ ಅಂತ್ಯವಾದರೆ ಆಲಿವರ್ ಪೀಕ್ ಕೂಡ 27 ರನ್‌ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಪಂದ್ಯವನ್ನು ಒಂದು ವಿಕೆಟ್ನಿಂದ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Sun, 14 June 26




