ಆಸ್ಟ್ರೇಲಿಯಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ: ದೇಶವೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ ಅಕೀಲ್ ಖಾನ್
Australia Women Cricketers Harassed in Indore: ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ವೇಳೆ ಇಂದೋರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ಕೆಫೆಗೆ ತೆರಳುತ್ತಿದ್ದ ಇಬ್ಬರು ಆಟಗಾರ್ತಿಯರಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಕೂಡಲೇ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಈ ಘಟನೆಯು ವಿಶ್ವಕಪ್ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ.

ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (Women’s World Cup) ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ಮಹಿಳಾ ತಂಡ (Australia women’s Team) ಲೀಗ್ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಆಸೀಸ್ ತಂಡದ ಇಬ್ಬರು ಮಹಿಳಾ ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ವಾಸ್ತವವಾಗಿ ಇಂದೋರ್ನ ಹೊಳ್ಕರ್ ಮೈದಾನದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡುವ ಸಲುವಾಗಿ ಆಸೀಸ್ ಮಹಿಳಾ ತಂಡ ಇಂದೋರ್ನ ಹೋಟೆಲ್ವೊಂದರಲ್ಲಿ ಉಳಿದುಕೊಂಡಿದೆ. ಈ ವೇಳೆ ತಂಡದ ಇಬ್ಬರು ಆಟಗಾರ್ತಿಯರು ಹೋಟೆಲ್ನಿಂದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ಕೀಟಲೆ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ.
ಆಟಗಾರ್ತಿಯರ ಜೊತೆ ಅನುಚಿತ ವರ್ತನೆ
ಇಂದೋರ್ನ ಹೋಟೆಲ್ ರಾಡಿಸನ್ ಬ್ಲೂನಿಂದ ಕೆಫೆಗೆ ಆಸೀಸ್ ತಂಡದ ಇಬ್ಬರು ಆಟಗಾರ್ತಿಯರು ನಡೆದುಕೊಂಡು ಹೋಗುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿದೆ. ಈ ಘಟನೆಯಿಂದ ಭಯಭೀತರಾದ ಇಬ್ಬರೂ ಆಟಗಾರ್ತಿಯರು ಕೂಡಲೇ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭದ್ರತಾ ಅಧಿಕಾರಿ ಡ್ಯಾನಿ ಸಿಮ್ಮನ್ಸ್ ಅವರ ದೂರಿನ ಆಧಾರದ ಮೇಲೆ, MIG ಪೊಲೀಸರು FIR ದಾಖಲಿಸಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಖಜ್ರಾನಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಆಟಗಾರ್ತಿಯರು ಕೆಫೆಯೊಂದಕ್ಕೆ ಹೋಗುತ್ತಿದ್ದರು. ಈ ವೇಳೆ ಬಿಳಿ ಶರ್ಟ್ ಮತ್ತು ಕಪ್ಪು ಕ್ಯಾಪ್ ಧರಿಸಿದ ಬೈಕರ್, ಈ ಇಬ್ಬರನ್ನು ಹಿಂಬಾಲಿಸಿ, ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆಯಿಂದ ಇಬ್ಬರೂ ಆಟಗಾರ್ತಿಯರು ಗಾಬರಿಗೊಂಡು ತಕ್ಷಣವೇ ಆಸ್ಟ್ರೇಲಿಯಾ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಆರೋಪಿ ಅಕೀಲ್ ಖಾನ್ ಬಂಧನ
ಇದೇ ವೇಳೆ ಆಟಗಾರ್ತಿರು ಅಸ್ವಸ್ಥರಾಗಿರುವುದನ್ನು ನೋಡಿ, ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಇವರಿಬ್ಬರ ನೆರವಿಗೆ ಬಂದಿದ್ದಾರೆ. ಇಬ್ಬರನ್ನು ವಿಚಾರಿಸಿದ ಆ ವ್ಯಕ್ತಿ, ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದ್ದಾರೆ. ವಿದೇಶಿ ಆಟಗಾರ್ತಿಯರ ಜೊತೆ ಈ ರೀತಿಯ ಅನುಚಿತ ವರ್ತನೆ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಮಾಡಿದೆ. ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗಿಳಿದಿದ್ದಾರೆ. ಈ ವೇಳೆ ದಾರಿಹೋಕರೊಬ್ಬರು ಶಂಕಿತನ ಬೈಕ್ ಸಂಖ್ಯೆಯನ್ನು ಗಮನಿಸಿದ್ದಾರೆ. ಅದರ ಆಧಾರದ ಮೇಲೆ ಆರೋಪಿ ಅಕೀಲ್ ಖಾನ್ನನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಹಿಮಾನಿ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಇನ್ನು ತನಿಖೆ ನಡೆಯುತ್ತಿದ್ದು, ಘಟನೆಯ ನಂತರ, ಆಸ್ಟ್ರೇಲಿಯಾ ತಂಡಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Sat, 25 October 25
