ಈ ವರ್ಷದ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (Australia and Afghanistan) ನಡುವಿನ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ತಂಡ ಹಿಂದೆ ಸರಿದಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಪ್ರಮುಖ ಕಾರಣ ತಾಲಿಬಾನ್ (Taliban) ಸರ್ಕಾರ. ವಾಸ್ತವವಾಗಿ ಅಫ್ಘಾನಿಸ್ತಾನದಲ್ಲಿ ಹೊರಡಿಸಲಾದ ತಾಲಿಬಾನ್ ಆದೇಶದ ಪ್ರಕಾರ, ಅಲ್ಲಿ ಮಹಿಳೆಯರು ಮತ್ತು ಹುಡುಗಿಯರ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೇ ವಿಷಯ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ವಿಶ್ವದಾದ್ಯಂತ ಕ್ರೀಡೆಗಳಲ್ಲಿ ಮಹಿಳೆಯರನ್ನು ಉತ್ತೇಜಿಸಲು ಸತತವಾಗಿ ಪ್ರಯತ್ನಿಸುತ್ತಿರುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಹೀಗಾಗಿ ಅಫ್ಘಾನಿಸ್ತಾನ ಸರ್ಕಾರದ ಈ ನಡೆಯನ್ನು ವಿರೋಧಿಸುವುದರೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಹಿಂದೆ ಸರಿದಿದೆ.
ಈ ಮುಂಚೆ ನಿಗಧಿಪಡಿಸಿದಂತೆ ಮಾರ್ಚ್ 2023 ರಲ್ಲಿ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿತ್ತು. ಈ ಸರಣಿಯನ್ನು ಯುಎಇಯಲ್ಲಿ ಆಡಲು ತೀರ್ಮಾನಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾ ಸರ್ಕಾರ ಮತ್ತು ಅದರ ಮಧ್ಯಸ್ಥಗಾರರನ್ನು ಸಂಪರ್ಕಿಸಿದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ಈ 3 ಪಂದ್ಯಗಳ ಸರಣಿಯಲ್ಲಿ ಆಡದಿರಲು ನಿರ್ಧರಿಸಿದೆ.
Hockey World Cup 2023: 16 ತಂಡ, 18 ದಿನ, 44 ಪಂದ್ಯ; ಹಾಕಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ತನ್ನ ಹೇಳಿಕೆಯಲ್ಲಿ ತಾಲಿಬಾನ್‌ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿಷೇಧವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ‘ಕ್ರಿಕೆಟ್ ಆಸ್ಟ್ರೇಲಿಯಾ ಇಂತಹ ವಿಷಯಗಳನ್ನು ವಿರೋಧಿಸುತ್ತದೆ ಮತ್ತು ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಕಂಡಿಸುವ ಕೆಲಸವನ್ನು ಯಾವಾಗಲು ಮುಂದುವರಿಸುತ್ತದೆ. ನಮ್ಮ ಈ ನಿರ್ಧಾರವನ್ನು ಒಪ್ಪಿಕೊಂಡು ಬೆಂಬಲಿಸಿದ ಆಸ್ಟ್ರೇಲಿಯಾ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿಕೊಂಡಿದೆ.
ಮಹಿಳಾ ಕ್ರಿಕೆಟ್ ತಂಡ ಇಲ್ಲದಿರುವ ಐಸಿಸಿಯ ಪೂರ್ಣ ಸದಸ್ಯತ್ವ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನ ಕೂಡ ಸೇರಿದೆ. ಇದಲ್ಲದೇ, ಐಸಿಸಿಯ ಪೂರ್ಣ ಸದಸ್ಯತ್ವದಲ್ಲಿ ಸೇರ್ಪಡೆಗೊಂಡ ಮೊದಲ ದೇಶ ಇದಾಗಿದ್ದು, ಶನಿವಾರದಿಂದ ಆರಂಭವಾಗಲಿರುವ ಮಹಿಳೆಯರ ಅಂಡರ್-19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಮಹಿಳಾ ತಂಡ ಆಡುತ್ತಿಲ್ಲ.
ಅಫ್ಘಾನಿಸ್ತಾನ ಸರ್ಕಾರದ ಬಗ್ಗೆ ಮಾತನಾಡಿರುವ ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್, ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕಳವಳಕಾರಿಯಾಗಿದೆ. ಐಸಿಸಿ ಸದಸ್ಯ ರಾಷ್ಟ್ರಗಳ ಮುಂದಿನ ಸಭೆಯಲ್ಲಿ ನಾವು ಇದನ್ನು ಪರಿಗಣಿಸುತ್ತೇವೆ. ಸದ್ಯಕ್ಕೆ ಈ ಇಡೀ ವಿಷಯದ ಮೇಲೆ ನಮ್ಮ ಕಣ್ಣು ನೆಟ್ಟಿದೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Thu, 12 January 23