IND vs AUS: ಗೆಲುವಿನೊಂದಿಗೆ ಆಸ್ಟ್ರೇಲಿಯಾಕ್ಕೆ ವಿದಾಯ ಹೇಳಿದ ರೋಹಿತ್, ಕೊಹ್ಲಿ
India Beats Australia in Final ODI: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1ರಿಂದ ಕಳೆದುಕೊಂಡರೂ, ಕೊನೆಯ ಪಂದ್ಯವನ್ನು ಸಿಡ್ನಿಯಲ್ಲಿ ಗೆದ್ದುಕೊಂಡಿತು. ರೋಹಿತ್ ಶರ್ಮಾ ಶತಕ (ಅಜೇಯ) ಮತ್ತು ವಿರಾಟ್ ಕೊಹ್ಲಿ ಅರ್ಧಶತಕ (ಅಜೇಯ) ಬಾರಿಸಿ 168 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಲು ಈ ಗೆಲುವು ಭಾರತಕ್ಕೆ ಅನಿವಾರ್ಯವಾಗಿತ್ತು. ಈ ಗೆಲುವಿನೊಂದಿಗೆ ಭಾರತ ಪ್ರವಾಸವನ್ನು ಸಮಾಪ್ತಿಗೊಳಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ (India vs Australia) ಏಕದಿನ ತಂಡಕ್ಕೆ ಸರಣಿ ಗೆಲ್ಲಲು ಸಾಧ್ಯವಾಗದಿದ್ದರೂ, ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಪ್ರವಾಸವನ್ನು ಅಂತ್ಯಗೊಳಿಸಿದೆ. ಮೊದಲೆರಡು ಪಂದ್ಯಗಳನ್ನು ಸೋತಿದ್ದ ಟೀಂ ಇಂಡಿಯಾ ಸರಣಿಯನ್ನು ಕಳೆದುಕೊಂಡಿತ್ತು. ಆದರೆ ಕ್ಲೀನ್ ಸ್ವೀಪ್ ಮುಜುಗರದಿಂದ ಪಾರಾಗಲು ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಅದರಂತೆ ತಂಡವನ್ನು ಈ ಮುಜುಗರದಿಂದ ಪಾರು ಮಾಡುವ ಜವಾಬ್ದಾರಿ ಹೊತ್ತಿದ್ದ ಇಬ್ಬರು ಮಾಜಿ ನಾಯಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) 168 ರನ್‌ಗಳ ಅಜೇಯ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ರೋಹಿತ್ ಅಜೇಯ ಶತಕ ಬಾರಿಸಿದರೆ, ಕೊಹ್ಲಿ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿದರು.
168 ರನ್‌ಗಳ ಜೊತೆಯಾಟ
ಸಿಡ್ನಿಯಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ ತನ್ನಲ್ಲೇ ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ರೋಹಿತ್ ಶರ್ಮಾ ಶತಕ ಮತ್ತು ಕೊಹ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ, ಎರಡನೇ ವಿಕೆಟ್‌ಗೆ 168 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ಫಲವಾಗಿ ಭಾರತ ತಂಡವು 38.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 237 ರನ್‌ಗಳ ಗುರಿ ಮುಟ್ಟಿತು. ಆದಾಗ್ಯೂ, ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು.
ಫ್ಯಾನ್ಸ್ ಕೇಳಿದ್ದನು ನೀಡಿದ ರೋಹಿತ್, ಕೊಹ್ಲಿ
ಈ ಸರಣಿಯ ಆರಂಭದಿಂದಲೂ ಎಲ್ಲರ ದೃಷ್ಟಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲಿತ್ತು. ಅಲ್ಲದೆ ಪ್ರತಿ ಪಂದ್ಯದಲ್ಲೂ ಅವರ ಪ್ರದರ್ಶನವು ಹೆಚ್ಚು ಚರ್ಚೆಯ ವಿಷಯವಾಗಿತ್ತು. ಪರಿಣಾಮವಾಗಿ, ಸರಣಿಯ ಫಲಿತಾಂಶಕ್ಕಿಂತ ಎರಡೂ ತಂಡಗಳ ಬ್ಯಾಟಿಂಗ್ ಪ್ರದರ್ಶನದ ಮೇಲೆ ಹೆಚ್ಚು ಗಮನವಿತ್ತು. ಅದಕ್ಕಾಗಿಯೇ, ಮೊದಲ ಎರಡು ಪಂದ್ಯಗಳಲ್ಲಿ ಸರಣಿಯ ಫಲಿತಾಂಶವನ್ನು ನಿರ್ಧರಿಸಲಾಗಿದ್ದರೂ, ಅಂತಿಮ ಪಂದ್ಯವು ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆಯನ್ನು ನೀಡಿತು. ಏಕೆಂದರೆ ವಿರಾಟ್ ಮತ್ತು ರೋಹಿತ್ ಶತಕದ ಜೊತೆಯಾಟ ನಡೆಸಿ ಪ್ರತಿಯೊಬ್ಬ ಅಭಿಮಾನಿಯ ಆಸೆಯನ್ನು ಈಡೇರಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದಿತ್ತಾದರೂ ಅಭಿಮಾನಿಗಳು ಬಯಸಿದ್ದನ್ನು ನೀಡುವಲ್ಲಿ ರೋಹಿತ್, ಕೊಹ್ಲಿ ಯಶಸ್ವಿಯಾದರು.
ಭಾರತಕ್ಕೆ ಉತ್ತಮ ಆರಂಭ
ಆಸ್ಟ್ರೇಲಿಯಾ ನೀಡಿದ 237 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಈ ಬಾರಿ, ನಾಯಕ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟ ನೀಡಿದರು. ಗಿಲ್ ಔಟಾದ ನಂತರ, ಹಿಂದಿನ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು. ಆದರೆ ಈ ಬಾರಿ, ಕೊಹ್ಲಿ ಅದು ಸಂಭವಿಸದಂತೆ ತಡೆದು ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ಅಲ್ಲಿಂದ, ಹಳೆಯ ದಿನಗಳನ್ನು ನೆನಪಿಸುವ ಈ ಇಬ್ಬರು ಅನುಭವಿಗಳು ಅದ್ಭುತ ಶತಕದ ಪಾಲುದಾರಿಕೆಯನ್ನು ರೂಪಿಸಿದರು.
IND vs AUS: ಶತಕಗಳ ಅರ್ಧಶತಕ ಪೂರೈಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ
19 ನೇ ಶತಕದ ಪಾಲುದಾರಿಕೆ
ಗೆಲುವಿನ ಸನಿಹದಲ್ಲಿದ್ದಾಗ, ರೋಹಿತ್ ತಮ್ಮ 33ನೇ ಏಕದಿನ ಶತಕ ಮತ್ತು ಆಸ್ಟ್ರೇಲಿಯಾದಲ್ಲಿ ಆರನೇ ಶತಕವನ್ನು ಪೂರೈಸಿದರು. ಇದೇ ವೇಳೆ ಕೊಹ್ಲಿ ತಮ್ಮ 75ನೇ ಅರ್ಧಶತಕವನ್ನು ಬಾರಿಸಿದರು. ಇಬ್ಬರೂ 170 ಎಸೆತಗಳಲ್ಲಿ 168 ರನ್‌ಗಳನ್ನು ಹಂಚಿಕೊಂಡು ಕೇವಲ 39 ಓವರ್‌ಗಳಲ್ಲಿ 9 ವಿಕೆಟ್‌ಗಳಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ರೋಹಿತ್ 121 ರನ್ (125 ಎಸೆತಗಳು, 13 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಕೊಹ್ಲಿ 74 ರನ್ (81 ಎಸೆತಗಳು, 7 ಬೌಂಡರಿಗಳು) ಗಳಿಸಿ ಅಜೇಯರಾಗಿ ಉಳಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಇಬ್ಬರ ನಡುವಿನ 19 ನೇ ಶತಕದ ಪಾಲುದಾರಿಕೆಯಾಗಿದೆ.
Published On - 3:56 pm, Sat, 25 October 25
