ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನ್ (Pakistan) ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಆಸೀಸ್ ಪಡೆ 2-0 ಅಂತರದಿಂದ ವಶಪಡಿಸಿಕೊಂಡಂತಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 318 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿತು. ಕೇವಲ 48 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕಮಿನ್ಸ್ ಪಾಕ್ ಪಡೆಯನ್ನು ಮೊದಲ ಇನಿಂಗ್ಸ್ನಲ್ಲಿ 264 ರನ್ಗಳಿಗೆ ಆಲೌಟ್ ಮಾಡಿದರು.
54 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು ಕೇವಲ 262 ರನ್ಗಳಿಸಿ ಸರ್ವಪತನ ಕಂಡಿತು. ಅತ್ತ ದ್ವಿತೀಯ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡದ ಮುಂದಿದದ್ದು ಕೇವಲ 315 ರನ್ಗಳ ಗುರಿ.
ಅದರಂತೆ ನಾಲ್ಕನೇ ದಿನದಾಟದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡ ಬ್ಯಾಟರ್ಗಳು ಪ್ಯಾಟ್ ಕಮಿನ್ಸ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲೇ ಇಲ್ಲ. ಅಲ್ಲದೆ ಕೇವಲ 237 ರನ್ಗಳಿಗೆ ಆಲೌಟ್ ಆಗುವ ಮೂಲಕ 79 ರನ್ಗಳಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಬರೋಬ್ಬರಿ 27 ವರ್ಷಗಳೇ ಕಳೆದಿವೆ. ಅಂದರೆ 1995-96 ರಲ್ಲಿ ವಾಸಿಂ ಅಕ್ರಮ್ ನೇತೃತ್ವದಲ್ಲಿ ಪಾಕ್ ಪಡೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಇದಾದ ಬಳಿಕ ಒಮ್ಮೆಯೂ ಸರಣಿ ಗೆದ್ದಿಲ್ಲ ಎಂಬುದು ವಿಶೇಷ.
ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಆಡಿದ ಕೊನೆಯ 16 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡವು ಸತತ ಸೋಲನುಭವಿಸಿದೆ. ಅಂದರೆ ಗೆಲುವು ಇರಲಿ, ಒಂದೇ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಕೂಡ ಸಾಧ್ಯವಾಗಿಲ್ಲ. ಇದೀಗ 3 ಪಂದ್ಯಗಳ ಸರಣಿಯ 2 ಮ್ಯಾಚ್ಗಳಲ್ಲಿ ಪಾಕ್ ಪಡೆ ಸೋಲನುಭವಿಸಿದೆ. ಇನ್ನು ಮೂರನೇ ಪಂದ್ಯವು ಸಿಡ್ನಿಯಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್ , ಜೋಶ್ ಹ್ಯಾಝಲ್ವುಡ್.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಪಾಕಿಸ್ತಾನ್ ಪ್ಲೇಯಿಂಗ್ 11: ಇಮಾಮ್-ಉಲ್-ಹಕ್ , ಅಬ್ದುಲ್ಲಾ ಶಫೀಕ್, ಶಾನ್ ಮಸೂದ್ (ನಾಯಕ), ಬಾಬರ್ ಆಝಂ , ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ, ಶಾಹೀನ್ ಅಫ್ರಿದಿ, ಹಸನ್ ಅಲಿ , ಮೀರ್ ಹಂಝ, ಅಮೀರ್ ಜಮಾಲ್, ಸಾಜಿದ್ ಖಾನ್.