
ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (Women’s World Cup) ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ಮಹಿಳಾ ತಂಡ (Australia women’s Team) ಲೀಗ್ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಆಸೀಸ್ ತಂಡದ ಇಬ್ಬರು ಮಹಿಳಾ ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ವಾಸ್ತವವಾಗಿ ಇಂದೋರ್ನ ಹೊಳ್ಕರ್ ಮೈದಾನದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡುವ ಸಲುವಾಗಿ ಆಸೀಸ್ ಮಹಿಳಾ ತಂಡ ಇಂದೋರ್ನ ಹೋಟೆಲ್ವೊಂದರಲ್ಲಿ ಉಳಿದುಕೊಂಡಿದೆ. ಈ ವೇಳೆ ತಂಡದ ಇಬ್ಬರು ಆಟಗಾರ್ತಿಯರು ಹೋಟೆಲ್ನಿಂದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ಕೀಟಲೆ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ.
ಇಂದೋರ್ನ ಹೋಟೆಲ್ ರಾಡಿಸನ್ ಬ್ಲೂನಿಂದ ಕೆಫೆಗೆ ಆಸೀಸ್ ತಂಡದ ಇಬ್ಬರು ಆಟಗಾರ್ತಿಯರು ನಡೆದುಕೊಂಡು ಹೋಗುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿದೆ. ಈ ಘಟನೆಯಿಂದ ಭಯಭೀತರಾದ ಇಬ್ಬರೂ ಆಟಗಾರ್ತಿಯರು ಕೂಡಲೇ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭದ್ರತಾ ಅಧಿಕಾರಿ ಡ್ಯಾನಿ ಸಿಮ್ಮನ್ಸ್ ಅವರ ದೂರಿನ ಆಧಾರದ ಮೇಲೆ, MIG ಪೊಲೀಸರು FIR ದಾಖಲಿಸಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಖಜ್ರಾನಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಆಟಗಾರ್ತಿಯರು ಕೆಫೆಯೊಂದಕ್ಕೆ ಹೋಗುತ್ತಿದ್ದರು. ಈ ವೇಳೆ ಬಿಳಿ ಶರ್ಟ್ ಮತ್ತು ಕಪ್ಪು ಕ್ಯಾಪ್ ಧರಿಸಿದ ಬೈಕರ್, ಈ ಇಬ್ಬರನ್ನು ಹಿಂಬಾಲಿಸಿ, ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆಯಿಂದ ಇಬ್ಬರೂ ಆಟಗಾರ್ತಿಯರು ಗಾಬರಿಗೊಂಡು ತಕ್ಷಣವೇ ಆಸ್ಟ್ರೇಲಿಯಾ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಇದೇ ವೇಳೆ ಆಟಗಾರ್ತಿರು ಅಸ್ವಸ್ಥರಾಗಿರುವುದನ್ನು ನೋಡಿ, ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಇವರಿಬ್ಬರ ನೆರವಿಗೆ ಬಂದಿದ್ದಾರೆ. ಇಬ್ಬರನ್ನು ವಿಚಾರಿಸಿದ ಆ ವ್ಯಕ್ತಿ, ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದ್ದಾರೆ. ವಿದೇಶಿ ಆಟಗಾರ್ತಿಯರ ಜೊತೆ ಈ ರೀತಿಯ ಅನುಚಿತ ವರ್ತನೆ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಮಾಡಿದೆ. ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗಿಳಿದಿದ್ದಾರೆ. ಈ ವೇಳೆ ದಾರಿಹೋಕರೊಬ್ಬರು ಶಂಕಿತನ ಬೈಕ್ ಸಂಖ್ಯೆಯನ್ನು ಗಮನಿಸಿದ್ದಾರೆ. ಅದರ ಆಧಾರದ ಮೇಲೆ ಆರೋಪಿ ಅಕೀಲ್ ಖಾನ್ನನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಹಿಮಾನಿ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಇನ್ನು ತನಿಖೆ ನಡೆಯುತ್ತಿದ್ದು, ಘಟನೆಯ ನಂತರ, ಆಸ್ಟ್ರೇಲಿಯಾ ತಂಡಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Sat, 25 October 25