ಢಾಕಾದ ಶೇರ್-ಎ-ಬಾಂಗ್ಲಾ (Shere Bangla Stadium) ಸ್ಟೇಡಿಯಂನಲ್ಲಿ ಶನಿವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 4 ವಿಕೆಟ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ (New Zealand vs Bangladesh) ತನ್ನ ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಕಿವೀಸ್ ಇನ್ನಿಂಗ್ಸ್ಗೆ ಜೀವ ತುಂಬಿದ ಗ್ಲೆನ್ ಫಿಲಿಪ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ (Glenn Phillips and Mitchell Santner ) ಅವರ 68 ರನ್‌ಗಳ ಜೊತೆಯಾಟ ಕಿವೀಸ್ ತಂಡವು ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲಲು ನೆರವಾಯಿತು. ಇದರೊಂದಿಗೆ ಎರಡು ಟೆಸ್ಟ್ ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶದಲ್ಲಿ ನ್ಯೂಜಿಲೆಂಡ್‌ನ ಗೆಲುವಿನ ಬರಗಾಲವೂ ಕೊನೆಗೊಂಡಿದೆ.
ವಾಸ್ತವವಾಗಿ 2008ರಲ್ಲಿ ಬಾಂಗ್ಲಾದಲ್ಲಿ ನಡೆದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಕೊನೆಯ ಬಾರಿ ಬಾಂಗ್ಲಾದೇಶವನ್ನು ಸೋಲಿಸಿತ್ತು. 15 ವರ್ಷಗಳ ಹಿಂದೆ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ಚಟ್ಟೋಗ್ರಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು. ಆ ಗೆಲುವಿನ ನಾಯಕ ಕ್ಯಾಪ್ಟನ್ ವೆಟ್ಟೋರಿ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೆಟ್ಟೋರಿ, ಬೌಲಿಂಗ್ನಲ್ಲಿ 9 ವಿಕೆಟ್ ಪಡೆದರು. ಆ ಬಳಿಕ ಬ್ಯಾಟ್‌ನಲ್ಲೂ ಪ್ರಮುಖ ಕೊಡುಗೆ ನೀಡಿದ್ದ ವೆಟ್ಟೋರಿ ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 76 ರನ್ ಬಾರಿಸಿದ್ದರು. ಈ ಅದ್ಭುತ ಪ್ರದರ್ಶನಕ್ಕಾಗಿ ವೆಟ್ಟೋರಿ ಈ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಗೆದ್ದಿದ್ದರು.
BAN vs NZ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ
2008 ರಿಂದ, ಬಾಂಗ್ಲಾದೇಶದಲ್ಲಿ ಇಂದಿನ ಪಂದ್ಯ ಸೇರಿದಂತೆ ನ್ಯೂಜಿಲೆಂಡ್ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದಕ್ಕೂ ಮುನ್ನ 3 ಪಂದ್ಯಗಳು ಡ್ರಾ ಆಗಿದ್ದರೆ, ಒಂದು ಪಂದ್ಯದಲ್ಲಿ ಕಿವೀಸ್ ತಂಡ ಬಾಂಗ್ಲಾದೇಶ ವಿರುದ್ಧ ಸೋತಿತ್ತು. 2008ರಲ್ಲಿ ನಡೆದ ಸರಣಿಯ ಎರಡನೇ ಪಂದ್ಯ ಡ್ರಾ ಆಗಿತ್ತು. ಆದರೆ 2023 ರ ಈ ಪ್ರವಾಸದಲ್ಲಿ, ನ್ಯೂಜಿಲೆಂಡ್ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಸೋತಿತ್ತು. ಈ ಪಂದ್ಯದಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡವನ್ನು 150 ರನ್‌ಗಳಿಂದ ಸೋಲಿಸಿತ್ತು.
ಇನ್ನು ಢಾಕಾ ಟೆಸ್ಟ್ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ಗೆ ಅಂತಿಮವಾಗಿ 137 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ ಕಿವೀಸ್ ಆರಂಭದಲ್ಲೇ ಎಡವಿತ್ತು. ಹೀಗಾಗಿ ಕಿವೀಸ್ ತಂಡ 69 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಗ್ಲೆನ್ ಫಿಲಿಪ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರ ನಡುವೆ 68 ರನ್‌ಗಳ ಜೊತೆಯಾಟವಿತ್ತು. ಫಿಲಿಪ್ಸ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ